ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುನಗುಂದ: ನಿರೀಕ್ಷಿತ ಪ್ರಮಾಣದಲ್ಲಿ ಆಗದ ಬಿತ್ತನೆ

27,275 ಹೆಕ್ಟೇರ್ ಬಿತ್ತನೆ ಗುರಿ: 13,050 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
Published 18 ಆಗಸ್ಟ್ 2023, 4:27 IST
Last Updated 18 ಆಗಸ್ಟ್ 2023, 4:27 IST
ಅಕ್ಷರ ಗಾತ್ರ

ಹುನಗುಂದ: ಮಳೆಯ ಕೊರತೆಯ ನಡುವೆಯೂ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಮುಗಿದಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ತಾಲ್ಲೂಕಿನಾದ್ಯಂತ ಶೇ 47.8ರಷ್ಟು ಮಾತ್ರ ಬಿತ್ತನೆಯಾಗಿದೆ.

ಕೃಷಿ ಇಲಾಖೆಯು ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 27,275 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿತ್ತು. ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ 13,050 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.

ತಾಲ್ಲೂಕಿನ ಬಹುತೇಕ ಕೃಷಿಭೂಮಿ ಮಳೆಯಾಶ್ರಿತವಾಗಿದೆ. ಜೂನ್ ಕೊನೆಯವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಹೀಗಾಗಿ ರೈತ ಸಮುದಾಯ, ಮಳೆಗಾಗಿ ಆಕಾಶದತ್ತ ಮುಖ ಮಾಡುವಂತಾಗಿತ್ತು. ಜುಲೈ 15ರ ನಂತರ ತಾಲ್ಲೂಕಿನಾದ್ಯಂತ ಕೆಲವು ದಿನಗಳವರೆಗೆ ಜಿಟಿಜಿಟಿ ಮಳೆಯಾಗಿದ್ದರಿಂದ ರೈತರು ಸಂತಸಗೊಂಡಿದ್ದರು. ಕೃಷಿ ಚಟುವಟಿಕೆಗಳು ಚುರುಕುಗೊಂಡು ಬಿತ್ತನೆ ಕಾರ್ಯಕ್ಕೆ ಅಣಿಯಾದರು. ಜುಲೈ ಕೊನೆಯ ವಾರ ಆರಂಭಗೊಂಡ ಬಿತ್ತನೆ ಕಾರ್ಯ ಮತ್ತು ಆಗಸ್ಟ್‌ 15ರವರೆಗೂ ಮುಂದುವರಿದಿತ್ತು.

ಈ ಅವಧಿಯಲ್ಲಿ ಸರಿಯಾದ ಪ್ರಮಾಣದ ಮಳೆಯಾಗಿಲ್ಲ. ಅರೆಬರೆ ತೇವಾಂಶದಲ್ಲಿ 5,526 ಹೆಕ್ಟೇರ್‌ನಲ್ಲಿ ತೊಗರಿ, 1,601 ಹೆಕ್ಟೇರ್ ಸೂರ್ಯಕಾಂತಿ, 1,659 ಹೆಕ್ಟೇರ್ ಗೋವಿನ ಜೋಳ, 2,160 ಹೆಕ್ಟೇರ್ ಸಜ್ಜೆ, 294 ಹೆಕ್ಟೇರ್‌ನಲ್ಲಿ ಹತ್ತಿ ಜೊತೆಗೆ ಹೆಚ್ಚಿನ ಪ್ರದೇಶದಲ್ಲಿ ಮೆನಸಿನಕಾಯಿ, ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಜೂನ್, ಜುಲೈ, ಆಗಸ್ಟ್‌ 10ರವರೆಗೆ 220.5 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಈವರೆಗೆ 126.7 ಮಿ.ಮೀ. ಮಾತ್ರ ಮಳೆಯಾಗಿದೆ. ಶೇ 42.5ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಬಿತ್ತನೆ ಮಾಡಿರುವ ರೈತರು ಮತ್ತಷ್ಟು ಆತಂಕಗೊಂಡಿದ್ದಾರೆ.

ಹುನಗುಂದ ಪಟ್ಟಣದ ಹೊರ ವಲಯದ ಜಮೀನಿನಲ್ಲಿ ಬೆಳೆದಿರುವ ಗೋವಿನಜೋಳದ ಬೆಳೆ
ಹುನಗುಂದ ಪಟ್ಟಣದ ಹೊರ ವಲಯದ ಜಮೀನಿನಲ್ಲಿ ಬೆಳೆದಿರುವ ಗೋವಿನಜೋಳದ ಬೆಳೆ

ಶೇ 47.8ರಷ್ಟು ಮಾತ್ರ ಬಿತ್ತನೆ ಶೇ 42.5ರಷ್ಟು ಮಳೆ ಕೊರತೆ ರೈತರಲ್ಲಿ ಹೆಚ್ಚಿದ ಆತಂಕ

ಬೆಳೆ ವಿಮೆ ಪಾವತಿಸಲೂ ಸಮಸ್ಯೆ

ತಾಲ್ಲೂಕಿನ ಬಹುತೇಕ ರೈತರು ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ ಮತ್ತು ಗೋವಿನಜೋಳವನ್ನು ಜುಲೈ ಕೊನೆಯ ವಾರ ಮತ್ತು ಆಗಸ್ಟ್‌ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದಾರೆ. ಈ ಎರಡೂ ಬೆಳೆಗಳಿಗೆ ವಿಮೆ ಪಾವತಿಸಲು ಜುಲೈ 31 ಕೊನೆಯ ದಿನವಾಗಿತ್ತು. ಒಂದು ಕಡೆ ಮಳೆ ಕೈಕೊಟ್ಟಿದ್ದರೆ ಇನ್ನೊಂದೆಡೆ ಸರ್ಕಾರ ಮತ್ತು ವಿಮಾ ಕಂಪನಿಯವರ ನಿಯಮಗಳು ರೈತರನ್ನು ಸಂಕಷ್ಟಕ್ಕೆ ದೂಡಿವೆ ಎಂದು ರೈತರು ಆರೋಪಿಸಿದ್ದಾರೆ. ‘ಅಗಸ್ಟ್‌ ಮೊದಲ ವಾರದಲ್ಲಿ ನಾಲ್ಕು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. ಈ ಬೆಳೆಗೆ ಮಳೆಯ ಅವಶ್ಯಕತೆ ಇದೆ. ಆದರೆ ಮಳೆಯೇ ಆಗುತ್ತಿಲ್ಲ. ಬೆಳೆ ವಿಮೆ ಪಾವತಿಸಲೂ ಸಾಧ್ಯವಾಗಿಲ್ಲ’ ಎಂದು ನಾಗೂರು ಗ್ರಾಮದ ರೈತ ಸಂಗಪ್ಪ ನರಗುಂದ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT