ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಪಾದಚಾರಿ ಮಾರ್ಗವೇ ಇಲ್ಲ; ನಡೆಯುವುದೆಲ್ಲಿ?

ಪಾದಚಾರಿ ಮಾರ್ಗಕ್ಕೆ ಕಾನೂನಿದ್ದರೂ ಪಾಲನೆಯಾಗುತ್ತಿಲ್ಲ
Published : 23 ಸೆಪ್ಟೆಂಬರ್ 2024, 4:58 IST
Last Updated : 23 ಸೆಪ್ಟೆಂಬರ್ 2024, 4:58 IST
ಫಾಲೋ ಮಾಡಿ
Comments

ಬಾಗಲಕೋಟೆ: ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ, ವಾಹನಗಳಿಗಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಆದರೆ, ಪಾದಚಾರಿಗಳಿಗಾಗಿ ನಿರ್ಮಿಸುವ ಫುಟ್‌ಪಾತ್‌ಗಳ ನಿರ್ಲಕ್ಷದಿಂದಾಗಿ ಪಾದಚಾರಿಗಳ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ಬಾಗಲಕೋಟೆಯಲ್ಲಿ ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಿಲ್ಲ. ಆದರೆ, ನವನಗರದಲ್ಲಿ ನಿರ್ಮಿಸಲಾಗಿದ್ದ ಪಾದಚಾರಿ ಮಾರ್ಗವನ್ನು ನೆಲಸಮಗೊಳಿಸಲಾಗಿದೆ. ಉಳಿದಂತೆ ಜಿಲ್ಲೆಯ ನಗರ, ಪಟ್ಟಣಗಳ ಕೆಲವು ಮಾರ್ಗಗಳಲ್ಲಿ ಪಾದಚಾರಿ ಮಾರ್ಗಗಳಿವೆ. ಆದರೆ, ಅವುಗಳು ಅತಿಕ್ರಮಣಕ್ಕೆ ಒಳಗಾಗಿವೆ.

ಪಾದಚಾರಿ ಮಾರ್ಗಗಳು ಒತ್ತುವರಿಯಾಗಿದ್ದರೂ ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಣ್ಣಿ ಕಂಡೂ ಕಾಣದಂತೆ ತಿರುಗಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ನಾಲ್ಕು ಚಕ್ರದ ವಾಹನಗಳಲ್ಲಿ ಸಂಚರಿಸುವುದರಿಂದ ಪಾದಚಾರಿಗಳ ಸಂಕಷ್ಟ ಗೊತ್ತಾಗುತ್ತಿಲ್ಲ ಎಂಬುದು ಪಾದಚಾರಿಗಳ ದೂರು.

ಪಟ್ಟಣದ ಪಾದಚಾರಿ ಮಾರ್ಗ ಕಣ್ಮರೆ: ಹುನಗುಂದ ಪಟ್ಟಣದಲ್ಲಿನ  ಪಾದಚಾರಿಗಳ  ಮಾರ್ಗಗಳು  ಕಣ್ಮರೆಯಾಗಿದ್ದು,  ಆ ಜಾಗದಲ್ಲಿ ತರೆವಾರಿ ಅಂಗಡಿಗಳು ತಲೆ ಎತ್ತಿವೆ. ‍ಪಾದಾಚಾರಿಗಳ ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪಟ್ಟಣವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಅದಕ್ಕೆ ಅನುಗುಣವಾಗಿ ಸುಸಜ್ಜಿತ, ಯೋಜನಾ ಬದ್ದ ರಸ್ತೆಗಳಾಗಲೀ, ಬೀದಿಗಳಾಗಲೀ ಕಾಣುತ್ತಿಲ್ಲ.

ಪಟ್ಟಣದ ಮುಖ್ಯ ರಸ್ತೆಯ ಎರಡೂಬದಿಯಲ್ಲಿ ಚರಂಡಿ ನಿರ್ಮಿಸಿ ಅದರ ಮೇಲ್ಭಾಗದಲ್ಲಿ ಕಾಂಕ್ರೀಟ್ ಮಾಡಿ ಅಲ್ಲಿ ಪಾದಚಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆ ಜಾಗವನ್ನು ಖಾಸಗಿಯವರು ಅತಿಕ್ರಮಣ ಮಾಡಿಕೊಂಡು ತಮಗೆ ಅನುಕೂಲವಾಗುವಂತೆ ಅಂಗಡಿಗಳಿಗೆ ಸಂಬಂಧಿಸಿದ ಸಾಮಾನುಗಳು, ಬ್ಯಾನರ್, ಫ್ಲೆಕ್ಸ್, ಬೋರ್ಡ್‌ಗಳನ್ನು ಅಳವಡಿಸಿಕೊಂಡಿರುವುದರಿಂದ ಪಾದಾಚಾರಿಗಳು ಸಂಚಾರಕ್ಕೆ ಅವಕಾಶವಿಲ್ಲದಂತಾಗಿದೆ. 

ಅತಿಕ್ರಮಣ ಮಾಡಿರುವ ಜಾಗವನ್ನು ತೆರವುಗೊಳಿಸುವ ಕಾರ್ಯವನ್ನು ಪುರಸಭೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾಡಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತಿದೆ. ಪಟ್ಟಣದ ಮಧ್ಯದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ(ರಾಯಚೂರ– ಬೆಳಗಾವಿ)ಯ ಎರಡೂ ಬದಿಗಳಲ್ಲಿ ಅಂಗಡಿಗಳು ತಲೆ ಎತ್ತಿವೆ. ರಸ್ತೆಯು ಇಕ್ಕಟ್ಟಾಗಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.  

ಬೀಳಗಿಯ ಪಾದಚಾರಿ ಮಾರ್ಗ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳು
ಬೀಳಗಿಯ ಪಾದಚಾರಿ ಮಾರ್ಗ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳು
ಬಾದಾಮಿಯ ರಾಜ್ಯ ಹೆದ್ದಾರಿಯಲ್ಲೇ ಅಂಗಡಿಗಳು ಹಾಗೂ ಪಾದಚಾರಿಗಳ ಸಂಚಾರ
ಬಾದಾಮಿಯ ರಾಜ್ಯ ಹೆದ್ದಾರಿಯಲ್ಲೇ ಅಂಗಡಿಗಳು ಹಾಗೂ ಪಾದಚಾರಿಗಳ ಸಂಚಾರ
ಪಾದಚಾರಿ ರಸ್ತೆ ಇಲ್ಲದ ಗುಳೇದಗುಡ್ಡ ಪಟ್ಟಣದ ಮುಖ್ಯ ರಸ್ತೆ
ಪಾದಚಾರಿ ರಸ್ತೆ ಇಲ್ಲದ ಗುಳೇದಗುಡ್ಡ ಪಟ್ಟಣದ ಮುಖ್ಯ ರಸ್ತೆ

ಫುಟ್‌‌ಪಾತ್ ಆಕ್ರಮಿಸಿಕೊಂಡ ವ್ಯಾಪಾರಸ್ಥರು

ಬೀಳಗಿ: ಬೀಳಗಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿ ಗುರುತಿಸಿಕೊಂಡಿದೆ. ಫುಟ್‌ಪಾತ್ ಸೇರಿದಂತೆ ಹಲವು ಸೌಲಭ್ಯಗಳ ಕೊರತೆಯನ್ನು ಜನರು ಎದುರಿಸುತ್ತಿದ್ದಾರೆ. ಅಂಬೇಡ್ಕರ್ ಸರ್ಕಲ್ ಪ್ರಮುಖ ವೃತ್ತವಾಗಿದ್ದು. ಎಡ ಹಾಗೂ ಬಲಭಾಗದಲ್ಲಿ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರಕ್ಕೆ ಬರುವ ಜನರು ಅಡ್ಡಾ ದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಬಸ್ ನಿಲ್ದಾಣ ಸಮೀಪವೇ ಪಟ್ಟಣ ಪಂಚಾಯ್ತಿ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜುಗಳಿವೆ. ಜನ ಸಂಚಾರ ಹೆಚ್ಚಿದೆ. ಬಸ್‌ ನಿಲ್ದಾಣ ದಿಂದ ನಡೆದುಕೊಂಡು ಬರುತ್ತಾರೆ. ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಆತಿಕ್ರಮಿಸಿಕೊಂಡಿದ್ದಾರೆ. ಬೈಕ್‌ ಕಾರು ಬಸ್‌ ಸರಕು ಸಾಗಣೆ ವಾಹನಗಳು ರಸ್ತೆಯ ಜತೆಗೆ ಪಾದಚಾರಿ ಮಾರ್ಗಗಳನ್ನೂ ಆಕ್ರಮಿಸಿಕೊಳ್ಳುತ್ತವೆ. ಸಣ್ಣಪುಟ್ಟ ವ್ಯಾಪಾರಿಗಳು ನಾಗರಿಕರು ಓಡಾಡುವ ಕಡೆಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಪರಿಣಾಮ ಜನರು ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.  ‘ಬಸ್‌ಗಳು ಮೈಮೇಲೆಯೇ ಬಂದಂತಹ ಅನುಭವವಾಗುತ್ತದೆ. ಎದುರಿನಿಂದ ಬರುವ ವಾಹನ ನೋಡಿಕೊಂಡು ಸಾಗುವುದರ ಜತೆಗೆ ಹಿಂದಿನಿಂದ ಬರುವ ವಾಹನ ನೋಡಿಕೊಂಡು ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಸಂಚಕಾರ’ ಎನ್ನುತ್ತಾರೆ ಪಾದಚಾರಿಗಳು.

ದುರಸ್ತಿಗೆ ಕಾದಿರುವ ಪಾದಚಾರಿ ಮಾರ್ಗ

ಇಳಕಲ್: ನಗರದ ಕಂಠಿ ವೃತ್ತದಿಂದ ಬಸ್ ನಿಲ್ದಾಣ ಮೂಲಕ ಬಸವೇಶ್ವರ ಸರ್ಕಲ್ ತಲುಪುವ ದ್ವಿಪಥ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗವೂ ಸಂಪೂರ್ಣ ಹಾಳಾಗಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಸಾಕಷ್ಟು ವಾಹನ ದಟ್ಟಣೆ ಇರುವ ಈ ಪ್ರಮುಖ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಗಟಾರ ಇದ್ದು ಮೇಲ್ಛಾವಣಿ ಮುರಿದು ಬಿದ್ದಿದೆ. ಇರುವ ಅಲ್ಪಸ್ವಲ್ಪ ಪಾದಚಾರಿ ಮಾರ್ಗವನ್ನು ಬೀದಿ ವ್ಯಾಪಾರಿಗಳು ವಾಣಿಜ್ಯ ಮಳಿಗೆಗಳ ಮಾಲೀಕರು ಆಕ್ರಮಿಸಿಕೊಂಡಿದ್ದಾರೆ. ನಗರಸಭೆಯಿಂದ ಮಹಾಂತೇಶ ಚಿತ್ರಮಂದಿರ ಮೂಲಕ ಬನ್ನಿಕಟ್ಟಿ ಪೊಲೀಸ್ ಮೈದಾನ ತಲುಪುವ ಪ್ರಮುಖ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಇಲ್ಲಿ ಸಂಚರಿಸಲು ವಾಹನ ಸವಾರರು ಪಾದಚಾರಿಗಳು ಪರದಾಡುತ್ತಿದ್ದಾರೆ. ಹೆಚ್ಚು ದಟ್ಟಣೆ ಇರುವ ಈ ರಸ್ತೆಯು ಅತಿಕ್ರಮಣದಿಂದಾಗಿ ಇಕ್ಕಟ್ಟಾಗಿದೆ. ಕೇವಲ 3 ವರ್ಷಗಳ ಹಿಂದೆ ಮಾಡಿದ್ದ ಕಾಂಕ್ರೀಟ್ (ಸಿಸಿ) ರಸ್ತೆ ಕಳಪೆ ಕಾಮಗಾರಿಯಿಂದಾಗಿ ಹಾಳಾಗಿ ಹೋಗಿದೆ. ಮಳೆಯ ನೀರು ಹರಿದು ಹೋಗಲು ಸಮರ್ಪಕ ಗಟಾರ ವ್ಯವಸ್ಥೆ ಇಲ್ಲ. ಕೂಡಲೇ ನಗರಸಭೆಯು ಈ ರಸ್ತೆಯನ್ನು ಸಂಚಾರ ಯೋಗ್ಯವಾಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಾದಚಾರಿ ರಸ್ತೆ ಮಾಯ

ಬಾದಾಮಿ: ಐತಿಹಾಸಿಕ ಪ್ರವಾಸಿ ತಾಣಕ್ಕೆ ಬಂದರೆ ಇಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪಾದಚಾರಿ ರಸ್ತೆ ಕಳೆಯುವುದರ ಜೊತೆಗೆ ಅರ್ಧ ರಸ್ತೆಯೂ ಮಾಯವಾಗಿದೆ. ಯಾರಾದರೂ ಹುಡುಕಿ ಕೊಡುವಿರಾ? ನೀರಾವರಿ ಇಲಾಖೆಯಿಂದ ಪುಲಿಕೇಶಿ ವೃತ್ತ. ಪುಲಿಕೇಶಿ ವೃತ್ತದಿಂದ ಬಸ್ ನಿಲ್ದಾಣದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಮತ್ತು ಪಾದಚಾರಿ ರಸ್ತೆಯಲ್ಲಿ ಅನೇಕ ಗೂಡಂಗಡಿಗ: ವರ್ತಕರು ಒತ್ತುವರಿ ಮಾಡಿದ್ದಾರೆ. ಮೋಟಾರ್ ಬೈಕ್  ನಿಲುಗಡೆ ಮಾಡುವುದರಿಂದ ರಸ್ತೆಯೂ ಇಕ್ಕಟ್ಟಾಗಿದೆ. ಪತ್ರಿಕೆಗಳಲ್ಲಿ ಬಂದಾಗ ಪೊಲೀಸರು ಮತ್ತು ಪುರಸಭೆ ಸಿಬ್ಬಂದಿ ತೆರವು ಮಾಡಿಸುತ್ತಾರೆ. ವಾರದಲ್ಲಿ ಮತ್ತದೇ ಸ್ಥಿತಿ ಎದುರಾಗುತ್ತದೆ. ಇದ್ದ ಅರ್ಧ ರಸ್ತೆಯಲ್ಲಿಯೇ ವಾಹನಗಳ ಜೊತೆಗೆ ಜನರೂ ಜೀವಭಯದಲ್ಲಿ ಸಂಚರಿಸುವ ಸ್ಥಿತಿ ಇದೆ. ‘ಟಾಂಗಾ ಬಸ್ ನಿಲ್ದಾಣ ಸರ್ಕಾರಿ ಆಸ್ಪತ್ರೆ ಮತ್ತು ಸುಂಕದಕಟ್ಟೆ ಮಾರುತಿ ಮಂದಿರ ಸಮೀಪದ ರಸ್ತೆ ವೃತ್ತಗಳಲ್ಲಿ ಸಂಚರಿಸುವುದು ಕಷ್ಟವಾಗಿದೆ’ ಎಂದು ಪಾದಚಾರಿ ರಾಮನಗೌಡ ಹಳೇಮನಿ ಹೇಳಿದರು.

ಪಾದಚಾರಿ ರಸ್ತೆ ಇಲ್ಲದ ಗುಳೇದಗುಡ್ಡ ಪಟ್ಟಣ

ಗುಳೇದಗುಡ್ಡ: ಪಟ್ಟಣದಲ್ಲಿ ಮೂರು ಪ್ರಮುಖ ರಸ್ತೆಗಳಿವೆ ಚೌಬಜಾರ ಸರಾಫ್ ಬಜಾರ ನಡುವಿನ ಪೇಟೆ ರಸ್ತೆಗಳಿವೆ. ಅಲ್ಲಿ ವಾಹನ ಸಂಚಾರ ದಟ್ಟಣೆ ಪ್ರತಿ ದಿನ ಕಂಡು ಬರುತ್ತದೆ. ಆದರೆ ಜನರು ನಡೆದು ಹೋಗಲು ಪಾದಚಾರಿ ರಸ್ತೆಯನ್ನು ಇದುವರೆಗೂ ನಿರ್ಮಾಣ ಮಾಡಿಲ್ಲ. ಪಟ್ಟಣದ ಪುರಸಭೆಯಲ್ಲಿ ಹಲವು ಸಲ ರಸ್ತೆ ವಿಸ್ತರಣೆ ಹಾಗೂ ಪಾದಚಾರಿ ರಸ್ತೆ ನಿರ್ಮಣಕ್ಕೆ ಹಲವು ಸಲ ನಿರ್ಣಯ ಕೈಗೊಂಡರೂ ಇದುವರೆಗೆ ನಿರ್ಮಾಣ ಸಾಧ್ಯವಾಗಿಲ್ಲ. ಇತ್ತೀಚಿಗೆ ಪಟ್ಟಣದಲ್ಲಿ ಸಂಗಮ ಸಂಕೇಶ್ವರ ಹೆದ್ದಾರಿ ಹಾದು ಹೋಗಿದ್ದು ಕೆಲವು ಕಡೆ ಮಾತ್ರ ಪಾದಚಾರಿ ರಸ್ತೆ ನಿರ್ಮಾಣ ಮಾಡಲಾಗಿದೆ ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗಿಲ್ಲ. ‘ಪಟ್ಟಣದಲ್ಲಿ ಮುಖ್ಯ ರಸ್ತೆಗಳಿಗೆ ಪುಟ್ಪಾತ್ ಇಲ್ಲದೆ ನಡೆದಾಡಲು ಕಷ್ಟವಾಗುತ್ತಿದೆ ಸಂಬಂಧಿಸಿದವರು ಬೇಗನೆ ಪಾದಚಾರಿ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು’ ಎಂದು ಸ್ಥಲೀಯರಾದ ವಿಠ್ಠಲಸಾ ಕೆ.ಬದಿ ಒತ್ತಾಯಿಸಿದರು. ‘ಪಟ್ಟಣದ ಒಳಗೆ ಪಾದಚಾರಿ ರಸ್ತೆ ನಿರ್ಮಾಣ ಸಾದ್ಯವಾಗಿಲ್ಲ. ಆದರೆ ಇತ್ತೀಚಿಗೆ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾದ ಹೊಸ ರಸ್ತೆಯಲ್ಲಿ  ಮಾಡಲಾಗಿದೆ’ ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ ತಿಳಿಸಿದರು. 

ಬಹುತೇಕ ಕಡೆಗಳಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವುದರಿಂದ ಜನರು ಜೀವಭಯದಲ್ಲಿ ರಸ್ತೆಗಳಲ್ಲಿ ಸಂಚರಿಸುವಂತಾಗಿದೆ
–ಮಹಾಂತೇಶ ಹುನಗುಂದ, ನಿವಾಸಿ
ಅತಿಕ್ರಮಣಗೊಂಡಿರುವ ಫುಟ್‌ಪಾತ್ ತೆರವುಗೊಳಿಸುತ್ತೇವೆ. ಇಲ್ಲದ ಕಡೆಗಳಲ್ಲಿ ನಿರ್ಮಾಣಕ್ಕೆ ಪುರಸಭೆಗೆ ತಿಳಿಸಲಾಗುವುದು
–ವಿಠ್ಠಲ ನಾಯಕ, ಪಿಎಸ್‌ಐ

ಪ್ರಜಾವಾಣಿ ತಂಡ: ಎಸ್‌.ಎಂ. ಹಿರೇಮಠ, ಬಸವರಾಜ ಅ. ನಾಡಗೌಡ, ಸಂಗಮೇಶ ಹೂಗಾರ, ಕಾಶಿನಾಥ ಸೋಮನಕಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT