ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿ ಗಂಭೀರವಾಗಿದೆ ಆಮ್ಲಜನಕ ಕೊಡಿಸಿ: ಸಚಿವ ಕತ್ತಿ ಎದುರು ಡಿಎಚ್‌ಒ ಅಳಲು

Last Updated 5 ಮೇ 2021, 11:41 IST
ಅಕ್ಷರ ಗಾತ್ರ

ಬಾಗಲಕೋಟೆ: 'ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ನಿತ್ಯ ಸರಾಸರಿ 18 ಕಿಲೋ ಲೀಟರ್ ಆಮ್ಲಜನಕದ ಬೇಡಿಕೆ ಇದೆ. ಆದರೆ ಎಂಟು ಕಿಲೋ ಲೀಟರ್ ಮಾತ್ರ ಪೂರೈಕೆ ಆಗುತ್ತಿದೆ. ಪರಿಸ್ಥಿತಿ ಗಂಭೀರವಾಗಿದೆ. ಕೈ ಮೀರುವ ಮುನ್ನ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಿ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಎದುರು ಡಿಎಚ್‌ಒ ಡಾ.ಅನಂತ ದೇಸಾಯಿ ಅಲವತ್ತುಕೊಂಡರು.

ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಬುಧವಾರ ಸಚಿವ ಉಮೇಶ ಕತ್ತಿ ಮೊದಲ ಬಾರಿಗೆ ಬಾಗಲಕೋಟೆಗೆ ಭೇಟಿ ನೀಡಿದರು. ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಡಿಎಚ್‌ಒ ವಾಸ್ತವ ಸ್ಥಿತಿ ಬಿಚ್ಚಿಟ್ಟರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, 'ಮಂಗಳವಾರ ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆಗಿತ್ತು. ಇನ್ನು ಅರ್ಧ ಗಂಟೆ ಕಳೆದಿದ್ದರೆ ದುರಂತವೇ ಘಟಿಸುತ್ತಿತ್ತು. ನಾನು ಇಂದು ನಿಮ್ಮ ಜೊತೆ ಸಭೆಯಲ್ಲಿ ಕುಳಿತುಕೊಳ್ಳಲು ಆಗುತ್ತಿರಲಿಲ್ಲ' ಎಂದು ಸಚಿವರಿಗೆ ಹೇಳಿದರು.

'ಪರಿಸ್ಥಿತಿಯ ಗಂಭೀರತೆ ಅರಿತ ಶಾಸಕ ವೀರಣ್ಣ ಚರಂತಿಮಠ, ತಾವು ಕಾರ್ಯಾಧ್ಯಕ್ಷರಾಗಿರುವ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯಲ್ಲಿ ಇದ್ದ ಆಮ್ಲಜನಕದ ಸಿಲಿಂಡರ್ ಕಳುಹಿಸಿಕೊಟ್ಟು ಅನಾಹುತ ತಪ್ಪಿಸಿದರು. ಹೀಗಾಗಿ ತುರ್ತಾಗಿ ಹೆಚ್ಚುವರಿ ಬೇಡಿಕೆ ಪೂರೈಕೆಗೆ ನೆರವಾಗಬೇಕು' ಎಂದು ಮನವಿ ಮಾಡಿದರು.

ಕತ್ತಿ ಸರ್ಕಾರದಲ್ಲಿ ವರ್ಚಸ್ವಿ ಸಚಿವರು. ತಮ್ಮ ಪ್ರಭಾವ ಬಳಸಿ ಜಿಲ್ಲೆಗೆ ಅಗತ್ಯವಿರುವ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಳ್ಳಲಿ ಎಂದು ಸಭೆಯಲ್ಲಿದ್ದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಕತ್ತಿ, 'ಸಮಸ್ಯೆ ಪರಿಹರಿಸಲು ನಿಮ್ಮದೂ (ವಿರೋಧ ಪಕ್ಷ) ಸಹಕಾರ ಬೇಕು. ಈ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಜಿಲ್ಲೆಗೆ ತುರ್ತಾಗಿ ಆಮ್ಲಜನಕ ಪೂರೈಕೆ ಪ್ರಮಾಣ ಹೆಚ್ಚಳಗೊಳಿಸಲು ಕ್ರಮ ಕೈಗೊಳ್ಳುವೆ' ಎಂದು ಭರವಸೆ ನೀಡಿದರು.

* ಅಜ್ಜ ಹೆಂಗಿದ್ರೂ ಸಾಯ್ತಾನೆ ಅಂದು ಹಿರಿಯರಿಗೆ ಹಾಕಿರುವ ವೆಂಟಿಲೇಟರ್‌ ತೆಗೆದು ಯುವಜನರಿಗೆ ಹಾಕಿ ಅವರನ್ನು ಉಳಿಸಿಕೊಳ್ಳುವ ಅನಿವಾರ್ಯ ಹಾಗೂ ಅಸಹಾಯಕ ಸ್ಥಿತಿ ಜಿಲ್ಲೆಯಲ್ಲಿದೆ.

-ಎಸ್.ಆರ್.ಪಾಟೀಲ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT