ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ–ಗೊಬ್ಬರ: ಕೃಷಿ ಇಲಾಖೆಗೆ ಅಗ್ನಿಪರೀಕ್ಷೆ

ಮುಂಗಾರು ಹಂಗಾಮು ಬಿತ್ತನೆಗೆ ರೈತರಿಂದ ನೆಲ ಹದ
Last Updated 23 ಮೇ 2022, 11:13 IST
ಅಕ್ಷರ ಗಾತ್ರ

ಬಾಗಲಕೋಟೆ: ನಾಲ್ಕು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆಯ ಸಮೃದ್ಧಿ ಜಿಲ್ಲೆಯಾದ್ಯಂತ ಕಂಡು ಬರುತ್ತಿದೆ. ಇದು ಬಿತ್ತನೆಗೆ ಭೂಮಿಯನ್ನು ಹದವಾಗಿಸಿದ್ದು, ರೈತರು ಹೊಲ ಉಳುಮೆಯತ್ತ ಮುಂದಾಗಿದ್ದಾರೆ.

ಬಿತ್ತನೆಗೆ ಅಗತ್ಯ ಬೀಜ–ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆಯೂ ಸಿದ್ಧತೆ ನಡೆಸಿದೆ. ರೈತರಷ್ಟೇ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಅವರ ಬೆನ್ನಿಗೆ ನಿಲ್ಲಬೇಕಿರುವ ಕೃಷಿ ಇಲಾಖೆಯದ್ದೂ ಇದೆ. ಹೀಗಾಗಿ ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಇದೆಯೇ? ಕೃಷಿ ಇಲಾಖೆ ಆ ನಿಟ್ಟಿನಲ್ಲಿ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಈ ವಾರದ ನಮ್ಮ ಜನ ನಮ್ಮ ಧ್ವನಿ ಬೆಳಕು ಚೆಲ್ಲಿದೆ.

ರೈತರ ಮೊಗದಲ್ಲಿ ಮಂದಹಾಸ

ಮಹಾಲಿಂಗಪುರ: ಕಳೆದ ಹಲವು ದಿನಗಳಿಂದ ಪಟ್ಟಣದ ಸುತ್ತ ಸುರಿದ ಮಳೆಗೆ ಕೃಷಿ ಚಟುವಟಿಕೆ ಗರಿಗೆದರಿವೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಭೂಮಿ ಆರಿದ ಮೇಲೆ ಹದಗೊಳಿಸುವ ಕಾರ್ಯ, ಬಿತ್ತನೆ ಕಾರ್ಯ ರೈತರು ಆರಂಭಿಸಲಿದ್ದಾರೆ.

ಪಟ್ಟಣದ ರೈತ ಸೇವಾ ಕೇಂದ್ರದಲ್ಲಿ ಕೃಷಿ ಚಟುವಟಿಕೆಗೆ ಪೂರಕ ವಸ್ತುಗಳು ಲಭ್ಯವಿವೆ. ಸೂಕ್ಷ್ಮ ಪೋಷಕಾಂಶಗಳ ಮಿಶ್ರಿತ ದ್ರವರೂಪದ ರಸಗೊಬ್ಬರವಾದ ಮೈಕ್ರೊ ನ್ಯೂಟ್ರಿಯಂಟ್ಸ್, ಎಚ್ಡಿಪಿ ಪೈಪ್, ಸೈಕಲ್ ವೀಡರ್, ಬಿತ್ತುವ ಕೂರಿಗೆ, ಗೋವಿನ ಜೋಳದ ಕೀಟನಾಶಕ ಸೇವಾ ಕೇಂದ್ರದಲ್ಲಿ ದೊರೆಯುತ್ತಿವೆ. ಕಳೆದ ವಾರವಷ್ಟೇ ರೈತರಿಗೆ ರಿಯಾಯಿತಿ ದರದಲ್ಲಿ ಅರ್ಹ ಫಲಾನುಭವಿ ರೈತರಿಗೆ ತಾಡಪತ್ರಿ ವಿತರಿಸಲಾಗಿದೆ.

'ಸದ್ಯ ರೈತರಿಗೆ ಗೊಬ್ಬರ ದರ ಕಡಿಮೆ ಮಾಡಬೇಕು. ಮುಂಗಾರು ಮಳೆಯಾಗುತ್ತಿದ್ದಂತೆ ಗೊಬ್ಬರ ಅಂಗಡಿ ಮಾಲೀಕರು ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಾರೆ. ಅದನ್ನು ಕೃಷಿ ಅಧಿಕಾರಿಗಳು ತಡೆಗಟ್ಟಬೇಕು' ಎಂದು ರೈತರು ಆಗ್ರಹಿಸುತ್ತಾರೆ.

ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ

ಬಾದಾಮಿ: ತಾಲ್ಲೂಕಿನಾದ್ಯಂತ ವ್ಯಾಪಕ ಮಳೆಯಾಗಿದೆ. ಕೆಲವು ರೈತರು ಹೊಲ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಬಿತ್ತನೆ ಬೀಜ ಪೂರೈಕೆ ಇಲ್ಲದ ಕಾರಣ ರೈತರು ಪರದಾಡುವಂತಾಗಿದೆ.

ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಮುಂಗಾರು ಬಿತ್ತನೆಗೆ ಹೆಸರು ಮತ್ತು ತೊಗರಿ ಬೀಜದ ಖರೀದಿಗೆ ರೈತರು ಬಂದಿದ್ದರು. ಬಿತ್ತನೆ ಬೀಜ ಬಾರದ ಹಿನ್ನೆಲೆಯಲ್ಲಿ ರೈತರು ಊರಿಗೆ ಮರಳಿದರು.

‘ಈ ವರ್ಸ ಮಳಿ ಲಗೂ ಆಗೈತ್ರಿ. ಹೆಸರು, ತೊಗರಿ ಬೀಜಕ್ಕ ಬಂದ್ರ ಬೀಜ ಇನ್ನೂ ಬಂದಿಲ್ಲಂತ್ರಿ ಜೂನ್ 1 ಕ್ಕ ಬರತಾವಂತ್ರಿ. ಈಗ ಕೊಟ್ಟಿದ್ರ ಬಿತ್ತಾಕ ಅನುಕೂಲ ಅಕ್ಕಿತ್ರಿ ‘ ಎಂದು ರೈತ ಸಂಪರ್ಕ ಕೇಂದ್ರಕ್ಕೆ ಬಂದ ಹೊಸೂರ ಗ್ರಾಮದ ರೈತ ಭೀಮಪ್ಪ ಹೇಳಿದರು.

ಯೂರಿಯಾ, ಡಿಎಪಿ, ಪೊಟ್ಯಾಶ್ ಮತ್ತು ಕಾಂಪ್ಲೆಕ್ಸ್ ಗೊಬ್ಬರ ದಾಸ್ತಾನು ಇದೆ. ಪಿಕೆಪಿಎಸ್ ಮತ್ತು ಖಾಸಗಿ ಅಂಗಡಿಗಳಲ್ಲಿ ಸರ್ಕಾರದ ನಿಗದಿತ ಬೆಲೆಯಲ್ಲಿ ಮಾರಾಟ ನಡೆಯಲಿದೆ ಎಂದು ಕೃಷಿ ಇಲಾಖೆಯಿಂದ ತಿಳಿದಿದೆ.

ಕುಳಗೇರಿ ಮತ್ತು ಕೆರೂರ ರೈತ ಸಂಪರ್ಕ ಕೇಂದ್ರದಲ್ಲಿ 10 ಕ್ವಿಂಟಲ್ ಹೆಸರು ಬೀಜ ದಾಸ್ತಾನು ಇದೆ. ಬಾದಾಮಿ ಮತ್ತು ಗುಳೇದಗುಡ್ಡ ರೈತ ಸಂಪರ್ಕ ಕೇಂದ್ರಗಳಿಗೆ ಇನ್ನೆರಡು ದಿನಗಳಲ್ಲಿ ಬೀಜ ಬರುತ್ತಿದೆ. ಜೂನ್ 1 ರೊಳಗೆ ಸಜ್ಜೆ, ಮೆಕ್ಕೆಜೋಳ, ಹೆಸರು ಮತ್ತು ತೊಗರಿ ಬೀಜ ಲಭ್ಯವಾಗಲಿವೆ ಎಂದು ಕೃಷಿ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

31,700 ಹೆಕ್ಟೇರ್ ಬಿತ್ತನೆ ಗುರಿ

ರಾಂಪುರ: ಇನ್ನೇನು ಮುಂಗಾರು ಹಂಗಾಮು ಪ್ರಾರಂಭವಾಗಲಿದೆ. ರೈತಾಪಿ ಜನ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದರೆ, ಕೃಷಿ ಇಲಾಖೆ ರೈತರಿಗೆ ಅಗತ್ಯವಾದ ಬೀಜಗಳ ಸಂಗ್ರಹ ಮಾಡಿ ವಿತರಿಸುವ ಕಾರ್ಯಕ್ಕೆ ಸಜ್ಜಾಗಿದೆ.

ಬಾಗಲಕೋಟೆ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿಗೆ 31,700 ಹೆಕ್ಟರ್ ಕ್ಷೇತ್ರದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ ತೊಗರಿ, ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ ಬೀಜಗಳಿಗಾಗಿ ರಾಜ್ಯ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದೆ. 2-3 ದಿನಗಳಲ್ಲಿ ಬೇಡಿಕೆ ಪ್ರಮಾಣದ ಬೀಜಗಳು ಲಭ್ಯವಾಗಲಿವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾರು ಮಳೆ ಬೇಗನೇ ಬಂದಿದ್ದು, ಹೆಸರು ಬೀಜಕ್ಕೆ ಬೇಡಿಕೆ ಬರಲಿದೆ. ಹಾಗೆಯೇ ಈ ಬಾರಿ ಸೂರ್ಯಕಾಂತಿ ಬೀಜಕ್ಕೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ತೊಗರಿ ಮತ್ತು ಗೋವಿನಜೋಳ ಬಿತ್ತನೆಯೂ ಕೆಲವು ಭಾಗಗಳಲ್ಲಿ ಆಗಲಿದ್ದು, ರೈತರಿಗೆ ಅಗತ್ಯ ಪ್ರಮಾಣದ ಬೀಜ ನೀಡುವುದಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಮಾಣಿ ತಿಳಿಸಿದ್ದಾರೆ.

ರಸಗೊಬ್ಬರ ಲಭ್ಯ: ತಾಲ್ಲೂಕಿನಲ್ಲಿ ರೈತರಿಗೆ ಬಿತ್ತನೆಗೆ ಬೇಕಾಗಬಹುದಾದ ರಸಗೊಬ್ಬರದ ಸಂಗ್ರಹ ಇದ್ದು, ಯೂರಿಯಾ ಲಭ್ಯವಿದೆ. ಕಾಂಪ್ಲೆಕ್ಸ್ ಗೊಬ್ಬರಗಳು ಬರುತ್ತಿವೆ. ಒಟ್ಟಾರೆ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ ಎಂದರು.

ಬೀಳಗಿ: ಗರಿಗೆದರಿದ ಕೃಷಿ ಚಟುವಟಿಕೆ

ಬೀಳಗಿ: ಮುಂಗಾರು ಹಂಗಾಮು ಪ್ರಾರಂಭವಾಗಿದೆ. ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿವೆ. ಈ ವರ್ಷ ಉತ್ತಮ ಮಳೆ ನೀರಿಕ್ಷೆಯಲ್ಲಿರುವ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ತಯಾರಿ ನಡೆಸುತ್ತಿದ್ದು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಪರಿಕರಗಳ ಬಗ್ಗೆ ಮತ್ತು ಯಾವ ಬೀಜ ಬಿತ್ತನೆ ಮಾಡಬೇಕು? ಯಾವ ಗೊಬ್ಬರ ಎಷ್ಟು ಪ್ರಮಾಣದಲ್ಲಿ ಖರೀದಿಸಬೇಕು? ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಅತ್ಯವಶ್ಯಕ, ಪೂರಕವಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಇನ್ನಿತರ ಪರಿಕರಗಳನ್ನು ರೈತರು ಖರೀದಿಸುವಾಗ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರಿಂದ ಖರೀದಿಸಬೇಕು. ಅಧಿಕೃತ ರಸೀದಿ ಪಡೆಯುವುದು ಕಡ್ಡಾಯ. ಅಲ್ಲದೇ ಗ್ರಾಮೀಣಮಟ್ಟದಲ್ಲಿ ಒಳ್ಳೆಯ ಗುಣಮಟ್ಟವಿಲ್ಲದ, ಪರವಾನಿಗೆ ರಹಿತರಿಂದ ಕೃಷಿಪರಿಕರಗಳನ್ನು ತಗೆದುಕೊಳ್ಳಬಾರದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಮಾವಿನಕೊಪ್ಪ ಹೇಳುತ್ತಾರೆ.

ಪ್ರಜಾವಾಣಿ ತಂಡ:ವೆಂಕಟೇಶ ಜಿ.ಎಚ್, ಎಸ್.ಎಂ.ಹಿರೇಮಠ, ಮಹೇಶ ಮನ್ನಯ್ಯನವರಮಠ, ಪ್ರಕಾಶ ಬಾಳಕ್ಕನವರ, ಬಸವರಾಜ ಬೀಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT