ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ | ಬಿಸಿಲಿಗೆ ತತ್ತರಿಸಿದ್ದ ಜನ: ತಂಪೆರೆದ ಮಳೆ

Published 19 ಮೇ 2024, 15:17 IST
Last Updated 19 ಮೇ 2024, 15:17 IST
ಅಕ್ಷರ ಗಾತ್ರ

ಕುಳಗೇರಿ ಕ್ರಾಸ್: ಕಳೆದ ಎರಡು ತಿಂಗಳಿಂದ ರಣ ಬಿಸಿಲಿಗೆ ತತ್ತರಿಸಿ ಹೋಗಿದ್ದ ಜನ ಶನಿವಾರ ತಡರಾತ್ರಿ ಒಂದು ಗಂಟೆ ಸುರಿದ ಭಾರಿ ಗಾಳಿ, ಮಳೆಯಿಂದ ನಿಟ್ಟಿಸಿರು ಬಿಡುವಂತಾಯಿತು.

ಕುಳಗೇರಿ ಮಳೆ ಮಾಪಕ ಕೇಂದ್ರದಲ್ಲಿ 3.3 ಸೆ.ಮೀ ಮಳೆ ದಾಖಲಾಗಿದೆ ಎಂದು ಮಳೆ ಮಾಪಕ ಸಹಾಯಕ ಯಲ್ಲಪ್ಪ ತಳವಾರ ತಿಳಿಸಿದರು.

ಹೋಬಳಿಯ ಹೆಸ್ಕಾಂ ಶಾಖೆಯ ವಿದ್ಯುತ್ ಸಂಪರ್ಕ ತಂತಿಗಳಿಗೆ ಸಣ್ಣಪುಟ್ಟ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೆಸ್ಕಾಂ ಶಾಖಾಧಿಕಾರಿ ಬಾಲಚಂದ್ರ ಕೊಳ್ಳಿ ತಿಳಿಸಿದರು.

ಕೆಲವು ವಾಣಿಜ್ಯ ಮಳಿಗೆಗಳ ನಾಮಫಲಕಗಳು ಬಿರುಸಿನ ಗಾಳಿಗೆ ಹಾರಿ ಹೋದವು.

ಮುಂಗಾರು ಕೃಷಿ ಚಟುವಟಿಕೆಗಳಿಗೆ ಈ ಮಳೆ ಮುನ್ನುಡಿ ಬರೆದಿದೆ ಎಂದು ಖಾನಾಪುರ ಎಸ್.ಕೆ ಗ್ರಾಮದ ರೈತ ಮೇಘರಾಜ ಹಿರಗ ಣ್ಣವರ ಹಾಗೂ ಕುಳಗೇರಿ ಗ್ರಾಮದ ರೈತ ಬೀರಪ್ಪ ಭಾವಿ ತಿಳಿಸಿದರು.

ಮೈದುಂಬಿ ಹರಿದ ಜಲಪಾತ, ಹಳ್ಳಗಳು

ಗುಳೇದಗುಡ್ಡ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶನಿವಾರ ರಾತ್ರಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ತಾಲ್ಲೂಕಿನಲ್ಲಿರುವ ಹಳ್ಳಗಳು ಮತ್ತು ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ದಿಡಿಗಿನ ಹಳ್ಳದ ಜಲಪಾತ ಮೈದುಂಬಿ ಹರಿದಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಪ್ರವಾಸಿಗರ ದಂಡು: ದಿಡಿಗಿನ ಹಳ್ಳದ ಜಲಪಾತ ಮೈದುಂಬಿ ಹರಿಯುತ್ತಿರುವ ಸುದ್ದಿ ಹರಡುತ್ತಿದ್ದಂತೆ ಬಿಸಿಲಿನ ತಾಪಮಾನದಿಂದ ಬಸವಳಿದ ಪ್ರವಾಸಿಗರು ಗುಂಪು ಗುಂಪಾಗಿ ಬಂದು ದಿಡಿಗಿನಿಂದ ಬೀಳುವ ನೀರಿನಲ್ಲಿ ಸ್ನಾನ ಮಾಡಿ ತಂದ ಬುತ್ತಿ ಉಂಡು ದಿನ ಕಳೆದರು.

ಶಾಲಾ ಕಾಲೇಜಿನ ಆವರಣಕ್ಕೆ ನುಗ್ಗಿದ ನೀರು: ಪಟ್ಟಣದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮಳೆಯ ನೀರು ತುಂಬಿಕೊಂಡಿತ್ತು. ಬಾಗಲಕೋಟೆಗೆ ಹೋಗುವ ಪ್ರಮುಖ ರಸ್ತೆಯನ್ನು ನಿರ್ಮಾಣ ಮಾಡಲು ಇತ್ತೀಚಿಗೆ ಅಗೆದಿದ್ದು ಅಲ್ಲಿ ನೀರು ನಿಂತಿದ್ದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಯಿತು. ಹೊಲಗದ್ದೆಗಳಲ್ಲೂ ನೀರು ನಿಂತಿದ್ದು ರೈತರಿಗೆ ಉಳುಮೆ ಮಾಡಲು ಭಾನುವಾರ ಸಾಧ್ಯವಾಗಲಿಲ್ಲ. ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಹಳ್ಳಗಳು ತುಂಬಿ ಹರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT