ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಪಠ್ಯಪುಸ್ತಕಗಳನ್ನು ಶಿಕ್ಷಕರೇ ಹೊತ್ತು ತರಬೇಕು

ಸಾಗಣೆ ವೆಚ್ಚ ಬಿಇಒ ಖಾತೆಗೆ ಜಮೆಯಾದರೂ ಆಗದ ಪ್ರಯೋಜನ
Published 31 ಮೇ 2024, 23:50 IST
Last Updated 31 ಮೇ 2024, 23:50 IST
ಅಕ್ಷರ ಗಾತ್ರ

ಬಾಗಲಕೋಟೆ: ಸರ್ಕಾರದಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಪಠ್ಯಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬರುತ್ತವೆ. ಅಲ್ಲಿಂದ ಅವುಗಳನ್ನು ಶಾಲೆಗಳಿಗೆ ತಲುಪಿಸಬೇಕು. ಅಧಿಕಾರಿಗಳು ತಲುಪಿಸದ ಕಾರಣ ಶಾಲೆಯ ಶಿಕ್ಷಕರು, ಇತರ ಸಿಬ್ಬಂದಿ ಹೊತ್ತುಕೊಂಡು ಹೋಗಬೇಕು.

‘ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಬಿಸಿಯೂಟದ ವ್ಯವಸ್ಥೆ, ಮೊಟ್ಟೆ, ಶೇಂಗಾ ಚಿಕ್ಕಿ ಖರೀದಿ, ವಿವಿಧ ಗಣತಿ, ಚುನಾವಣೆ ಕರ್ತವ್ಯ ಸೇರಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದೇವೆ. ಈಗ ಪಠ್ಯಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ವಾಹನಗಳವರೆಗೆ, ಗ್ರಾಮದಲ್ಲಿ ಶಾಲೆಯವರೆಗೆ ಒಯ್ಯಬೇಕಿದೆ’ ಎಂದು ಶಿಕ್ಷಕರು ಹೇಳುತ್ತಾರೆ.

ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಮುದ್ರಣವಾದ ಪಠ್ಯಪುಸ್ತಕಗಳು ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗೆ ಬರುತ್ತವೆ. ಅಲ್ಲಿಂದ ಅವುಗಳನ್ನು ಶಾಲೆಗಳಿಗೆ ತಲುಪಿಸುವ ಹೊಣೆ ಕ್ಷೇತ್ರ ಶಿಕ್ಷಣಾಧಿಕಾರಿಗಳದ್ದು. ಆದರೆ, ‘ನಮ್ಮ ಕಚೇರಿಯಿಂದ ಪಠ್ಯಪುಸ್ತಕಗಳನ್ನು ಒಯ್ಯಿರಿ’ ಎಂದು ಅವರು ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚಿಸುತ್ತಾರೆ.

ಬಾದಾಮಿ ಎಪಿಎಂಸಿ ಗೋದಾಮಿನಿಂದ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದ್ದು, ಅವುಗಳನ್ನು ಮುಖ್ಯ ಶಿಕ್ಷಕರು ಒಯ್ಯಬೇಕಿದೆ. ಜೊತೆಗೆ ಇಂಡೆಂಟ್‌ ನಕಲು ಪ್ರತಿ, ಮುದ್ರೆ ಕಡ್ಡಾಯವಾಗಿ ತರಬೇಕು ಎಂಬ ಸಂದೇಶವನ್ನು ಶಿಕ್ಷಕರಿಗೆ ಕಳುಹಿಸಲಾಗಿದೆ. ರಾಜ್ಯದ ಬಹುತೇಕ ಕಡೆ ಈ ಪದ್ಧತಿ ಇದೆ.

ಪಠ್ಯಪುಸ್ತಕಗಳನ್ನು ನಾವೇ ಶಾಲೆಗೆ ತಲುಪಿಸುತ್ತೇವೆ. ಕೆಲ ವಿಷಯಗಳ ಪಠ್ಯಪುಸ್ತಕಗಳಷ್ಟೇ ಬಂದಿದ್ದು ಅವುಗಳನ್ನು ಒಯ್ಯಲು ಶಿಕ್ಷಕರಿಗೆ ತಿಳಿಸಿದ್ದೇವೆ. ಇವುಗಳನ್ನು ನಾವೇ ತಲುಪಿಸಿದರೆ ಉಳಿದ ಪಠ್ಯಪುಸ್ತಕಗಳಿಗೆ ಮತ್ತೆ ಹೋಗಬೇಕಾಗುತ್ತದೆ.
ಎನ್.ವೈ.ಕುಂದರಗಿ, ಬಿಇಒ ಬಾದಾಮಿ

‘ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಪಠ್ಯಪುಸ್ತಕಗಳನ್ನು ನೇರವಾಗಿ ಶಾಲೆಗಳಿಗೆ ಸಾಗಿಸಬೇಕು. ಅದಕ್ಕಾಗಿ ಈಗಾಗಲೇ ಪ್ರತಿ ವಿದ್ಯಾರ್ಥಿ ಲೆಕ್ಕದಲ್ಲಿ ₹2.50 (ಸಾಗಣೆ ವೆಚ್ಚ) ಬಿಇಒ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ. ನಿಯಮಾನುಸಾರ ವೆಚ್ಚ ಭರಿಸಿ, ಅಗತ್ಯ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕಗಳ ಸಂಘದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆದರೆ, ಅದು ಪಾಲನೆಯಾಗುತ್ತಿಲ್ಲ’ ಎಂಬ ದೂರು ಶಿಕ್ಷಕರದ್ದು.

‘ಮೇಲಧಿಕಾರಿಗಳು ಸೂಚಿಸಿದ ಮೇಲೆ ಅವರ ಆಜ್ಞೆ ಪಾಲಿಸಬೇಕು. ಬಿಇಒ ಕಚೇರಿಗೆ ಬಂದು, ಅಲ್ಲಿಂದ ಆಟೊದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಬಸ್ ನಿಲ್ದಾಣಕ್ಕೆ ಹೋಗುತ್ತೇವೆ. ಅಲ್ಲಿಂದ ಗ್ರಾಮಕ್ಕೆ ತೆರಳಿ, ಶಾಲೆಗೆ ಒಯ್ಯಬೇಕು. ಸಮೀಪ ಇದ್ದವರು ವಾಹನ ಮಾಡಿಕೊಂಡು ಬಂದರೆ, ಅದರ ವೆಚ್ಚವನ್ನೂ ಶಿಕ್ಷಕರೇ ಭರಿಸಬೇಕು’ ಎಂದು ಮುಖ್ಯ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ಪಠ್ಯಪುಸ್ತಕ ಸಾಗಾಟಕ್ಕೆ ಬಿಇಒ ಗಳಿಗೆ ಹಣ ಬಿಡುಗಡೆ ಮಾಡಿರುವ ಕರ್ನಾಟಕ ಪಠ್ಯಪುಸ್ತಕ ಸಂಘಗಳ ವ್ಯವಸ್ಥಾಪಕ ನಿರ್ದೇಶಕರ ಪತ್ರ

ಪಠ್ಯಪುಸ್ತಕ ಸಾಗಾಟಕ್ಕೆ ಬಿಇಒ ಗಳಿಗೆ ಹಣ ಬಿಡುಗಡೆ ಮಾಡಿರುವ ಕರ್ನಾಟಕ ಪಠ್ಯಪುಸ್ತಕ ಸಂಘಗಳ ವ್ಯವಸ್ಥಾಪಕ ನಿರ್ದೇಶಕರ ಪತ್ರ

ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗುವಂತೆ ಶಿಕ್ಷಕರಿಗೆ ಕಳುಹಿಸಿರುವ ಸಂದೇಶ

ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗುವಂತೆ ಶಿಕ್ಷಕರಿಗೆ ಕಳುಹಿಸಿರುವ ಸಂದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT