ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಬೆಳೆಗೆ ಪಾನಪಟ್ಟಿ ಹುಳುವಿನ ಬಾಧೆ: ಇಳುವರಿ ಕಡಿಮೆ, ದರವೂ ಕುಸಿತ

Published 23 ಮಾರ್ಚ್ 2024, 5:43 IST
Last Updated 23 ಮಾರ್ಚ್ 2024, 5:43 IST
ಅಕ್ಷರ ಗಾತ್ರ

ಬಾದಾಮಿ: ಈ ಬಾರಿ ಬೇಸಿಗೆಯ ಹಂಗಾಮಿನಲ್ಲಿ ಶೇಂಗಾ ಬೆಳೆಗೆ ಪಾನಪಟ್ಟಿ ಹುಳುವಿನ ಬಾಧೆಯಿಂದ ಬೆಳೆ ಕುಂಠಿತಗೊಂಡಿದ್ದು, ಇಳುವರಿಯೂ ಕಡಿಮೆಯಾಗಿದೆ. ಇಳುವರಿ ಕಡಿಮೆಯಾದರೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಬೇಕಿತ್ತು. ಆದರೆ ದರವೂ ಕುಸಿದಿದ್ದರಿಂದ ರೈತರಿಗೆ ನಿರಾಸೆಯಾಗಿದೆ.

ಬೇಸಿಗೆಯ ಹಂಗಾಮಿನ ನೀರಾವರಿ ಪ್ರದೇಶದಲ್ಲಿ ಬಾದಾಮಿ ತಾಲ್ಲೂಕಿನಲ್ಲಿ 5,100 ಹೆಕ್ಟೇರ್ ಮತ್ತು ಗುಳೇದಗುಡ್ಡ ತಾಲ್ಲೂಕಿನಲ್ಲಿ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ.

‘ಆರಂಭದಲ್ಲಿ ಶೇಂಗಾ ಬೆಳೆ ಬಂದಾಗ ಕ್ವಿಂಟಲ್‌ಗೆ ₹ 6,000 ಇದ್ದ ಬೆಲೆ ಈಗ ₹4,000ಕ್ಕೆ ಕುಸಿದಿದೆ.  ಚೀಲಕ್ಕೆ ₹3,500 ಇದ್ದದ್ದು ಈಗ ₹2,200ಕ್ಕೆ ಇಳಿದಿದೆ. ಬಿತ್ತನೆ ಮಾಡುವಾಗ ಶೇಂಗಾ ಬೀಜವನ್ನು ಕ್ವಿಂಟಲ್‌ಗೆ ₹10,000ಕ್ಕೂ ಅಧಿಕ ಬೆಲೆಗೆ ತಂದು ಬಿತ್ತನೆ ಮಾಡುತ್ತೇವೆ. ಆದರೆ ಬೆಳೆ ಬಂದ ಕೂಡಲೇ ದರ ಕಡಿಮೆಯಾಗಿದೆ’ ಎಂದು ರೈತರು  ಅಳಲು ತೋಡಿಕೊಂಡರು.

‘ಫೆಬ್ರುವರಿಯಲ್ಲಿ ಮಾರುಕಟ್ಟೆಯಲ್ಲಿ ಚೀಲಕ್ಕೆ ₹4,000ಕ್ಕೆ ಖರೀದಿಸಿದ ವರ್ತಕರು, ಮಾರ್ಚ್‌ನಲ್ಲಿ ಚೀಲಕ್ಕೆ ₹3,000ಕ್ಕೆ  ಖರೀದಿಸುತ್ತಾರೆ. ಇದರಿಂದ ರೈತರು ಬದುಕುವುದು ಕಷ್ಟವಾಗಿದೆ’ ಎಂದು ರೈತ ಕೋನಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ರೈತರಿಂದ ವರ್ತಕರಿಗೆ 2,300 ಚೀಲಗಳ ವ್ಯಾಪಾರ ವಹಿವಾಟು ನಡೆಸಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ ಹೇಳಿದರು.

ನಾಲ್ಕೈದು ದಶಕಗಳ ಹಿಂದೆ ಬಾದಾಮಿ ತಾಲ್ಲೂಕಿನ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಖುಷ್ಕಿ ಮಳೆಯಾಶ್ರಿಯ ಪ್ರದೇಶದಲ್ಲಿ ಗೆಜ್ಜೆ ಶೇಂಗಾ, ಬಳ್ಳಿ ಶೇಂಗಾ, ಜೋಳ ಮತ್ತು ತೊಗರಿ ಪ್ರಮುಖ ಬೆಳೆಯಾಗಿದ್ದವು. ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಅಂದಾಜು 40 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಬೆಳೆಯುತ್ತಿದ್ದರು.

ಮಳೆಯಾಶ್ರಿತ ಬಳ್ಳಿ ಶೇಂಗಾ ತಾಲ್ಲೂಕಿನಿಂದ ಸಂಪೂರ್ಣವಾಗಿ ಮಾಯವಾಗಿದೆ. ಅಧಿಕ ಶೇಂಗಾ ಬೆಳೆಯುವುದರಿಂದ ಪಟ್ಟಣದಲ್ಲಿ ಆರು ಶೇಂಗಾ ಆಯಿಲ್ ಉತ್ಪಾದನೆಯ ಉದ್ದಿಮೆಗಳಿದ್ದವು. ನೂರಾರು ಕಾರ್ಮಿಕರು ಉದ್ಯೋಗ ಪಡೆದಿದ್ದರು. 1960 ರಿಂದ 1980ರ ಆಸುಪಾಸಿನಲ್ಲಿ ಶೇಂಗಾ ಆಯಿಲ್ ಮಿಲ್ ಉದ್ಯಮಿ ಮತ್ತು ಮಾಜಿ ಶಾಸಕ ಕೆ.ಎಂ.ಪಟ್ಟಣಶೆಟ್ಟಿ ನಿತ್ಯ ಎರಡು ಆಯಲ್ ಟ್ಯಾಂಕರ್‌ಗಳನ್ನು ಮುಂಬೈಗೆ ಕಳಿಸುತ್ತಿದ್ದರು. ಇವರಿಗೆ ‘ ಆಯಿಲ್ ಕಿಂಗ್ ’ ಎಂದು ಕರೆಯುತ್ತಿದ್ದರು. ಈಗ ಆಯಿಲ್ ಮಿಲ್ ಮುಚ್ಚಿವೆ. ಶೇಂಗಾ ಖರೀದಿ ಮಾಡುವವರ ವರ್ತಕರ ಸಂಖ್ಯೆಯೂ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT