ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ನೇಕಾರರಿಗೆ ಬೇಕಿದೆ ಜವಳಿ ಪಾರ್ಕ್‌ ಬಲ

ಕಾಂಗ್ರೆಸ್‌ ಸರ್ಕಾರದ ಮೇಲೆ ನಿರೀಕ್ಷೆಯ ಭಾರ
Published 5 ಜುಲೈ 2023, 16:02 IST
Last Updated 5 ಜುಲೈ 2023, 16:02 IST
ಅಕ್ಷರ ಗಾತ್ರ

-ಬಸವರಾಜ ಹವಾಲ್ದಾರ

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ, ಹುನಗುಂದ, ಜಮಖಂಡಿ, ತೇರದಾಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಬಹುತೇಕ ಕಡೆಗಳಲ್ಲಿ ನೇಕಾರರಿದ್ದಾರೆ. ಇಳಕಲ್‌ ಸೀರೆ, ಗುಳೇದಗುಡ್ಡ ಖಣ, ರಬಕವಿ–ಬನಹಟ್ಟಿಯಲ್ಲಿನ ಸೀರೆಗಳು ವಿಶ್ವ ಪ್ರಸಿದ್ಧಿಯಾಗಿವೆ. ಆದರೆ, ನೇಕಾರರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ಬದುಕು ಸಂಕಷ್ಟ ಸಿಲುಕಿದೆ. ಜವಳಿ ಪಾರ್ಕ್‌ ಮಾಡಬೇಕು ಎಂಬ ಕೂಗು ಕೂಗಾಗಿಯೇ ಉಳಿದೆ.

ಕಾಂಗ್ರೆಸ್‌ ಸರ್ಕಾರ ಗುಳೇದಗುಡ್ಡದಲ್ಲಿ, ಬಿಜೆಪಿ ಸರ್ಕಾರ ರಬಕವಿ–ಬನಹಟ್ಟಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿವೆ. ಇದೀಗ ಶಾಸಕ ವಿಜಯಾನಂದ ಕಾಶಪ್ಪನವರ ಇಳಕಲ್‌ನಲ್ಲಿ ಜವಳಿ ಪಾರ್ಕ್‌ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಂದು ಬಜೆಟ್ ಬಂದಿದೆ. ಈ ಬಾರಿ ಬಜೆಟ್‌ನಲ್ಲಾದರೂ ಅವುಗಳ ಕಾರ್ಯಾರಂಭಕ್ಕೆ ಚಾಲನೆ ಸಿಗಲಿ ಎಂಬುದು ನೇಕಾರರ ಆಗ್ರಹ.

ನೇಕಾರರ 10 ಎಚ್‌ಪಿ ವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಿದ್ದರಾಮಯ್ಯ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಘೋಷಣೆ ಮಾಡಿದ್ದರು. ಈಗ ಅದನ್ನು ಅನುಷ್ಠಾನಕ್ಕೆ ತರುವ ಮೂಲಕ ನೇಕಾರರಿಗೆ ಬಲ ತುಂಬುವ ಕೆಲಸ ಮಾಡಬೇಕಿದೆ.

ಮೊಸಳೆ ಪಾರ್ಕ್: ಬೇಸಿಗೆಯಲ್ಲಿ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದರೆ ಸಾಕು ನದಿಯಲ್ಲಿನ ಮೊಸಳೆಗಳು ಆಹಾರ ಹುಡುಕಿಕೊಂಡು ನದಿ ದಡದ ಗ್ರಾಮಗಳತ್ತ ಮುಖ ಮಾಡುತ್ತವೆ. ನದಿ ದಡಕ್ಕೆ ಹೋಗುವವರ ಮೇಲೆ ದಾಳಿ ಮಾಡುತ್ತವೆ.

ಜಮಖಂಡಿ ತಾಲ್ಲೂಕಿನ ಟಕ್ಕಳಕಿ, ಹಿರೇಪಡಸಲಗಿ, ಬಿದರಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಬಂದಿದ್ದ ಮೊಸಳೆಗಳನ್ನು ಜನರು ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಮೊಸಳೆ ದಾಳಿ ಮಾಡಿದೆ. ಕಳೆದ ವರ್ಷ ಬಾಗಲಕೋಟೆ ತಾಲ್ಲೂಕಿನ ಮುರನಾಳ ಕೆರೆಯಲ್ಲಿಯೂ ಮೊಸಳೆ ಪತ್ತೆಯಾಗಿತ್ತು. ಆದ್ದರಿಂದ ಮೊಸಳೆ ಪಾರ್ಕ್‌ ವೊಂದನ್ನು ಸ್ಥಾಪಿಸಬೇಕು ಎಂಬ ಬೇಡಿಕೆ ಇದೆ.

ಜಿಲ್ಲೆಯಲ್ಲಿ ದಾಳಿಂಬೆ, ಸಪೋಟ, ಕೆಂಪು ಮೆಣಸಿನಕಾಯಿ, ಅರಿಸಿನ ಸೇರಿದಮತೆ ಹಲವು ತೋಟಗಾರಿಕೆಯ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಅವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವಿದ್ದರೂ, ಅದರ ಪೂರ್ಣ ಲಾಭ ರೈತರಿಗೆ ದಕ್ಕಿಲ್ಲ. ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ರೈತರಿಗೆ ಲಾಭದ ಹಾದಿ ತೋರಿಸಬೇಕಿದೆ.

ಪಕ್ಷಿಧಾಮ: ಹಿನ್ನೀರು ಆವರಿಸಿರುವ ಬೀಳಗಿ ತಾಲ್ಲೂಕಿನ ಹೆರಕಲ್ ಬ್ಯಾರೇಜ್, ಗಲಗಲಿ, ಕದಂಪುರ, ಚಿಕ್ಕಸಂಗಮ, ಹಳೆಯ ಅನಗವಾಡಿಯಿಂದ ಕುಂದರಗಿ ರಸ್ತೆ, ಸಾಲಗುಂದಿ ಮುಂತಾದ ಕಡೆಗಳಲ್ಲಿ ಚಳಿಗಾಲದಲ್ಲಿ ವಿದೇಶಗಳಿಂದ ಪಕ್ಷಿಗಳು ಬರುತ್ತವೆ. ಅವುಗಳ ರಕ್ಷಣೆಗೆ ಚಿಕ್ಕಸಂಗಮದಲ್ಲಿ ₹25 ಕೋಟಿ ವೆಚ್ಚದಲ್ಲಿ ಪಕ್ಷಿಧಾಮ ಹಾಗೂ ಹೆರಕಲ್ ಬ್ಯಾರೇಜ್ ಬಳಿ 40 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಬಿಜೆಪಿ ಸರ್ಕಾರ ನಿರ್ಮಿಸುವ ಭರವಸೆ ನೀಡಿತ್ತು. ಅದೂ ಅನುಷ್ಠಾನವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT