ಹಾಂಗ್‌ಝೌ: ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಝರೀನ್, ಏಷ್ಯನ್ ಗೇಮ್ಸ್ ಬಾಕ್ಸಿಂಗ್ ಸ್ಪರ್ಧೆಯ 50 ಕೆ.ಜಿ. ವಿಭಾಗದಲ್ಲಿ ಬುಧವಾರ ಎಂಟರ ಘಟ್ಟಕ್ಕೆ ದಾಪುಗಾಲಿಟ್ಟರು. ಆದರೆ ಭಾರತದ ಇನ್ನಿಬ್ಬರು ಅನುಭವಿಗಳಾದ ಶಿವ ಥಾಪಾ ಮತ್ತು ಸಂಜೀತ್ ಅವರ ಸವಾಲು ನಿರೀಕ್ಷೆಗಿಂತ ಬೇಗ ಅಂತ್ಯಗೊಂಡಿತು.
ನಿಖತ್ ಎರಡನೇ ಸುತ್ತಿನ ಸೆಣಸಾಟದಲ್ಲಿ ದಕ್ಷಿಣ ಕೊರಿಯಾದ ಚೊರೊಂಗ್ ಬಾಕ್ ಅವರನ್ನು 5–0 ಯಿಂದ ಸೋಲಿಸಿದರು.
ಆದರೆ ಆರು ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್ ಪದಕ ವಿಜೇತರಾಗಿರುವ ಶಿವ ಅವರು ಇಲ್ಲೂ ಪದಕದ ನಿರೀಕ್ಷೆಯಲ್ಲಿದ್ದರು. ಆದರೆ 63.5 ಕೆ.ಜಿ. ವಿಭಾಗದ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಕಿರ್ಗಿಸ್ತಾನದ 21 ವರ್ಷದ ಯುವಕ ಅಸ್ಕತ್ ಕುಲ್ತೇವ್ 5–0 ಯಿಂದ ಭಾರತದ ಬಾಕ್ಸರ್ ಮೇಲೆ ಅಮೋಘ ರೀತಿಯಲ್ಲಿ ಜಯಗಳಿಸಿದರು.
92 ಕೆ.ಜಿ. ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಾಝಿಝ್ಬೆಕ್ ಮುಲಜನೋವ್ 5–0ಯಿಂದ ಸಂಜೀತ್ ಅವರನ್ನು ಸುಲಭವಾಗಿ ಸೋಲಿಸಿದರು.
ಈ ಎರಡು ಸೋಲುಗಳಿಂದ ಕಳೆಗುಂದಿದ್ದ ಭಾರತದ ಪಾಳೆಯದಲ್ಲಿ ನಿಖತ್ ಒಂದಿಷ್ಟು ಸಮಾಧಾನ ಮೂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.