ಗುಳೇದಗುಡ್ಡ: ‘ಪಟ್ಟಣದಲ್ಲಿ ಆ.30ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆ ಸಂದರ್ಭದಲ್ಲಿ ಅಶಾಂತಿ ಹರಡಲು ಮಾರಕಾಸ್ತ್ರ ಸಮೇತ ಬಂದಿದ್ದವರಲ್ಲಿ 4 ಜನರನ್ನು ಬಂಧಿಸಿದ್ದು ಇನ್ನುಳಿದವರನ್ನು ಶೀಘ್ರವೇ ಬಂಧಿಸಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಹಿಂದೆಂದೂ ಪಟ್ಟಣದಲ್ಲಿ ಇಂತಹ ಘಟನೆ ನಡೆದಿದ್ದಿಲ್ಲ. ಈ ಘಟನೆಯಿಂದ ಪಟ್ಟಣದ ಜನತೆ ತಲೆತಗ್ಗಿಸುವಂತಾಗಿದೆ. ಜನರಲ್ಲಿ ಆತಂಕ ಮೂಡಿದೆ. ಘಟನೆಯ ತನಿಖೆಯಾಗಬೇಕು. ಪಟ್ಟಣದ ಮುಖಂಡರೆಲ್ಲ ಪೊಲೀಸರಿಗೆ ದೂರು ಸಲ್ಲಿಸಲಿದ್ದೇವೆ’ ಎಂದರು.
ಮಾಜಿ ಪುರಸಭೆ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ ಮಾತನಾಡಿ, ‘ಈ ಘಟನೆಯ ಹಿಂದೆ ಷಡ್ಯಂತ್ರ ಇದೆ. ಕಾಣದ ಕೈ ಕೆಲಸ ಮಾಡಿದೆ. ಪೊಲೀಸ್ ಇಲಾಖೆಯವರು ಶೀಘ್ರ ಅವರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು’ ಎಂದರು.
ಮುಬಾರಕ ಮಂಗಳೂರ ಮಾತನಾಡಿ, ‘ಪೊಲೀಸ್ ಇಲಾಖೆಯವರು ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸದೇ ಹೋದರೆ ಪೊಲೀಸ್ ಠಾಣೆ ಎದುರಿಗೆ ಹೋರಾಟ ಮಾಡಬೇಕಾಗುತ್ತದೆ’ ಎಂದರು.