ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರಿಗೆ ಏಮ್ಸ್‌ ನೀಡಲು ಆಗ್ರಹ

Published 11 ಜುಲೈ 2024, 16:09 IST
Last Updated 11 ಜುಲೈ 2024, 16:09 IST
ಅಕ್ಷರ ಗಾತ್ರ

ಬಳ್ಳಾರಿ: ರಾಯಚೂರಿನಲ್ಲಿ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌)’ ಸ್ಥಾಪಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ‘ರಾಯಚೂರು ಏಮ್ಸ್‌ ಹೋರಾಟ ಸಮಿತಿ’ಗೆ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಬೆಂಬಲ ಸೂಚಿಸಿದೆ. ಜುಲೈ 16ರಂದು ಧರಣಿ ನಡೆಸಲು ನಿರ್ಧರಿಸಿದೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ‘ಮೂರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೇಂದ್ರಕ್ಕೆ ಎರಡು ಬಾರಿ ಪತ್ರ ಬರೆದಿದ್ದಾರೆ. ದೆಹಲಿಗೆ ಭೇಟಿ ನೀಡಿದ್ದ ನಮ್ಮ ನಿಯೋಗ ಕೇಂದ್ರ ಆರೋಗ್ಯ ಸಚಿವ ಮನ್ಸುಕ್‌ ಮಾಂಡವಿಯಾ ಮತ್ತು ನಿರ್ಮಲಾ ಸೀತಾರಾಮನ್‌ ಅವರಿಗೂ ಮನವಿ ಸಲ್ಲಿಸಿದೆ’ ಎಂದರು.   

‘ಕೇಂದ್ರದ ಯೋಜನೆಗಳನ್ನು ಸಚಿವ ಪ್ರಲ್ಹಾದ್‌ ಜೋಶಿ ಅವರು ಹುಬ್ಬಳ್ಳಿಗೆ ಕೊಂಡೊಯ್ಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಗಳ ಬೇಡಿಕೆಗಳಿಗೆ ಒಕ್ಕೊರಲಾಗಿ ಹೋರಾಡಬೇಕು. ಜುಲೈ 16ರಂದು ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಜಿಲ್ಲೆಯ ನಾಗರಿಕರು, ಸಂಘಟನೆಗಳು ಬೆಂಬಲ ನೀಡಬೇಕು. ರಾಯಚೂರು ಜಿಲ್ಲೆ ಅಥವಾ ಕಲ್ಯಾಣ ಕರ್ನಾಟಕ ಭಾಗಕ್ಕೆ ಏಮ್ಸ್‌ ನೀಡದಿದ್ದರೆ ಪ್ರತ್ಯೇಕ ರಾಜ್ಯ ಕೇಳಬೇಕಾದೀತು’ ಎಂದೂ ಎಚ್ಚರಿಸಿದರು. 

ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಪನ್ನ ರಾಜ್‌ ಸಿರಿಗೇರಿ ಮಾತನಾಡಿ, ‘ನಂಜುಂಡಪ್ಪ ವರದಿಯ ನವೀಕರಣಕ್ಕೆ ಚಾಲನೆ ನೀಡಬೇಕು. ಸಂವಿಧಾನದ ವಿಧಿ 371(ಜೆ) ಸಮರ್ಪಕ ಜಾರಿ ಮಾಡಬೇಕು. ಬಳ್ಳಾರಿಯಲ್ಲಿ ಕಿದ್ವಾಯಿ ಸಂಸ್ಥೆ, ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪಿಸಬೇಕು. ಮೆಗಾ ಡೇರಿಗೆ ಭೂಮಿ ಖರೀದಿಸಲು ಕೆಎಂಎಫ್‌ಗೆ ಆಗುತ್ತಿರುವ ತೊಡಕು ನಿವಾರಿಸಬೇಕು’  ಎಂದು ಒತ್ತಾಯಿಸಿದರು. 

ರೈತ ಹೋರಾಟಗಾರ ಮಾಧವ ರೆಡ್ಡಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT