ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ವ್ಯವಸ್ಥೆ ಮುಂದುವರಿದಿರುವುದು ದುರದೃಷ್ಟಕರ: ಸಾಹಿತಿ ಸದಾಶಿವ ಮರ್ಜಿ

ದಮನಿತ ಲೋಕದ ಸಬಲೀಕರಣ ಗೋಷ್ಠಿಯಲ್ಲಿ ಮರ್ಜಿ ಅಭಿಮತ
Published 30 ಜೂನ್ 2024, 13:24 IST
Last Updated 30 ಜೂನ್ 2024, 13:24 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಇವತ್ತಿಗೂ ಸಾಧ್ಯವಾಗದ್ದನ್ನು 12ನೇ ಶತಮಾನದಲ್ಲಿಯೇ ಬಸವಣ್ಣನವರು ವರ್ಣ ಹಾಗೂ ಜಾತಿ ವ್ಯವಸ್ಥೆಯ ವಿನಾಶಕ್ಕಾಗಿ ಶಾಸ್ತ್ರಗಳನ್ನು ನಿರಾಕರಿಸಿ, ವಿಲೋಮ ವಿವಾಹ ಮಾಡಿದರು. ಇಂದಿಗೂ ಜಾತಿ ವ್ಯವಸ್ಥೆ ಮುಂದುವರಿದಿರುವುದು ದುರದೃಷ್ಟಕರ’ ಎಂದು ಸಾಹಿತಿ ಸದಾಶಿವ ಮರ್ಜಿ ಹೇಳಿದರು.

ಭಾನುವಾರ ಬಾಗಲಕೋಟೆಯ ಅಂಬೇಡ್ಕರ್ ಭವನದಲ್ಲಿ ನಡೆದ ‘ದಮನಿತ ಲೋಕದ ಸಬಲೀಕರಣ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಮಾಜಿಕ ಒಳಗೊಳ್ಳುವಿಕೆ ಇದ್ದಲ್ಲಿ ದಮನಿತರ ಸಬಲೀಕರಣ ಸಾಧ್ಯವಾಗುತ್ತದೆ. ಇಂತಹ ಒಳಗೊಳ್ಳುವಿಕೆಯ ಕ್ರಾಂತಿಗೆ ಬಸವಣ್ಣ ಧ್ವನಿಯಾಗಿದ್ದರು. ಎಲ್ಲರನ್ನೂ ಒಟ್ಟಾಗಿಸುವ, ಒಳಗೊಳ್ಳುವಿಕೆಯ ಸಂಕೇತವಾಗಿ ಅವರ ಕೂಡಲಸಂಗಮ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.

‘ಸಮಾಜದ ಕಟ್ಟಕಡೆಯವರೊಂದಿಗೆ ತಮ್ಮನ್ನು ಸಮೀಕರಿಸಿಕೊಳ್ಳುವ ಬಸವಣ್ಣನವರ ಧೈರ್ಯ ಯಾರಿಗೂ ಸಾಧ್ಯವಾಗಿಲ್ಲ. ಶ್ರಮಿಕರನ್ನು, ಸೂಳೆ ಸಂಕವ್ವಳಂಥವರನ್ನು ಅನುಭವ ಮಂಟಪಕ್ಕೆ ಕರೆತಂದು ಸಾಹಿತ್ಯ ರಚಿಸಲು ಪ್ರೇರೇಪಿಸಿದರು. ಎಲ್ಲರನ್ನೂ ಸಮಾನವಾಗಿ ಕಂಡರು’ ಎಂದರು.

‘19ನೇ ಶತಮಾನದ ಆದಿಯಲ್ಲಿ ಬಸವಣ್ಣನವರ ತತ್ವಗಳನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡಿದ್ದರೆ, ಅವರು ಕೇವಲ ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿ ಉಳಿಯುತ್ತಿರಲಿಲ್ಲ. ಬಸವಣ್ಣನನ್ನು ಮತ್ತೊಬ್ಬರಿಗೆ ಹೋಲಿಸಲು ಸಾಧ್ಯವಿಲ್ಲ. ಬಸವಣ್ಣನಿಗೆ ಬಸವಣ್ಣನೇ ಸಾಟಿ’ ಎಂದು ಪ್ರತಿಪಾದಿಸಿದರು.

‘ಜ್ಯೋತಿ ಬಾ ಫುಲೆ ಅವರು ವೈಯಕ್ತಿಕ ಅವಮಾನವನ್ನು ಸಾಮಾಜಿಕ ಅಸಮಾನತೆ ವಿರುದ್ಧದ ಹೋರಾಟವಾಗಿಸಿ ಅಸ್ಪೃಶ್ಯರ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರು. ಮಹಿಳೆಯರ ಸ್ಥಾನಮಾನ ಬದಲಾದರೆ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದು ಅವರ ನಿಲುವಾಗಿತ್ತು. ಅಂಬೇಡ್ಕರ್ ಸಂವಿಧಾನದ ಮೂಲಕ ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಿ, ದಮನಿತರ ಸಬಲೀಕರಣಕ್ಕೆ ಶ್ರಮಿಸಿದರು. ಆದರೆ, ಇವತ್ತಿಗೂ ಹಳ್ಳಿಗಳಲ್ಲಿ ದಮನಿತರಿಗೆ ನೀರಿನ ಮುಕ್ತ ಬಳಕೆಗೆ ಅವಕಾಶ ಇಲ್ಲದ್ದು ತಲೆ ತಗ್ಗಿಸುವ ವಿಚಾರ’ ಎಂದರು.

ಸಾಹಿತಿ ಮುತ್ತು ನಾಯ್ಕರ ಮಾತನಾಡಿ, ‘ಮನುಸ್ಮೃತಿ ರೂಪಿಸಿದ ನಾಲ್ಕು ವರ್ಣಗಳಲ್ಲಿ ಮೇಲಿನವರನ್ನು ಹೊರತುಪಡಿಸಿ ಶೂದ್ರರಿಗೆ, ಪಂಚಮರಿಗೆ ಈಚಿನವರೆಗೂ ಶಿಕ್ಷಣದ ಅವಕಾಶ ತೆರೆದುಕೊಳ್ಳಲಿಲ್ಲ. ಹೀಗಿರುವಾಗ ನಾವು ವಿಶ್ವಗುರು ಆಗ್ತೀವಿ ಅನ್ನೋದು ಕನಸಿನ ಮಾತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಜತೆ ಜತೆಗೆ ಸಾಗಬೇಕು’ ಎಂದರು.

ಸಮ್ಮೇಳನದ ಅಧ್ಯಕ್ಷ ತಾತಾಸಾಹೇಬ ಬಾಂಗಿ, ಎಸ್‌ಸಿ-ಎಸ್‌ಟಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಸಿ. ಯಂಕಂಚಿ, ಉದ್ಯಮಿ ಕೃಷ್ಣಾ ಯಡಹಳ್ಳಿ, ವೈ.ಡಿ. ಕಿರಸೂರ, ಅಮರೇಶ ಕೊಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT