ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಆಸೆಯೋ, ಮೋದಿ ಮೇಲಿನ ಪ್ರೀತಿಯೋ...

ಗೆಲುವಿಗೆ ಬೇಕಿದೆ 6 ಲಕ್ಷಕ್ಕೂ ಹೆಚ್ಚು ಮತಗಳು
Published 13 ಮೇ 2024, 4:31 IST
Last Updated 13 ಮೇ 2024, 4:31 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿಗಳೆರಡು ಅಭ್ಯರ್ಥಿಗಳ ವರ್ಚಸ್ಸಿಗಿಂತ ಅಲೆಗಳನ್ನು ಅವಲಂಬಿಸಿದ್ದವು. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ನೆಚ್ಚಿಕೊಂಡಿದ್ದರೆ, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯ ಅಲೆಯನ್ನು ನೆಚ್ಚಿಕೊಂಡಿದ್ದು ಕಂಡು ಬಂದಿತು.

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೊಸ ಮುಖವಾಗಿದ್ದರಿಂದ ನಿಗದಿತ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಲಾಭ ಪಡೆದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ಚಲಾಯಿಸುತ್ತಾರೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿತ್ತು.

ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವೂ ಅದನ್ನೇ ಗಮನದಲ್ಲಿಟ್ಟುಕೊಂಡಿತ್ತು. ಪ್ರಚಾರ ಸಂದರ್ಭದಲ್ಲಿ ಗ್ಯಾರಂಟಿಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರದ ನ್ಯಾಯಪತ್ರಗಳ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ, ಮನೆಗೆ ಹಂಚಿತು. ಅದರೊಂದಿಗೆ ಕೆಲವು ಸಮುದಾಯಗಳ ಮತಗಳನ್ನು ಗುರಿಯಾಗಿಟ್ಟುಕೊಂಡು ಪ್ರಚಾರ ಮಾಡಿತು.

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ 20 ವರ್ಷಗಳಿಂದ ಸಂಸದರಾಗಿದ್ದರೂ, ದೇಶದ ಸುರಕ್ಷತೆಗೆ ಮತ್ತೊಮ್ಮೆ ಪ್ರಧಾನಿ ಮೋದಿ ಅವರಿಗೆ ಅಧಿಕಾರ ನೀಡೋಣ ಎನ್ನುವುದನ್ನೇ ಪ್ರಚಾರದ ಪ್ರಮುಖ ಅಂಶವನ್ನಾಗಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆಯಿಸಿ ಪ್ರಚಾರವನ್ನೂ ಮಾಡಿಸಲಾಯಿತು.

ದೇಶದಲ್ಲಿ ಸುಭದ್ರ ಆಡಳಿತಕ್ಕಾಗಿ, ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಗೆ ಮತ ನೀಡಿ ಎಂದು ಕೇಳಿಕೊಳ್ಳಲಾಯಿತು. ಗದ್ದಿಗೌಡರ ಮಾತ್ರ ತಮ್ಮ ಸಾಧನೆಯ ಜೊತೆಗೆ ಮೋದಿ ಅವರ ಅಲೆಯ ಬಗ್ಗೆಯೂ ಪ್ತಸ್ತಾಪಿಸಿದರು.

ಒಟ್ಟು 13.12 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಗೆಲುವಿನ ಜಯಮಾಲೆ ಧರಿಸಲು ಅಭ್ಯರ್ಥಿಗಳು 6 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆಯಬೇಕಾಗಿದೆ. ಕಳೆದ ಬಾರಿ ಗದ್ದಿಗೌಡರ 6.64 ಲಕ್ಷ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವೀಣಾ ಕಾಶಪ್ಪನವರ 4.96 ಲಕ್ಷ ಮತಗಳನ್ನು ಪಡೆದಿದ್ದರು.

ಬಿಜೆಪಿ ಅಭ್ಯರ್ಥಿ ಕಳೆದ ಬಾರಿ ಗಳಿಸಿದ್ದ ಮತಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರೂ ಗೆಲುವಿನ ಜಯಮಾಲೆ ಅವರ ಕೊರಳನ್ನು ಅಲಂಕರಿಸಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಕಳೆದ ಬಾರಿಗಿಂತ ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಬೇಕಾಗಿದೆ.

ನಿರೀಕ್ಷಿಸಿದ ಪ್ರಮಾಣದಲ್ಲಿ ಮಹಿಳೆಯರು ಮತಗಟ್ಟೆಗೆ ಬರದಿರುವುದು ಕಾಂಗ್ರೆಸ್‌ನಲ್ಲಿ ಆತಂಕ ಉಂಟು ಮಾಡಿದ್ದರೂ, ಬಂದ ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ ಎಂಬ ವಾದ ಅವರದ್ದಾಗಿದೆ. ಪ್ರಧಾನಿ ಮೋದಿ ಅವರ ಅಲೆಯ ಬಗ್ಗೆ ಏನೇ ವಾದಗಳಿದ್ದರೂ, ಅವರ ಅಭಿಮಾನಿಗಳು ಚದುರಿಲ್ಲ. ಹಾಗಾಗಿ, ಕಳೆದ ಬಾರಿಯ ಮತಗಳನ್ನು ಗಳಿಸುವಲ್ಲಿ ತೊಂದರೆ ಇಲ್ಲ ಎನ್ನುವುದು ಅವರ ವಾದ. ಗೆಲುವಿನ ಲೆಕ್ಕಾಚಾರ ನಡದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT