ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಸರ್ಕಾರಕ್ಕೆ ಜಿ.ಪಂ ಶಿಫಾರಸು

ಸ್ವಚ್ಛ ಭಾರತ ಜಾಗೃತಿ ಫಲಕ ಬರಹ: ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರ ಆರೋಪ
Last Updated 18 ಸೆಪ್ಟೆಂಬರ್ 2020, 14:00 IST
ಅಕ್ಷರ ಗಾತ್ರ

ಬಾಗಲಕೋಟೆ: ಗ್ರಾಮ ಪಂಚಾಯ್ತಿ ಕಟ್ಟಡಗಳ ಮೇಲೆ ಸ್ವಚ್ಛ ಭಾರತ ಯೋಜನೆ ಬಗ್ಗೆ ಜಾಗೃತಿ ಸಂದೇಶ ಬರೆಯಲು ₹1 ಕೋಟಿ ಮೊತ್ತದ ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಶುಕ್ರವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು. ಆ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಧರಿಸಿತು.

ಜಾಗೃತಿ ಸಂದೇಶದ ಗೋಡೆ ಬರಹ ಹಾಗೂ ಫಲಕ ಹಾಕುವ ಗುತ್ತಿಗೆಯನ್ನು ಧಾರವಾಡದ ಎಸ್‌ಬಿಎನ್‌ ಕನ್‌ಸ್ಟ್ರಕ್ಷನ್ಸ್ ಹಾಗೂ ಕಲಬುರ್ಗಿಯ ಸಾಯಿ ಪ್ರಸನ್ನ ಆರ್ಟ್ಸ್ ಸಂಸ್ಥೆಗೆ ನೀಡಲಾಗಿದೆ. ಅದಕ್ಕೆ ನಿಯಮಾವಳಿ ಪ್ರಕಾರ ಟೆಂಡರ್ ಕರೆದಿಲ್ಲ. ಸ್ಥಳೀಯ ಕಲಾವಿದರನ್ನು ಹೊರತುಪಡಿಸಿ ಬೇರೆ ಜಿಲ್ಲೆಯವರಿಗೆ ಮನ್ನಣೆ ಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಸದಸ್ಯರು ಆರೋಪಿಸಿದರು.

ಈ ಎರಡು ಏಜೆನ್ಸಿಗಳಿಗೆ ಮಾತ್ರ ಹೇಗೆ ಕೆಲಸ ಸಿಕ್ಕಿತು. ಸ್ಥಳೀಯವಾಗಿ ಕಲಾವಿದರು ಇರಲಿಲ್ಲವೇ, ಬರೀ ಬೋರ್ಡ್ ಬರೆಸಲು ಅಷ್ಟೊಂದು ಹಣ ಖರ್ಚು ಮಾಡಿದ್ದೇಕೆ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಮೌನ ಗಮನಿಸಿದರೆ ಅವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಬರುತ್ತಿದೆ ಎಂದು ಬಿಜೆಪಿ ಸದಸ್ಯ ಹೂವಪ್ಪ ರಾಥೋಡ ಕಾಲೆಳೆದರು.

ಇದರಿಂದ ಗರಂ ಆದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗಂಗೂಬಾಯಿ ಮಾನಕರ, ಈ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಹಿಂದಿನ ಸಿಇಒ ಗಂಗೂಬಾಯಿ ಮಾನಕರ ಅವಧಿಯಲ್ಲಿ ಗುತ್ತಿಗೆ ನೀಡಲಾಗಿದೆ. ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯೋಣ ಎಂದರು. ಅದಕ್ಕೆ ಸಭೆ ಸಮ್ಮತಿ ಸೂಚಿಸಿತು.

ಪ್ರವಾಹ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 22,473 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರದ ಅಧ್ಯಯನ ತಂಡದ ಗಮನಕ್ಕೂ ತಂದಿದ್ದೇವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸಿಇಒ ಟಿ.ಭೂಬಾಲನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT