ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾದಗಿ: ನೂರ್ ಅಲಿ ಶಹಾಬಾಬಾ ಉರುಸ್ ನಾಳೆಯಿಂದ

ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಭಾಗಿ
ಸಿಕಂದರ ಆರ್. ಬಾವಾಖಾನ
Published 3 ಮಾರ್ಚ್ 2024, 4:40 IST
Last Updated 3 ಮಾರ್ಚ್ 2024, 4:40 IST
ಅಕ್ಷರ ಗಾತ್ರ

ಕಲಾದಗಿ: ಘಟಪ್ರಭೆ ತಟದ ಪ್ರಮುಖ ವಾಣಿಜ್ಯ ತಾಣ ಎನಿಸಿದ ಕಲಾದಗಿಯಲ್ಲಿ ಸೂಫಿ ಸಂತ ಹಜರತ್ ನೂರ್ ಅಲಿ ಶಹಾ ಬಾಬಾ ಅವರ 82ನೇ ಉರುಸ್ ಮಾರ್ಚ್‌ 4 ರಿಂದ 6ವರೆಗೆ ನಡೆಯಲಿದೆ.

ಮಾರ್ಚ್‌ 4 ರಂದು ಗಂಧದ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಮಾ.5 ರಂದು ಉರುಸ್ ಕಾರ್ಯಕ್ರಮ ನಡೆಯಲಿದ್ದು, 6 ರಂದು ಬೆಳಿಗ್ಗೆ ಜಿಯಾರತ್ ಕಾರ್ಯಕ್ರಮದೊಂದಿಗೆ ಉರುಸ್ ಸಂಪನ್ನಗೊಳ್ಳಲಿದೆ.

ಬಾಗಲಕೋಟೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳ ಸಾವಿರಾರು ಜನ ನೂರ್ ಅಲಿ ಶಹಾ ಬಾಬಾ ಅವರ ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ.

ಸೂಫಿ ಸಂತ ಹಜರತ್ ನೂರ್‌ಅಲಿ ಶಹಾ ಬಾಬಾ ಅವರು 1941ರಲ್ಲಿ ಕಲಾದಗಿ ಗ್ರಾಮಕ್ಕೆ ಬಂದು ನೆಲೆಸಿದರು. ನಾರಾಯಣ, ತಿಮ್ಮಾಜೀ, ಗುಲಾಮ್, ನೂರ್ ಅಲಿ, ಮಹಮ್ಮದ್ ಬಿಜಾಪೂರ ಅವರನ್ನು ಭೇಟಿಯಾಗಿ ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು. ನಂತರ ಆರು ತಿಂಗಳ ಬಳಿಕ ಸಂಜೀವಪ್ಪ ಅವರಿಗೆ ಸೈಯದ್ ಅಹಮ್ಮದ್ ಅಲಿ ಶಾ ಎಂಬ ಹೆಸರು ಕೊಟ್ಟು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು 1942 ಮೊಹರಂ ಮಾಸದ 22ನೇ ದಿನ ದೈವಾಧೀನರಾದರು.

ಹಲವು ವರ್ಷಗಳ ಹಿಂದೆ ನೆಲೆಸಿದ್ದ ಹಜರತ್ ನೂರ್‌ಅಲಿ ಶಹಾ ಬಾಬಾರವರು ತಮ್ಮ ಪವಾಡಗಳನ್ನು ಇಲ್ಲಿನ ಜನರನ್ನು ಉದ್ದರಿಸುತ್ತಾ ದೈವ ನಂಬಿ ಬಂದವರಿಗೆ ದೇವರಾಗಿ , ಮೌಢ್ಯ ಕಂಡು ಬಂದವರಿಗೆ ಮೌನಿಯಾಗಿ ಭಕ್ತ ವರ್ಗವನ್ನು ಸಂತೈಸಿದ್ದಾರೆ.

ಬಾಬಾರವರ ಕುರಿತಾದ ಅನೇಕ ಪವಾಡಗಳು ಪ್ರಚಲಿತದಲ್ಲಿವೆ. ಅದರಲ್ಲಿ ನದಿ ದಡದಲ್ಲಿಯೇ ಜನರೊಂದಿಗೆ ಇದ್ದ ಬಾಬಾ, ದೋಣಿ, ನಾವಿಕನ ನೆರವಿಲ್ಲದೇ ಕ್ಷಣಾರ್ಧದಲ್ಲಿ ನದಿ ದಾಟಿ ಕುಂದರಗಿ ಚಹಾದ ಅಂಗಡಿಯಲ್ಲಿ ಕುಳಿತದ್ದೂ ಒಂದು ದೊಡ್ಡ ಪವಾಡ.

ಉರುಸ್‌ಗೆ ಬರುವ ಭಕ್ತರ ಮನರಂಜನೆಗಾಗಿ ಉರುಸ್  ದಿನ ರಾತ್ರಿ 9 ಗಂಟೆಗೆ ಅಂತರರಾಷ್ಟ್ರೀಯ ಖ್ಯಾತಿಯ ಕವ್ವಾಲಿ ಗಾಯಕರಾದ ಗುಜರಾತನ ಮುರಾದ್ ಆತಿಶ್ ಹಾಗೂ ಮುಂಬೈ ಅಜೀಮ್ ನಾಜಂ ಚಿಸ್ತಿ ನಡುವೆ ತುರುಸಿನ ಸವಾಲ್- ಜವಾಬ್ ನಡೆಯಲಿದೆ.

ಕಲೆ ಮತ್ತು ಸಾಂಸ್ಕೃತಿಕ ರಕ್ಷಣಾ ವೇದಿಕೆ ವತಿಯಿಂದ ರಜಾಕ ನದಾಫ್ ವಿರಚಿತ ‘ಬಡವರ ಕಣ್ಣೀರಿಗೆ ಕೊನೆಯಿಲ್ಲವೇ’ ನಾಟಕ ಪ್ರದರ್ಶನಗೊಳ್ಳಲಿದೆ. ಉರುಸ್ ಅಂಗವಾಗಿ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ  ನಡೆಯಲಿದೆ.

ಅನೇಕ ರೋಗಗಳಿಗೆ ಮದ್ದು ಕೊಳದ ನೀರು
ಬಾಬಾ ದೈವಾಧೀನರಾದ ನಂತರ ಅವರ ಕರ್ತೃ ಗದ್ದುಗೆ ನಿರ್ಮಿಸಿ ನಂತರ ತಡೆಗೋಡೆ ಕಟ್ಟಲು ಕಲ್ಲಿನ ಅವಶ್ಯಕತೆ ಉಂಟಾಯಿತು. ಗದ್ದುಗೆ ಹತ್ತಿರದಲ್ಲಿ ಕಲ್ಲಿನ ಬಂಡೆಗಳಿದ್ದವು. ನಿರಂತರವಾಗಿ ಮೂರು ದಿನ ಸುರಂಗ ಕೊರೆಯಲಾಯಿತು. ಆದರೆ ನಾಲ್ಕನೇ ದಿನ ನೀರು ಬಂದಿತು ಆ ನೀರು ಕುಡಿಯುವುದರಿಂದ ಅನೇಕ ರೋಗಗಳು ಗುಣಮುಖವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT