ಅಧಿಕಾರಿಗಳ ವಿರುದ್ಧ ಸಂಸದ ಗರಂ

7
ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲ: ಗದ್ದಿಗೌಡರ

ಅಧಿಕಾರಿಗಳ ವಿರುದ್ಧ ಸಂಸದ ಗರಂ

Published:
Updated:
ಬಾಗಲಕೋಟೆಯ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು. ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ಜಿಲ್ಲಾಧಿಕಾರಿ ಶಾಂತಾರಾಮ್ ಇದ್ದಾರೆ.

ಬಾಗಲಕೋಟೆ: ‘ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸರಿಯಾಗಿ ಅನುಷ್ಠಾನಕ್ಕೆ ತರದೇ, ಜನರು ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಏನು ಯೋಜನೆ ಜಾರಿಗೊಳಿಸಿದೆ ಎಂದು ಪ್ರಶ್ನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಲು ಅಧಿಕಾರಿಗಳೇ ಕಾರಣ’ ಎಂದು ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ನವನಗರದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಾಗಿರುವ ಕೆಲಸಗಳ ಮಾಹಿತಿ ಇಲ್ಲದೇ ಸಭೆಗೆ ಬರುತ್ತಿದ್ದಾರೆ. ಮಾಹಿತಿ ಕೇಳಿದರೆ ಗುರಿ ಇಷ್ಟು ಸಾಧನೆ ಇಷ್ಟು ಎಂದು ಹೇಳುತ್ತಾರೆ. ಅವರಿಗೆ ಯೋಜನೆಗಳ ಮಾಹಿತಿ ಗೊತ್ತಿರುವುದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಬಾಗಲಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಷ್ಟು ಜನರು ಜಾಬ್ ಕಾರ್ಡ್ ಹೊಂದಿದ್ದಾರೆ ಎಂದು ಕೇಳಿದರೂ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸಂಸದ ಗದ್ದಿಗೌಡರ, ‘ನಿಮ್ಮ ವ್ಯಾಪ್ತಿಯಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ ಅಂದರೆ ಹೇಗೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಂಗಾರಪ್ಪನರ್ ವಿರುದ್ಧ ಕಿಡಿಕಾರಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಜಿಯೋಟ್ಯಾಗ್‌ ಮಾಡಿಲ್ಲದಕ್ಕೆ ಜೂ.30 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಬೀಳಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಜಿಯೋ ಟ್ಯಾಗ್‌ ಮಾಡದಿರುವುದಕ್ಕೆ ಪಾನ್‌ಕಾರ್ಡ್‌ ಇಲ್ಲದ ಕಾರಣ ನೀಡಲು ಮುಂದಾದರು. ಈ ವೇಳೆ ಜಿಲ್ಲಾಧಿಕಾರಿ ಶಾಂತಾರಾಮ್, ‘ನೀವು ನಮಗೆ ಸಮಜಾಯಿಷಿ ನೀಡುವುದು ಬೇಡ. ನಮ್ಮ ಜೊತೆ ವಾಗ್ವಾದಕ್ಕೆ ಬರಬೇಡಿ, ನಿಮ್ಮ ಕಚೇರಿಗೆ ಬಂದು ಎಲ್ಲ ಕಡತಗಳನ್ನು ಪರಿಶೀಲಿಸಿದರೆ ನಿಮ್ಮ ಅಸಲಿಯತ್ತು ಹೊರಗೆ ಬರುತ್ತದೆ’ ಎಂದ ಅವರು, ‘ಜಿಯೋ ಟ್ಯಾಗ್‌ ಮಾಡಿಲ್ಲ ಎಂಬ ಕಾರಣ ನೀಡಿ ನಗರಸಭೆ ಮತ್ತು ಪುರಸಭೆ ಆಯುಕ್ತರಿಗೆ ಶೋಕಾಸ್ ನೋಟಿಸ್ ನೀಡಿ’ ಎಂದು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಜಿಲ್ಲೆಯ ಬೀಳಗಿ, ಬಾದಾಮಿ, ಹುನಗುಂದ ಹಾಗೂ ಬಾಗಲಕೋಟೆ ತಾಲ್ಲೂಕುಗಳ ರಸ್ತೆಯ ನಿರ್ವಹಣೆಗೆ ಮಾತ್ರ ಅನುದಾನ ಬಂದಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಿಆರ್‌ಡಿಯ ಮುಖ್ಯ ಎಂಜಿನಿಯರ್‌ ಹೇಳಿದರು. ಈ ಯೋಜನೆ ಕೇಂದ್ರ ಸರ್ಕಾರದ್ದಾಗಿದೆ. ಉಳಿದ ತಾಲ್ಲೂಕುಗಳಿಗೆ ಅನುದಾನ ಏಕೆ ಬಂದಿಲ್ಲ ಎಂದು ಸಂಸದ ಗದ್ದಿಗೌಡರ ಪ್ರಶ್ನಿಸಿದರು. ಈ ಬಾರಿ ಎಲ್ಲ ತಾಲ್ಲೂಕುಗಳಿಗೆ ಅನುದಾನ ಬರುವಂತೆ ಮಾಡುವುದು ನಿಮ್ಮ ಜವಾಬ್ದಾರಿ ಎಂದು ಅಧಿಕಾರಿಗೆ ಸೂಚಿಸಿದರು.

ಸ್ವಚ್ಛ ಭಾರತ ಯೋಜನೆಯಲ್ಲಿ ಜಿಲ್ಲಾಧ್ಯಂತ ಸಾಮೂಹಿಕ ಶೌಚಾಲಯ ಹಾಗೂ ವೈಯಕ್ತಿಕ ಶೌಚಾಲಯಗಳು ಸೇರಿ 45 ಸಾವಿರ ಶೌಚಾಲಯಗಳು ನಿರ್ಮಿಸಿದರೆ ಜಿಲ್ಲೆ ಬಯಲು ಶೌಚಮುಕ್ತವಾಗಿ ಘೋಷಣೆಯಾಗಲಿದೆ ಎಂದು ಜಿಲ್ಲಾ ಪಂಚಾಯ್ತಿಯ ಯೋಜನಾ ನಿರ್ದೇಶಕ ವಿ.ಎಸ್.ಹಿರೇಮಠ ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ಜಿಲ್ಲಾ ಪಂಚಾಯ್ತಿಯ ಕಾರ್ಯದರ್ಶಿ ಅಮರೇಶ ನಾಯಕ್ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಕೇಂದ್ರದ ಯೋಜನೆಗಳ ಬಗ್ಗೆ ಗೊಂದಲಗಳಿದ್ದರೆ ಕೂಡಲೇ ನನ್ನ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವ ಮೂಲಕ ಜನರಿಗೆ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಪಿ.ಸಿ.ಗದ್ದಿಗೌಡರ, ಸಂಸದ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !