ಭಾನುವಾರ, ಮಾರ್ಚ್ 7, 2021
32 °C
ಗಣಿಗಾರಿಕೆ ತಡೆದು ಬೆಟ್ಟದ ಸಂರಕ್ಷಣೆಗೆ ಒತ್ತಾಯ

ಬಾದಾಮಿ ಬೆಟ್ಟದಲ್ಲಿ ಆದಿ ಶಿಲಾಯುಗ ನೆಲೆ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾದಾಮಿ(ಬಾಗಲಕೋಟೆ): ಬೆಟ್ಟದ ಪರಿಸರದ ಮಲಪ್ರಭಾ ನದಿ ದಂಡೆಯ ಎದುರಿನ ತೆಮಿನಾಳ, ಕಾತರಕಿ ಗ್ರಾಮಗಳ ರಂಗನಾಥ ಬೆಟ್ಟದಲ್ಲಿ ಶಿಲಾಯುಗದ ನೆಲೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಾಗಪುರದ ಪ್ರಾಗೈತಿಹಾಸಿಕ ಶಾಖೆಯ ಮುಖ್ಯಸ್ಥ ರಮೇಶ ಮೂಲಿಮನಿ ಹಾಗೂ ತಂಡದವರು ಪತ್ತೆ ಮಾಡಿದ್ದಾರೆ.

ಬುಧವಾರ ಬೆಟ್ಟದ ಪರಿಸರಕ್ಕೆ ಮಾಧ್ಯಮದವರನ್ನು ಕರೆದೊಯ್ದು ಬೆಟ್ಟದಲ್ಲಿರುವ ಶಿಲಾಯುಧಗಳನ್ನು ಪ್ರದರ್ಶಿಸಿದರು.

‘ಬೆಟ್ಟದ ಮೇಲ್ಭಾಗದಲ್ಲಿ ಅಂದಾಜು ಅರ್ಧ ಕಿ.ಮೀ. ವರೆಗೂ ಶಿಲಾಯುಧಗಳು ಹರಡಿವೆ. ಲಖಮಾಪುರ ಗ್ರಾಮದಿಂದ ಚೊಳಚಗುಡ್ಡ ಗ್ರಾಮದವರೆಗೆ ಅಂದಾಜು 10 ಕಿ.ಮೀವರೆಗೆ ಶಿಲಾಯುಧಗಳನ್ನು ಕಾಣಬಹುದು’ ಎಂದು ಮುಖ್ಯಸ್ಥ ರಮೇಶ ಮೂಲಿಮನಿ ಹೇಳಿದರು.

‘ವಿವಿಧ ಮಾದರಿಯ ಕೈಗೊಡಲಿಗಳು, ಬ್ಯೂರಿನ್, ಕೀವರ್, ಚಾಪರ್ ಮತ್ತು ಸ್ಕೇಪರುಗಳನ್ನು ಪತ್ತೆ ಮಾಡಲಾಗಿದೆ. ಅಂದಾಜು 5 ಲಕ್ಷ ವರ್ಷದಿಂದ 2 ಲಕ್ಷದ ವರ್ಷಗಳ ಹಿಂದೆ ಇದ್ದ ಆದಿ ಹಳೆ ಶಿಲಾಯುಗದ ಕಾಲಕ್ಕೆ ಇವು ಸೇರಿವೆ. ರಂಗನಾಥ ಬೆಟ್ಟ ಆಯುಧಗಳ ತಯಾರಿಕಾ ನೆಲೆಯಾಗಿತ್ತೆಂದು ತರ್ಕಿಸಬಹುದು’ ಎಂದರು.

ಬಾದಾಮಿ ಪರಿಸರದ ಮಲಪ್ರಭಾ ನದಿ ಪ್ರದೇಶದ ಖ್ಯಾಡ, ಕಾತರಕಿ ಹಾಗೂ ಢಾಣಕಶಿರೂರ ಗ್ರಾಮದಲ್ಲಿ 1888 ರಲ್ಲಿ ಭಾರತೀಯ ಪ್ರಾಗೈತಿಹಾಸದ ಪಿತಾಮಹ ಬ್ರಿಟಿಷ್ ಭೂವಿಜ್ಞಾನಿ ರಾಬರ್ಟ್ ಬ್ರೂಸ್ ಎರಡು ಲಕ್ಷ ವರ್ಷಗಳ ಹಳೆಯದಾದ ಆದಿ ಹಳೆ ಶಿಲಾಯುಗದ ಶಿಲಾಯುಧ ಪತ್ತೆ ಹಚ್ಚಿ ಪೂರ್ವಕಾಲದ ಮೇಲೆ ಬೆಳಕು ಚೆಲ್ಲಿದ್ದರು.

ಮಲಪ್ರಭಾ ನದಿ ದಂಡೆಯ ಗ್ರಾಮಗಳಲ್ಲಿ ಮತ್ತು ಬೆಟ್ಟಗಳಲ್ಲಿ ದೊರೆತ ಶಿಲಾಯುಧಗಳಲ್ಲಿ ಸಾಮ್ಯತೆ ಇದೆ. ‘ಬಾದಾಮಿ ಪರಿಸರದಲ್ಲಿ ಕಲ್ಲು ಗಣಿಗಾರಿಕೆ ನಡೆದಿದೆ. ಅರಣ್ಯ ಇಲಾಖೆ ಇದನ್ನು ಸರಂಕ್ಷಿತ ಪ್ರದೇಶವೆಂದು ಘೋಷಿಸಿ ಇದನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದರು.

ನಾಗಪುರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಾದ ಡಾ. ಗಜಾನನ ಕತಾರ್ಡೆ, ದೇವೇಂದ್ರ ಕೆಸಾವಿ, ಮತ್ತು ನರಸಿಲಾಲ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು