ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಬೆಲೆ ಹೆಚ್ಚಳದಿಂದ ಹುಳಿಯಾದ ಟೊಮೆಟೊ

Published 16 ಜೂನ್ 2024, 13:37 IST
Last Updated 16 ಜೂನ್ 2024, 13:37 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಂಗಾರು ಮಳೆ ಸಂಭ್ರಮ ಮರೆಯಾಗುವಂತೆ ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಹೆಚ್ಚುತ್ತಿವೆ. ಟೊಮೆಟೊ ಬೆಲೆ ಪ್ರತಿ ಕೆಜಿಗೆ ₹ 100ರ ಗಡಿ ಮುಟ್ಟಿದೆ.

ತರಕಾರಿ ಬೆಲೆ ಏರಿಕೆಗೆ ವರ್ತಕರು, ಮುನ್ನ ಮಳೆಯೇ ಆಗಿಲ್ಲ ಎನ್ನುತ್ತಿದ್ದರು. ಈಗ ಮಳೆಯಾಗಿದೆ, ಈಗಲೂ ತರಕಾರಿ ಬೆಲೆ ಬೇಸಿಗೆಗಿಂತ ಹೆಚ್ಚಾಗಿದೆ. 

ಎರಡು ವಾರಗಳಿಂದ ಪ್ರತಿ ಕೆಜಿಗೆ ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಈ ವಾರಕ್ಕೆ ಪ್ರತಿ ಕೆಜಿಗೆ ₹100 ಆಗಿದೆ. ಸಂತೆಯಲ್ಲಿ ಸಾಕಷ್ಟು ಟೊಮೆಟೊ ಇದ್ದರೂ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದರು.

‘ಕೋಲಾರ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿತ್ತು. ಮಳೆ ಹೆಚ್ಚಾಗಿ ಹಾಳಾಗಿರುವುದು, ರೋಗ ಬಾಧೆಯಿಂದ ಬರುತ್ತಿಲ್ಲ. ಹಾಗಾಗಿ, ಟೊಮೆಟೊ ಬೆಲೆಯಲ್ಲಿ ದಿಢೀರ್‌ ಹೆಚ್ಚಳವಾಗಿದೆ. ನಮಗೆ ಪ್ರತಿ ಕೆಜಿಗೆ ₹80 ರಿಂದ 90 ಬಿದ್ದಿದೆ’ ಎಂದು ವ್ಯಾಪಾರಿ ಶೇಖರ್ ಹೇಳಿದರು.

‘ಟೊಮೆಟೊ ಬೆಲೆ ಕೇಳಿ ಈ ವಾರ ಖರೀದಿ ಮಾಡಲಿಲ್ಲ. ಹುಣಸೆಹಣ್ಣು, ನಿಂಬೆ ಹಣ್ಣು ಬಳಸಿ ಅಡುಗೆ ಮಾಡಲಾಗುವುದು. ಉಳಿದ ತರಕಾರಿ, ಸೊಪ್ಪಿನ ಬೆಲೆಯೂ ಬಹಳ ಹೆಚ್ಚಳವಾಗಿದೆ’ ಎಂದು ಸುರೇಖಾ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಕೆಜಿಗೆ ₹80 ಇರುತ್ತಿದ್ದ ಹಿರೇಕಾಯಿಯ ಬೆಲೆ ಎರಡು ವಾರಗಳಿಂದ ₹120 ರಿಂದ 160ರವರೆಗೆ ಹೆಚ್ಚಾಗಿದೆ. ಸೌತೆಕಾಯಿ ₹120, ಗಜ್ಜರಿ ಬೆಲೆ ₹120ಕ್ಕೆ ಹೆಚ್ಚಾಗಿದೆ. ಪ್ರತಿ ಕೆಜಿಗೆ ₹25 ಇದ್ದ ಉಳ್ಳಾಗಡ್ಡಿಯ ಬೆಲೆ ಈಗ ₹40ಕ್ಕೆ ಮುಟ್ಟಿದೆ. ಬಹುತೇಕ ತರಕಾರಿಗಳ ಬೆಲೆಯೂ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿವೆ.

ಕೊತ್ತಂಬರಿ ದೊಡ್ಡ ಕಟ್ಟಿಗೆ ₹40 ರಿಂದ ₹50 ಇದ್ದರೆ, ಸಣ್ಣದು ₹20 ಇತ್ತು. ಸಬ್ಬಸಿಗೆ ₹20 ರಿಂದ ₹30, ಕರಿಬೇವು ₹10 ರಿಂದ 15ಕ್ಕೆ ಹೆಚ್ಚಿದೆ. 

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳವಾಗಿರುವುದರಿಂದ ಕೆಜಿ ಕೊಳ್ಳುತ್ತಿದ್ದ ಗ್ರಾಹಕರು, ಅರ್ಧ ಕೆಜಿಗೆ, ಅರ್ಧ ಕೆಜಿ ಕೊಳ್ಳುತ್ತಿದ್ದ ಗ್ರಾಹಕರು ಕಾಲು ಕೆಜಿ ಖರೀದಿ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ತರಕಾರಿಯ ಪ್ರಮಾಣವೇ ಕಡಿಮೆಯಾಗಿದೆ.

ಬಾಗಲಕೋಟೆಯ ಸಂತೆಯ ದೃಶ್ಯ
ಬಾಗಲಕೋಟೆಯ ಸಂತೆಯ ದೃಶ್ಯ
ಪೆಟ್ರೋಲ್‌ ಡೀಸೆಲ್‌ ಬೆಲೆ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಸಾಗಣೆ ವೆಚ್ಚ ಹೆಚ್ಚಾಗಿ ಬೆಲೆಗಳು ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ
- ರಾಜಶೇಖರ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT