-ಮಹೇಶ ಮನ್ನಯ್ಯನವರಮಠ
ಮಹಾಲಿಂಗಪುರ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದ ರನ್ನಬೆಳಗಲಿ ಪಟ್ಟಣವನ್ನು ಕಳೆದ ಎರಡು ವರ್ಷಗಳ ಹಿಂದೆ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಮುಗಳಖೋಡ, ನಾಗರಾಳ, ಅಕ್ಕಿಮರಡಿ ಗ್ರಾಮಗಳ ಜತೆಗೆ ರನ್ನಬೆಳಗಲಿ ಪಟ್ಟಣವನ್ನು 2021ರ ಮೇ 31ರಂದು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸರ್ಕಾರ ಸೇರ್ಪಡೆ ಮಾಡಿದೆ. ಮಹಾಲಿಂಗಪುರ ಪೊಲೀಸ್ ಠಾಣೆಯಿಂದ ರನ್ನ ಬೆಳಗಲಿ ಕೇವಲ 5 ಕಿ.ಮೀ. ದೂರವಿದೆ. ಆದರೆ, ಅಪರಾಧ ಪ್ರಕರಣಗಳನ್ನು ದಾಖಲಿಸಲು ಇಲ್ಲಿನ ಜನತೆ ಈಗ 15 ಕಿ.ಮೀ. ದೂರದ ಮುಧೋಳ ಪೊಲೀಸ್ ಠಾಣೆಗೆ ಅಲೆದಾಡಬೇಕಿದೆ.
ಗ್ರಾಮ ಪಂಚಾಯ್ತಿಯಿಂದ ರನ್ನಬೆಳಗಲಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದೆ. 20 ಸಾವಿರಕ್ಕಿಂತ ಹೆಚ್ಚು ಜನಸಾಂದ್ರತೆ ಹೊಂದಿದೆ. ಮಹಾಲಿಂಗಪುರಕ್ಕೆ ಹೊಂದಿಕೊಂಡೇ ರನ್ನಬೆಳಗಲಿ ಪಟ್ಟಣ ರೂಪುಗೊಂಡಿದೆ.
ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತ ನಡೆಯುತ್ತಿದ್ದು, ಪ್ರಕರಣ ದಾಖಲಿಸಲು ಸಾರ್ವಜನಿಕರು ಹಾಗೂ ಘಟನಾ ಸ್ಥಳಕ್ಕೆ ಬರಬೇಕಾದ ಪೊಲೀಸರು ಹೈರಾಣಾಗಿದ್ದಾರೆ.
ರಬಕವಿ-ಬನಹಟ್ಟಿ ತಾಲ್ಲೂಕು ರಚನೆಯಾದ ನಂತರ ಮುಧೋಳ ತಾಲ್ಲೂಕಿನಿಂದ ಮಹಾಲಿಂಗಪುರ ಬೇರ್ಪಟ್ಟಿದ್ದರಿಂದ ಹಾಗೂ ರನ್ನಬೆಳಗಲಿ ಪಟ್ಟಣ ಮುಧೋಳ ತಾಲ್ಲೂಕಿನಲ್ಲೇ ಉಳಿದಿದ್ದರಿಂದ ರನ್ನಬೆಳಗಲಿಯನ್ನು ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ನೂತನ ಮುಧೋಳ ಗ್ರಾಮೀಣ ಪೊಲೀಸ್ ಠಾಣೆ ಸ್ಥಾಪಿಸಿ ರನ್ನಬೆಳಗಲಿಯನ್ನು ಆ ಠಾಣೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡುವ ಪ್ರಸ್ತಾವನೆ ಇದೆಯಾದರೂ ಕಾರ್ಯಗತಗೊಂಡಿಲ್ಲ.
ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲದೆ, 28ಕ್ಕಿಂತಲೂ ಹೆಚ್ಚು ಸಂಘಟನೆಗಳು ಕ್ರಿಯಾಶೀಲವಾಗಿವೆ. ಅಲ್ಲದೆ, ಅಪರಾಧ ಪ್ರಕರಣಗಳು ಹೆಚ್ಚು ನಡೆಯುತ್ತವೆ. ಈ ಮಧ್ಯೆ ಹೆಚ್ಚುವರಿಯಾಗಿ ರನ್ನಬೆಳಗಲಿ ಪಟ್ಟಣ ನೋಡಿಕೊಳ್ಳುವುದು ಅನಿವಾರ್ಯವಾಗಿದೆ.
‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರನ್ನಬೆಳಗಲಿ ಪಟ್ಟಣವನ್ನು ಮೊದಲಿದ್ದಂತೆ ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಒಳಿತು. ಅಪರಾಧ ಪ್ರಕರಣಗಳಿಗೆ ಮುಧೋಳಕ್ಕೆ ತೆರಳುವುದು ಸಾರ್ವಜನಿಕರಿಗೆ ಹೊರೆಯಾಗಿದೆ’ ಎನ್ನುತ್ತಾರೆ ರನ್ನಬೆಳಗಲಿ ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದುಗೌಡ ಪಾಟೀಲ.
ಮುಧೋಳ ತಾಲ್ಲೂಕು ವ್ಯಾಪ್ತಿಯ ರನ್ನಬೆಳಗಲಿ ಪಟ್ಟಣ ಪ್ರಕರಣ ದಾಖಲಿಸಲು ದೂರದ ಮುಧೋಳ ಠಾಣೆಗೆ ಹೋಗಬೇಕಾದ ಪರಿಸ್ಥಿತಿ ಪಟ್ಟಣವನ್ನು ಸಮೀಪದ ಮಹಾಲಿಂಗಪುರ ಠಾಣೆ ವ್ಯಾಪ್ತಿಗೆ ಸೇರಿಸಲು ಒತ್ತಾಯ
ರನ್ನಬೆಳಗಲಿಯ ಕಂದಾಯ ಭೂಮಿ ಮುಧೋಳಕ್ಕೆ ಸೇರಿದೆ. ಈ ಪಟ್ಟಣಕ್ಕೆ ಶೀಘ್ರವೇ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಲಾಗುವುದು. ಈಗಿನ ಸಮಸ್ಯೆ ಕುರಿತು ಎಸ್ಪಿ ಅವರೊಂದಿಗೆ ಚರ್ಚಿಸಲಾಗಿದೆ -ಅಯ್ಯನಗೌಡ ಪಾಟೀಲ ಸಿಪಿಐ ಮುಧೋಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.