ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಇಲ್ಲಿ ಮಹಿಳೆಯರೇ ಸ್ವಚ್ಛ ವಾಹಿನಿಗಳ ಸಾರಥಿ

154 ವಾಹನಗಳ ಚಾಲನೆ, ಸ್ವಚ್ಛತಾ ಕಾರ್ಯ
Published 20 ಫೆಬ್ರುವರಿ 2024, 5:15 IST
Last Updated 20 ಫೆಬ್ರುವರಿ 2024, 5:15 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಿಸುವ ಸ್ವಚ್ಛವಾಹಿನಿ ವಾಹನಗಳನ್ನು ಮಹಿಳೆಯರೇ ಚಾಲನೆ ಮಾಡುತ್ತಾರೆ. ಜಿಲ್ಲೆಯ 195 ಪೈಕಿ 154 ಗ್ರಾಮ ಪಂಚಾಯಿತಿಗಳಲ್ಲಿ ವಾಹನದ ಚಾಲಕಿಯರಾಗಿ ಕರ್ತದಲ್ಲಿ ತೊಡಗಿದ್ದಾರೆ. ಇನ್ನೂ 41 ಮಂದಿಗೆ ಅಗತ್ಯ ತರಬೇತಿ ಕೊಡಲಾಗುತ್ತಿದೆ.

ಕಸ ಸಂಗ್ರಹಿಸಲು ಬರುವ ವಾಹನಗಳ ಚಾಲನೆ, ಕಸ ಸಂಗ್ರಹಣೆ ಕಾರ್ಯವನ್ನು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರೇ ಮಾಡುತ್ತಿದ್ದಾರೆ. ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಿದ್ದು, 191 ಗ್ರಾಮ ಪಂಚಾಯಿತಿಗಳಲ್ಲಿ ವಾಹನಗಳ ಚಾಲನೆ ಮಾಡಲು ಮಹಿಳೆಯರನ್ನೇ ಗುರುತಿಸಲಾಗಿದೆ. 154 ಗ್ರಾಮ ಪಂಚಾಯಿತಿಗಳಲ್ಲಿ ವಾಹನ ಚಾಲನೆಗೆ ಇಳಿಯುವ ಮೂಲಕ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ.

ವಾಹನಗಳ ಚಾಲನೆ ಜೊತೆಗೆ ಕಸ ಸಂಗ್ರಹಿಸಲು 585 ಜನರು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗಿದ್ದು, ನಿತ್ಯ ಬೆಳಿಗ್ಗೆ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ.

‘ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಸ್ವಸಹಾಯ ಸಂಘಗಳ ಆಸಕ್ತ ಸದಸ್ಯರಿಗೆ ಒಂದು ತಿಂಗಳ ಕಾಲ ವಾಹನ ಚಾಲನಾ ತರಬೇತಿ, ಜತೆಗೆ ಚಾಲನ ಪರವಾನಗಿಯನ್ನೂ ಸಹ ಕೊಡಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದರು.

ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕೆಲವರು ಈಗಾಗಲೇ ಮೂರು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೆ, ಕೆಲವರಿಗೆ ಇನ್ನೂ ತರಬೇತಿ ನಡೆದಿದೆ. ಎಲ್ಲ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆ ಕಾರ್ಯವನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ ಎಂದರು.

ಪಂಚಾಯಿತಿ ವತಿಯಿಂದ ಅವರಿಗೆ ಗೌರವ ಧನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಸ ನಿರ್ವಹಣೆ, ಅದರಿಂದ ಗೊಬ್ಬರ ಉತ್ಪಾದನೆ ಮೂಲಕ ಆದಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಆಧುನಿಕ ತ್ಯಾಜ್ಯ ಘಟಕಗಳ ನಿರ್ಮಾಣ ಕಾರ್ಯ ಹಲವೆಡೆ ಪೂರ್ಣಗೊಂಡಿದೆ ಎಂದು ಹೇಳಿದರು.

ಹಸಿ, ಒಣ, ಎಲೆಕ್ಟ್ರಾನಿಕ್‌ ವಸ್ತು, ಗಾಜಿನ ಬಾಟಲಿ, ಹಾಲಿನ ಪಾಕೇಟ್, ಪ್ಲಾಸ್ಟಿಕ್‌ ಬಾಟಲಿ, ರಟ್ಟಿನಹಾಳೆ, ಬಾಕ್ಸ್, ಕಬ್ಬಿಣ ವಸ್ತು, ರಬ್ಬರ್ ವಸ್ತುಗಳು ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಎರೆಹುಳು ಗೊಬ್ಬರ ಘಟಕವೂ ಇದೆ. ಗೊಬ್ಬರ ಉತ್ಪಾದನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

‘ಗ್ರಾಮದ ಜನರು ಬಹಳ ಗೌರವ ನೀಡುತ್ತಾರೆ. ಮಹಿಳೆಯಾಗಿ ವಾಹನ ಚಲಾಯಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬೆಳಿಗ್ಗೆ ಕಸ ಸಂಗ್ರಹ ಕಾರ್ಯ ಮುಗಿಸಿಕೊಂಡು, ನಂತರ ಬೇರೆ ಕೆಲಸಕ್ಕೆ ಹೊರಡುತ್ತೇವೆ’ ಎನ್ನುತ್ತಾರೆ ಕಲಾದಗಿಯಲ್ಲಿ ವಾಹನ ಚಾಲಕಿಯಾಗಿರುವ ಉಮಾ ಮಾದರ.

ಮಹಿಳೆಯರು ಯಾವುದರಲ್ಲಿಯೂ ಹಿಂದೆ ಇಲ್ಲ. ಜಿಲ್ಲೆಯಲ್ಲಿ ವಾಹನ ಚಲಾಯಿಸಲು ಮುಂದಾಗಿದ್ದು ಯಶಸ್ವಿಯಾಗಿದ್ದೇವೆ
ಉಮಾ ಮಾದರ ವಾಹನ ಚಾಲಕಿ ಕಲಾದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT