ಬಾಗಲಕೋಟೆ: ಕಾಂತರಾಜು ಆಯೋಗ ಹಾಗೂ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ನ.21ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ. ಕಾಂಬಳೆ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು ಆಯೋಗದ ವರದಿ ಅಂಗೀಕಾರಕ್ಕೆ ಲಿಂಗಾಯತ, ಒಕ್ಕಲಿಗರು ಪರೋಕ್ಷವಾಗಿ ತಡೆಯೊಡ್ಡುತ್ತಿದ್ದಾರೆ. ಸಮ್ಮಿಶ್ರ ಹಾಗೂ ಬಿಜೆಪಿ ಸರ್ಕಾರಗಳೆರಡೂ ವರದಿ ಜಾರಿಗೆ ಮುಂದಾಗಲಿಲ್ಲ ಎಂದು ದೂರಿದರು.
ಕಾಂಗ್ರೆಸ್ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಎರಡೂ ವರದಿಗಳನ್ನು ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಸರ್ಕಾರ ರಚನೆಯಾಗಿ ಆರು ತಿಂಗಳಾಗುತ್ತಾ ಬಂದರೂ ಈ ಬಗ್ಗೆ ಏನೂ ಮಾಡುತ್ತಿಲ್ಲ. ಕೂಡಲೇ ಸರ್ಕಾರ ಜಾರಿಗೆ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೈಗಾರಿಕೆ, ಶಿಕ್ಷಣ ಸಂಸ್ಥೆ ಸೇರಿದಂತೆ ಬಹುತೇಕ ಸಂಸ್ಥೆಗಳು ಶೇ90ರಷ್ಟು ಮೇಲ್ಜಾತಿಯವರ ಹಿಡಿತದಲ್ಲಿವೆ. ಆ ಹಿಡಿತ ತಪ್ಪಬಹುದು ಎಂಬ ಕಾರಣಕ್ಕೆ ವಿರೋಧಿಸಿಕೊಂಡು ಬರಲಾಗುತ್ತಿದೆ. ಹಕ್ಕುಗಳನ್ನು ಪಡೆಯಲಿ ಅನ್ಯಾಯಕ್ಕೆ ಒಳಗಾದವರೆಲ್ಲ ಒಂದಾಗಿ ಹೋರಾಟ ಮಾಡಬೇಕಿದೆ ಎಂದರು.
ಪರಿಶಿಷ್ಟ ಜಾತಿ 101 ಜಾತಿಗಳ ಪೈಕಿ ಮಾದಿಗ ಮತ್ತು ಮಾದಿಗ ಸಂಬಂಧಿತ 49 ಜಾರಿಗಳ ಜನಸಂಖ್ಯೆ ಹೆಚ್ಚಾಗಿದೆ. ಆದರೆ, ಅವರಿಗೆ ಎಲ್ಲ ರಂಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಆದ್ದರಿಂದ ಒಳ ಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಸನಕ್ಯಾನವರ, ಜಿಲ್ಲಾ ಸಂಯೋಜಕಿ ಗುರುಶಾಂತಪ್ಪ ಮದಿನಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.