ವಿಶ್ವಜ ಕಾಡದೇವರ
ರಬಕವಿ ಬನಹಟ್ಟಿ: ವೀಳ್ಯದೆಲೆಯ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ದರ ಗಗಕ್ಕೇರಿದ್ದು, ಅದನ್ನು ತಿನ್ನುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಕಳೆದ ಬಾರಿ ಸುರಿದ ಮಳೆಯಿಂದಾಗಿ ಎಲೆ ಬಳ್ಳಿಗಳಿಗೆ ಕೊಳೆ ರೋಗ ಬಂದು ಬಹಳಷ್ಟು ಎಲೆಬಳ್ಳಿಗಳು ನಾಶಗೊಂಡಿದ್ದವು. ರೈತರು ಮತ್ತೆ ನಾಟಿ ಮಾಡಿದರೂ ಈ ಬಾರಿಯ ಬಿಸಿಲಿನ ಪ್ರಖರತೆ ಹಾಗೂ ಮಳೆ ಕೊರತೆಯಿಂದಾಗಿ ಎಲೆಬಳ್ಳಿಗಳು ಹಾಳಾಗಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಎಲೆಗಳ ಕೊರತೆ ಉಂಟಾಗಿ ಬೆಲೆಯು ಕೂಡ ಗಗನಕ್ಕೇರಿದೆ.
ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ 12,000 ಎಲೆಗಳ ಒಂದು ಡಾಗು ₹1,200 ರಿಂದ ₹1,500ವರೆಗೆ ಇದ್ದ ಬೆಲೆಯೂ ಈಗ ₹7,000 ರಿಂದ ₹8,000ವರೆಗೆ ಮಾರಾಟವಾಗುತ್ತಿವೆ. ಇದರಿಂದಾಗಿ ಎಲೆಬಳ್ಳಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ರೈತರು ಲಾಭದಲ್ಲಿದ್ದರೆ, ಖರೀದಿದಾರರು ಮಾತ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಈಗ ಒಂದೆರಡು ರೂಪಾಯಿಗಳಿಗೆ ಎಲೆ ನೀಡುವುದನ್ನು ಮಾರಾಟಗಾರರು ಬಂದ್ ಮಾಡಿದ್ದಾರೆ.
ಸಮೀಪದ ಜಗದಾಳ ಗ್ರಾಮದ ಸುತ್ತ–ಮುತ್ತಲಿನ ಪ್ರದೇಶದಲ್ಲಿ ವೀಳ್ಯದೆಲೆಯನ್ನು ಬೆಳೆಯಲಾಗುತ್ತದೆ. ಇಲ್ಲಿಯ ಎಲೆ ಮುಂಬೈ, ಬೆಂಗಳೂರು, ಬೆಳಗಾವಿ, ಗದಗ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಹೋಗುತ್ತದೆ.
ಮಂಗಳವಾರ, ಗುರುವಾರ ಮತ್ತು ಭಾನುವಾರ ಲಕ್ಷಾಂತರ ಎಲೆಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಎಲೆಗಳ ಪ್ರಮಾಣ ಬಹಳ ಕಡಿಮೆಯಾಗಿದೆ ಎನ್ನುತ್ತಾರೆ ಜಗದಾಳ ಗ್ರಾಮದ ಪ್ರಮುಖ ಎಲೆ ಬೆಳೆಗಾರ ಶಂಕರ ಬಂಗಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.