ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ, ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಪರದಾಟ

Last Updated 2 ಜುಲೈ 2013, 6:49 IST
ಅಕ್ಷರ ಗಾತ್ರ

ಬಾದಾಮಿ: ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಗತಿಸಿದರೂ ಈವರೆಗೂ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರಿಯಾಗಿ ಪಠ್ಯಪುಸ್ತಕ ಬಾರದ ಕಾರಣ ಮತ್ತು ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಹಿಂದಿನ ವರ್ಷದ ಡೈಸ್ ಮಾಹಿತಿ ಪ್ರಕಾರ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮುಖ್ಯ ಶಿಕ್ಷಕರು ನೀಡಿದ್ದರೂ ಶಿಕ್ಷಣ ಇಲಾಖೆಯಿಂದ ಅಗತ್ಯ ಸಂಖ್ಯೆಗಿಂತ ಕಡಿಮೆ ಪುಸ್ತಕ ವಿತರಣೆ ಮಾಡಿದ್ದಾರೆ. ಯಾಕೆ ಎಂದು ಪ್ರಶ್ನಿಸಿದರೆ ಸರ್ಕಾರದಿಂದ ಪುಸ್ತಕ ಕಡಿಮೆ ಪೂರೈಕೆಯಾಗಿವೆ. ಕೆಲವು ದಿನಗಳಲ್ಲಿ ಬಂದರೆ ಕೊಡುತ್ತೇವೆ ಬರದಿದ್ದರೆ ಇಲ್ಲ ಎಂದು ಶಿಕ್ಷಣ ಇಲಾಖೆಯವರು ಉತ್ತರಿಸುವರು.

2012-13ನೇ ಸಾಲಿನಲ್ಲಿಯೂ ಪುಸ್ತಕ ಕೊರತೆ ಕೊರಗು ಕೇಳಿ ಬಂದಿತು. ಆದರೆ ವರ್ಷ ಮುಗಿದರೂ ಪುಸ್ತಕ ಬರಲೇ ಇಲ್ಲ. 8 ಮತ್ತು 9ನೇ ವರ್ಗಕ್ಕೆ ಹೊಸ ಪಠ್ಯ ಕ್ರಮ ಇರುವುದರಿಂದ ಶಿಕ್ಷಕರು ಮಕ್ಕಳಿಗೆ ಯಾವ ರೀತಿ ಬೋಧಿಸಬೇಕು. ಮಕ್ಕಳು ಮನೆಯಲ್ಲಿ ಏನು ಓದಬೇಕು ಎಂಬುದು ತಿಳಿಯದಂತಾಗಿದೆ. ಮಕ್ಕಳಿಗೆ ಶಿಕ್ಷಣದ ಗುಣಮಟ್ಟ ಕೊಡಬೇಕು ಎಂದು ಹೇಳುವ ಸರ್ಕಾರ ಮತ್ತು ಶಿಕ್ಷಣ ಇಲಾಖೆಯವರು ಪಠ್ಯಪುಸ್ತಕ ಬಾರದಿದ್ದರೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಏನು ಸಾಧ್ಯ ಎಂದು ಪೋಷಕರು ಪ್ರಶ್ನಿಸುವರು.

ತಾಲ್ಲೂಕಿನಲ್ಲಿ ಆರ್‌ಎಂಎಸ್‌ಎ ಮತ್ತು ಟಿಜಿಟಿ ಶಾಲೆಯಲ್ಲಿ ಕಳೆದ ವರ್ಷ 8ನೇ ವರ್ಗಕ್ಕೆ 400ಕ್ಕೂ ಅಧಿಕ ಮಕ್ಕಳ ದಾಖಲೆ ಇದೆ. ಈ ಮಕ್ಕಳ  ದಾಖಲೆಯನ್ನು ಪಠ್ಯಪುಸ್ತಕ ಪೂರೈಕೆಯಲ್ಲಿ ಕಳಿಸಿಲ್ಲ ಎಂದು ತಿಳಿದಿದೆ. ಈ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 9ನೇ ವರ್ಗಕ್ಕೆ ಬೇರೆ ಬೇರೆ ಪ್ರೌಢ ಶಾಲೆಗೆ ಹೆಸರನ್ನು ನೋಂದಾಯಿಸುವರು. ನಗರದ ಖಾಸಗಿ  ಮತ್ತು ಸರ್ಕಾರಿ ಶಾಲೆಯಲ್ಲಿ 9ನೇ ವರ್ಗದ ಅಂದಾಜು 150ಕ್ಕೂ ಹೆಚ್ಚು ಮಕ್ಕಳಿಗೆ ಪಠ್ಯಪುಸ್ತಕ ಲಭ್ಯವಿಲ್ಲ ಎಂದು ತಿಳಿದಿದೆ.

ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ವಿದ್ಯಾರ್ಥಿಗಳ ಅಂಕಿಸಂಖ್ಯೆ ವರದಿಯಂತೆ ಪಠ್ಯ ಪುಸ್ತಕ ಬೇಡಿಕೆಗೆ ಅನುಗುಣವಾಗಿ ಅಂಕಿ ಸಂಖ್ಯೆಯನ್ನು ಸರಿಯಾಗಿ ಕಳಿಸಿದ್ದೇವೆ. ಆದರೆ ಸರ್ಕಾರದಿಂದ ಕಡಿಮೆ ಪಠ್ಯ ಪುಸ್ತಕ ಪೂರೈಕೆಯಾಗಿವೆ ಎಂದು ಬಿಇಒ ಸುರೇಶ ಹುಗ್ಗಿ ಹೇಳಿದರು. ಸರ್ಕಾರ ಮತ್ತು ಇಲಾಖೆಯ ಮಧ್ಯೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಹಳೆ ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭವಾಗಿದೆ. ಆದರೆ ಹೊಸ ವಿದ್ಯಾರ್ಥಿಗಳ ಆಯ್ಕೆಯ ಪ್ರಕ್ರಿಯೆ ನಡೆಯದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದಿಲ್ಲ. ಕೆಲವು ವಿದ್ಯಾರ್ಥಿಗಳು ದೂರದ ಗ್ರಾಮಗಳಿಂದ ಹೆಚ್ಚಿನ ಹಣ ಕೊಟ್ಟು ಬಸ್‌ಗೆ ಬರುವಂತಾಗಿದೆ. ಶಾಲೆಗೆ ಬಾರದ ವಿದ್ಯಾರ್ಥಿಗಳ ಪಾಠ ಬೋಧನೆ ಹಿನ್ನೆಡೆಯಾಗುತ್ತದೆ. ಪ್ರತಿ ವರ್ಷ ಜೂನ್ 15ರೊಳಗೆ ವಸತಿ ನಿಲಯಕ್ಕೆ ಆಯ್ಕೆಯ ಪ್ರಕ್ರಿಯೆ ನಡೆಯಬೇಕು. ಶಿಕ್ಷಣ ಇಲಾಖೆ ಪಠ್ಯಪುಸ್ತಕ ಪೂರೈಕೆಗೆ ಬೇಗ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT