ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿವಿಧ ಪ್ರಯತ್ನ

ಮನೆಗಳಿಗೆ ಭೇಟಿ ನೀಡಿ ಮಕ್ಕಳ ಅಧ್ಯಯನಕ್ಕೆ ಮಾರ್ಗದರ್ಶನ
Published 23 ಫೆಬ್ರುವರಿ 2024, 4:27 IST
Last Updated 23 ಫೆಬ್ರುವರಿ 2024, 4:27 IST
ಅಕ್ಷರ ಗಾತ್ರ

ಜಮಖಂಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಅಧ್ಯಯನಕ್ಕೆ ಪೂರಕ ವಾತಾವರಣ ಕಲ್ಪಿಸಲು ಶಿಕ್ಷಕರು ಮುಂದಾಗಿದ್ದಾರೆ. ಬಿಇಒ ಸೂಚನೆ ಮೇರೆಗೆ ತಾಲ್ಲೂಕಿನ ಹಲವಾರು ಶಾಲೆಯ ಶಿಕ್ಷಕರು ಕಾರ್ಯ ಪ್ರವೃತ್ತರಾಗಿದ್ದಾರೆ.

ಬಿಇಒ ಅಶೋಕ ಬಸಣ್ಣವರ ಸಹ ಕೆಲವು ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಅಧ್ಯಯನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಿವಿಧ ಶಾಲೆಯ ಶಿಕ್ಷಕರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗೆ ಮೊದಲ ಹಂತದ ಭೇಟಿ ನೀಡಿ, ಮಕ್ಕಳ ಕಲಿಕೆಗೆ ಮಹತ್ವ ಕೊಡಲು ಪೋಷಕರಿಗೆ ಸೂಚಿಸಿದ್ದಾರೆ. ಎರಡನೇ ಹಂತದಲ್ಲಿ ಸಾಧಾರಣ ವಿದ್ಯಾರ್ಥಿಗಳ ಮನೆಗೆ, ಮೂರನೇ ಹಂತದಲ್ಲಿ ಓದಿನಲ್ಲಿ ಮುಂದಿರುವ ಮಕ್ಕಳ ಮನೆಗೆ ಭೇಟಿ ನೀಡಲಾಗಿದೆ. ಮೂರು ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮನೆಗಳಲ್ಲಿ ಸಮಾಲೋಚನೆ ನಡೆಸಲಾಗಿದೆ.

ಇಲಾಖೆ ಆದೇಶದಂತೆ ಮೂರು ಪೂರಕ ಪರೀಕ್ಷೆ ಮಾತ್ರವಲ್ಲದೇ, ಶಾಲಾ ಹಂತದಲ್ಲಿಯೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪಬ್ಲಿಕ್ ಪರೀಕ್ಷೆ ಭಯ ಇಲ್ಲದಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ಧೈರ್ಯ ತುಂಬಲಾಗಿದೆ ಎಂದು ಶಿಕ್ಷಕ ನರಸಿಂಹ ಕಲ್ಲೊಳ್ಳಿ ವಿವರಿಸಿದರು.

ಮಕ್ಕಳು ಮನಸ್ಸು ಬೇರೆಡೆಗೆ ಹರಿಯದಂತೆ, ಕಠಿಣ ವಿಷಯಗಳನ್ನು ಶಿಕ್ಷಕರಿಂದ ಪರಿಹರಿಸಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ, ಬುದ್ಧಿವಂತ ಹಾಗೂ ಮಧ್ಯಮ ಕಲಿಕಾ ಸಾಮರ್ಥ್ಯದ ಮಕ್ಕಳನ್ನು ಶಾಲೆಗಳಲ್ಲಿ ವಿಂಗಡಣೆ ಮಾಡಲಾಗಿದ್ದು, ಪಾಸಿಂಗ್ ಪ್ಯಾಕೇಜ್ ಮೂಲಕ ಹಿಂದುಳಿದ ಮಕ್ಕಳಿಗೆ ಕಲಿಸಲಾಗುತ್ತಿದೆ. ಬುದ್ಧಿವಂತ ಮಕ್ಕಳಿಗೆ ಪಠ್ಯಪುಸ್ತಕ ಓದಿಸಲಾಗುತ್ತಿದೆ. ಮಧ್ಯಮ ವರ್ಗದ ಮಕ್ಕಳನ್ನು ಪ್ರೋತ್ಸಾಹಿಸಿ ಪಠ್ಯಪುಸ್ತಕ ಕಲಿಕೆ ಮಟ್ಟಕ್ಕೆ ಬೆಳೆಸಲಾಗುತ್ತಿದೆ ಎಂದು ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದ ಮುಖ್ಯಗುರು ಮಹಾಂತೇಶ ನರಸನಗೌಡರ ತಿಳಿಸಿದರು.

ಈ ಬಾರಿ ಬಾಗಲಕೋಟೆ ಜಿಲ್ಲೆಯನ್ನು ಕನಿಷ್ಠ 10ನೇ ಸ್ಥಾನಕ್ಕೆ ತರಲು ಕಳೆದ ವರ್ಷದಿಂದ ಪ್ರಯತ್ನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೇರಣಾದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

-ಶಶಿಧರ ಕುರೇರ ಜಿ.ಪಂ. ಸಿಇಒ

ಮಕ್ಕಳ ಓದಿನ ವಾತಾವರಣ ಹೀಗಿರಲಿ

ಮಕ್ಕಳು ಓದುವ ಸಮಯದಲ್ಲಿ ಪೋಷಕರು ಶಾಂತತೆ ಟಿವಿ ಮೊಬೈಲ್ ಬಳಸಬಾರದು ಹಿತಕರ ವಾತಾವರಣ ಸೃಷ್ಟಿ ಮಕ್ಕಳಿಗೆ ಆರೋಗ್ಯಕರವಾದ ಆಹಾರ ಕೊಡಬೇಕು. ಬೆಳಿಗ್ಗೆ 5 ಗಂಟೆ ಎದ್ದು ಓದಬೇಕು. ಶಾಲೆ ಬಿಟ್ಟ ನಂತರ ಒಂದು ಗಂಟೆ ವಿಶ್ರಾಂತಿ ರಾತ್ರಿ 10 ಗಂಟೆಯವರೆಗೆ ಓದಿಸಬೇಕು. ಭಯದ ವಾತಾವರಣ ಇಲ್ಲದಂತೆ ನೋಡಿಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಆರೋಗ್ಯಕ್ಕೆ ತೊಂದರೆ ಆಗದಂತಹ ಪೌಷ್ಟಿಕ ಆಹಾರವನ್ನು ಕೊಡಬೇಕು ಎಂದು ಶಿಕ್ಷಕ ವರ್ಗ ಪೋಷಕರಿಗೆ ತಿಳಿವಳಿಕೆ ನೀಡುತ್ತಿದೆ.

ವಿದ್ಯಾರ್ಥಿವಾರು ಕೆಂಪು ನೀಲಿ ಹಾಗೂ ಹಸಿರು ಗುಂಪು ರಚನೆ

ವಿದ್ಯಾರ್ಥಿ ದತ್ತು ಯೋಜನೆ ಪರಸ್ಪರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಫಲಿತಾಂಶಮುಖಿ ಗ್ರಂಥಾಲಯ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಪ್ರೇರಣಾ ಕಾರ್ಯಕ್ರಮ ನಾನು ಪಾಸಾಗುವೆ ಸಂಕಲ್ಪ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ವಿಷಯ ಸಮೂಹ ಶೈಕ್ಷಣಿಕ ಮೌಲ್ಯಮಾಪನ ಫೋನ್-ಇನ್ ಅಮ್ಮಂದಿರ ಸಭೆ ವಿಶೇಷ ತರಗತಿ ಗುಂಪು ಅಧ್ಯಯನ ಪ್ರತಿ ಶನಿವಾರ ರಸಪ್ರಶ್ನೆ ಪ್ರೇರಣಾ ಉಪನ್ಯಾಸ ಪ್ರಶ್ನೆ ಪೆಟ್ಟಿಗೆ ನಿರ್ವಹಣೆ ಅನಿರೀಕ್ಷಿತ ಪರೀಕ್ಷೆಗಳು ಪಠ್ಯ ಪೂರಕ ಸ್ಪರ್ಧೆ ಪ್ರಶ್ನೆ ಪತ್ರಿಕೆ ಪರಿಚಯ ತಂತ್ರಜ್ಞಾನ ಬಳಕೆ ಗೋಡೆ ಬರಹ ಸೇರಿದಂತೆ ಹಲವಾರು ಕಾರ್ಯಕ್ರಮ ಹಾಕಿಕೊಂಡು ಫಲಿತಾಂಶಕ್ಕೆ ಪ್ರಯತ್ನಿಸುತ್ತಿದ್ದೇವೆ ಎಂದು ಬಿಇಒ ಅಶೋಕ ಬಸಣ್ಣವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT