ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್‌: ಭಾವೈಕ್ಯದ ಪ್ರತೀಕ ಮುರ್ತುಜಾ ಖಾದ್ರಿ ದರ್ಗಾ ಉರುಸು

Published 21 ಫೆಬ್ರುವರಿ 2024, 5:11 IST
Last Updated 21 ಫೆಬ್ರುವರಿ 2024, 5:11 IST
ಅಕ್ಷರ ಗಾತ್ರ

ಇಳಕಲ್‌: ಕೋಮು ಸೌಹಾರ್ದ ಹಾಗೂ ಭಾವೈಕ್ಯದ ಪ್ರತೀಕವಾಗಿರುವ ಹಜರತ್‌ ಸೈಯ್ಯದ್‌ ಷಾ ಮುರ್ತುಜಾ ಖಾದ್ರಿ ದರ್ಗಾದ 155ನೇ ಉರುಸು ಅಂಗವಾಗಿ ಫೆ. 22ರಂದು ಗಂಧ, 23ರಂದು ಉರುಸು ಹಾಗೂ 24ರಂದು ಜಿಯಾರತ್ ನಡೆಯಲಿದೆ.

ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಹಾಗೂ ಹಿಂದೂಗಳು ದರ್ಗಾಕ್ಕೆ ಭೇಟಿ ನೀಡಿ, ಸಕ್ಕರೆ ಸಲ್ಲಿಸಿ, ಹರಕೆ ಸಲ್ಲಿಸಲಿದ್ದಾರೆ. ಸೈಯ್ಯದ್‌ ಷಾ ಮುರ್ತುಜಾ ಖಾದ್ರಿ ಅವರು ಪ್ರಸಿದ್ಧ ಸೂಫಿ ಸಂತರು. ಅಧ್ಯಾತ್ಮ ಹಾಗೂ ಪ್ರವಚನದ ಮೂಲಕ ಜನರ ನಡುವಿನ ಎಲ್ಲ ರೀತಿಯ ಭೇದಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು. ಸೌಹಾರ್ದ ಹಾಗೂ ಸಮಾನತೆಯ ಬದುಕಿಗಾಗಿ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಬೋಧಿಸಿ ಜನರ ಪ್ರೀತಿ, ವಿಶ್ವಾಸ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು.

ವಿಜಯ ಮಹಾಂತೇಶ್ವರ ಮಠದ 16ನೇ ಪೀಠಾಧಿಪತಿ ಆಗಿದ್ದ ಲಿಂ.ವಿಜಯ ಮಹಾಂತ ಶಿವಯೋಗಿಗಳ ಹಾಗೂ ಸೂಫಿ ಸಂತ ಸೈಯ್ಯದ್‌ ಷಾ ಮುರ್ತುಜಾ ಖಾದ್ರಿ ಅವರ ನಡುವಿನ ಸ್ನೇಹ ಈ ಭಾಗದಲ್ಲಿ ಇವತ್ತಿಗೂ ಜನಜನಿತ. ಈ ಸಂತರ ನಡುವಿನ ಗೆಳೆತನ ಹಾಗೂ ವಿಶ್ವಾಸದ ಪ್ರಭಾವಳಿಯ ಕಾರಣ ಇಲ್ಲಿಯ ಜನರಲ್ಲಿ ಪರಧರ್ಮ ಸಹಿಷ್ಣುತೆ ಹಾಗೂ ಭಾವೈಕ್ಯ ಕಾಣಬಹುದು.

ಉರುಸಿನ ಧಾರ್ಮಿಕ ವಿಧಿ ವಿಧಾನಗಳಲ್ಲಿ ನಗರದ ಚವ್ಹಾಣ, ಅರಳಿಕಟ್ಟಿ ಹಾಗೂ ಮನ್ನಾಪುರ ಕುಟುಂಬಗಳು 3 ತಲೆಮಾರುಗಳಿಂದ ಪಾಲ್ಗೊಂಡು ಸಂಪ್ರದಾಯವನ್ನು ಮುಂದುರಿಸಿವೆ. ಸಾವಿರಾರು ಹಿಂದೂಗಳು ಶ್ರದ್ಧೆಯಿಂದ ಉರುಸಿನಲ್ಲಿ ಪಾಲ್ಗೊಳ್ಳುತ್ತಾರೆ.

ದರ್ಗಾಕ್ಕೆ ಆಡಳಿತಾಧಿಕಾರಿ ನೇಮಕ : ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡ ಕಾರಣ ಕರ್ನಾಟಕ ವಕ್ಫ್‌ ಮಂಡಳಿ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಅಧ್ಯಕ್ಷರಾಗಿದ್ದ ಉಸ್ಮಾನಘನಿ ಹುಮನಾಬಾದ ವಕ್ಫ್‌ ಮಂಡಳಿಯ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಈಚೆಗೆ ಧಾರವಾಡ ಹೈಕೋರ್ಟ್‌ ಪೀಠವು ಕರ್ನಾಟಕ ವಕ್ಫ್‌ ಮಂಡಳಿಯ ಆಡಳಿತಾಧಿಕಾರಿ ನೇಮಕ ಆದೇಶ ರದ್ದತಿ ಕೋರಿ ಸಲ್ಲಿಕೆಯಾಗಿದ್ದ 3 ಅರ್ಜಿಗಳನ್ನು ವಜಾ ಮಾಡಿದೆ. ಫೆ. 17ರಂದು ಇಳಕಲ್‌ ತಹಶೀಲ್ದಾರ್ ಸತೀಶ ಕೂಡಲಗಿ ದರ್ಗಾದ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಸಹಾಯಕರಾಗಿ ಬಾಗಲಕೋಟೆ ವಕ್ಫ್‌ ಸಲಹಾ ಮಂಡಳಿಯ ಅಧಿಕಾರಿ ಕಾರ್ಯನಿರ್ವಹಿಸುವರು. ದರ್ಗಾದ ಧಾರ್ಮಿಕ ಕಾರ್ಯಕ್ರಮಗಳನ್ನು ಎಂದಿನಂತೆ ದರ್ಗಾದ ಗುರುಗಳಾದ (ಸಜ್ಜಾದ ನಸೀನ್‌) ಆಗಿರುವ ಫೈಸಲ್‌ ಪಾಶಾ ಅವರು ನೆರವೇರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT