ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ತಾಣಗಳಿಗೆ ಬೇಕಿದೆ ಕಾಯಕಲ್ಪ; ಐಹೊಳೆ ಸ್ಥಳಾಂತರ ಯಾವಾಗ?

Published 3 ಫೆಬ್ರುವರಿ 2024, 5:48 IST
Last Updated 3 ಫೆಬ್ರುವರಿ 2024, 5:48 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳು ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಅವಕಾಶಗಳಿವೆ. ಆದರೆ, ನಿಶ್ಚಿತ ಗುರಿಯೊಂದಿಗೆ ಸಾಗದ್ದರಿಂದ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿಲ್ಲ.

ಚಾಲುಕ್ಯರ ಶಿಲ್ಪಕಲೆಯ ತೊಟ್ಟಿಲಾದ ಐಹೊಳೆ ಗ್ರಾಮದ ಸ್ಥಳಾಂತರ ವಿಷಯ ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಸ್ಥಳಾಂತರಕ್ಕೆ ಈ ಹಿಂದೆ ಭೂಮಿ ಪೂಜೆಯೂ ಆಗಿದೆ. ಆದರೆ, ಇನ್ನೂ ಸ್ಥಳಾಂತರ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ.

ಐಹೊಳೆಯಲ್ಲಿರುವ ಹಲವಾರು ಸ್ಮಾರಕಗಳು ಮನೆಗಳ ಸಂದಿ ಗೊಂದಿಗಳಲ್ಲಿ ಸಿಕ್ಕು ಶಿಥಿಲವಾಗಿವೆ. ಸ್ಮಾರಕಗಳಲ್ಲಿಯೇ ವಸ್ತುಗಳನ್ನು ಸಂಗ್ರಹಿಸಿಡುವುದು, ಜಾನುವಾರುಗಳನ್ನು ಕಟ್ಟುವುದು ಇತ್ಯಾದಿ ಮಾಡುವುದರಿಂದ ಪ್ರವಾಸಿಗರು ಅತ್ತ ಹೋಗುವುದನ್ನೇ ನಿಲ್ಲಿಸಿದ್ದಾರೆ.

2013 ರಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಐಹೊಳೆ ಸ್ಮಾರಕಗಳ ರಕ್ಷಣೆಗೆ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. ಚಾಲುಕ್ಯರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರೂ, ಕಾರ್ಯಾರಂಭ ಮಾಡಿಲ್ಲ. ಪ್ರಾಧಿಕಾರಕ್ಕೆ ₹2 ಕೋಟಿ ಬಿಡುಗಡೆ ಮಾಡಲಾಗುವುದು. ಜನವರಿ ಅಂತ್ಯಕ್ಕೆ ಸ್ಮಾರಕಗಳಿಗೆ ಹೊಂದಿಕೊಂಡಿರುವ ಮನೆಗಳನ್ನು ಸ್ಥಳಾಂತರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಭರವಸೆ ನೀಡಿದ್ದರು. ಆದರೆ, ಮನೆ ಸ್ಥಳಾಂತರವಾಗಿಲ್ಲ.

ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿದರೆ, ಪಟ್ಟದಕಲ್ಲಿನ ಹಾಗೆ ಒಂದೇ ಸಮುಚ್ಛಯದಲ್ಲಿ 70ಕ್ಕೂ ಹೆಚ್ಚು ಸ್ಮಾರಕಗಳನ್ನು ನೋಡಬಹುದಾಗಿದೆ. ಇದರಿಂದ ಐಹೊಳೆಯು ಹೊಸ ಹೊಳಪನ್ನೇ ಪಡೆಯಲಿದೆ. ಇಚ್ಛಾಶಕ್ತಿ ಕೊರತೆಯಿಂದ ಸ್ಥಳಾಂತರ ವಿಷಯ ಮುಂದೂಡಿಕೆಯಾಗುತ್ತಲೇ ಇದೆ.

ಸ್ಮಾರಕಗಳಿಗೆ ರಸ್ತೆ ಸಂಪರ್ಕ, ಶೌಚಾಲಯ, ವಸತಿ ಸೌಕರ್ಯ, ಉತ್ತಮ ಹೋಟೆಲ್, ಸಾರಿಗೆ ಸಂಪರ್ಕ ಹಾಗೂ ಪಾರ್ಕಿಂಗ್ ಮತ್ತಿತರ ಮೂಲ ಸೌಲಭ್ಯಗಳು ಇಲ್ಲದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ.

ಬಾದಾಮಿ ಅಗಸ್ತ್ಯತೀರ್ಥ ದಂಡೆಯ 95 ಮನೆಗಳ ತೆರವು ಕಾರ್ಯಾಚರಣೆ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದೆ. ಮೇಣ ಬಸದಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುವಂತಾಗಿದೆ.

ಪ್ರವಾಸಿಗರ ವಾಹನಗಳ ಪಾರ್ಕಿಂಗ್‌ ಮಾಡಲು ಪಾರ್ಕಿಂಗ್ ಪ್ಲಾಜಾ ನಿರ್ಮಾಣಕ್ಕಾಗಿ ಎಪಿಎಂಸಿಯು 9 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ಕೊಟ್ಟಿದೆ. ನಿವೇಶನ ಇನ್ನೂ ಹಸ್ತಾಂತರವಾಗಿಲ್ಲ ಎಂಬುದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮಾತು. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸೌಲಭ್ಯ ಕಲ್ಪಿಸಲು ಹಿನ್ನಡೆಯಾಗಿದೆ.

ಕೂಡಲಸಂಗಮ ಅಭಿವೃದ್ಧಿಯೂ ಕುಂಟುತ್ತಾ ಸಾಗಿದೆ. ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಬಸವ ಅಂತರರಾಷ್ಟ್ರೀಯ ಕೇಂದ್ರ ನಿರ್ಮಾಣವನ್ನು ₹15 ಕೋಟಿ ವೆಚ್ಚದಲ್ಲಿ ಆರಂಭಿಸಿ 2005ರಲ್ಲಿ ಪೂರ್ಣಗೊಳಿಸಲಾಗಿದೆ. ಇಂದಿನವರೆಗೂ ಉದ್ಘಾಟನೆಯಾಗಿಲ್ಲ. ವಿವಿಧ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಸಮಗ್ರ ಅಭಿವೃದ್ಧಿ ಮಾಡಬೇಕಿದೆ.

ಪ್ರವಾಸೋದ್ಯಮ ಬೆಳೆಯಲು ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಬಾಗಲಕೋಟೆಯಲ್ಲಿದೆ. ಅದನ್ನು ಬಾದಾಮಿಗೆ ಸ್ಥಳಾಂತರಿಸಬೇಕು.
–ಎಸ್‌.ಎಚ್. ವಾಸನ ಅಧ್ಯಕ್ಷ ನಿಸರ್ಗ ಬಳಗ
ಐಹೊಳೆ ಸ್ಥಳಾಂತರಕ್ಕೆ ಜಾಗ ತೆಗೆದುಕೊಳ್ಳಲು ಭೂಮಿ ಮಾಲೀಕರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ.
–ಕೆ.ಎಂ. ಜಾನಕಿ ಅಧ್ಯಕ್ಷರು ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT