ಬಳ್ಳಾರಿ: ‘ನಟನೊಬ್ಬ ಹೇಗಿರಬೇಕು ಎಂಬ ಪ್ರಶ್ನೆಗೆ ಬಳ್ಳಾರಿಯ ರಾಘವರೇ ಉತ್ತರ’ ಎಂದು ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಅಭಿಪ್ರಾಯ ಪಟ್ಟರು.
ಬಳ್ಳಾರಿ ರಾಘವರ 144ನೇ ಜಯಂತಿಯ ಅಂಗವಾಗಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನಾಟಕೋತ್ಸವ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಒಂದು ಕಣ್ಣಿನಲ್ಲಿ ಶಾಂತಿಯನ್ನೂ, ಮತ್ತೊಂದು ಕಣ್ಣಲ್ಲಿ ಕ್ರೋಧವನ್ನು ತೋರಿಸಬಲ್ಲ ನಟನೆ ರಾಘವರಿಗೆ ಮಾತ್ರ ಸಾಧ್ಯ. ಕಾಲಕ್ಕೆ ತಕ್ಕ ಹಾಗೆ ನಾಟಕಗಳು ಸಹ ಬದಲಾಗಬೇಕು. ಯುವಕರು ನಾಟಕ ರಂಗಕ್ಕೆ ಬರಲು ಪೋಷಕರು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
‘ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ತಿಂಗಳು ತೆಲುಗು ಮತ್ತು ಕನ್ನಡ ನಾಟಕಗಳನ್ನು ಪ್ರದರ್ಶಿಸಿ ಕಲಾವಿದರಿಗೆ ಬೇಕಾಗುವ ಎಲ್ಲಾ ಸಹಕಾರವನ್ನು ನಾವು ಒದಗಿಸುತ್ತಿದ್ದೇವೆ’ ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಅಧ್ಯಕ್ಷ ಕೆ.ಕೋಟೇಶ್ವರರಾವ್ ಹೇಳಿದರು.
ನಟ, ಪಶ್ಚಿಮ ಗೋದಾವರಿ ಜಿಲ್ಲೆಯ ವಾಡ್ರೇವು ಸುಂದರರಾವ್ ಮಾತನಾಡಿ, ‘ಬಳ್ಳಾರಿಯಲ್ಲಿ ರಾಘವ ಕಲಾಮಂದಿರ ಸ್ಥಾಪನೆಯಾದ ದಿನದಿಂದ ನಾಟಕಕ್ಕೆ, ಕಲಾವಿದರಿಗೆ ಮರು ಜೀವ ಬಂದಿದೆ’ ಎಂದರು.
ಈ ವರ್ಷದ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಕೊನೇಟಿ ಸುಬ್ಬರಾಜು ಮಾತನಾಡಿ, ‘ರಂಗಭೂಮಿಯಲ್ಲಿ ರಾಘವರು ಬಹುದೊಡ್ಡ ಸಾಧಕರು. ಅಂಥವರ ಹೆಸರಿನಲ್ಲಿ ನನಗೆ ಪ್ರಶಸ್ತಿ ಲಭಿಸಿರುವುದು ನನ್ನ ಜನ್ಮ ಜನ್ಮದ ಪುಣ್ಯ’ ಎಂದರು.
ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚನ್ನಪ್ಪ, ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ, ಕಾರ್ಯದರ್ಶಿ ಎಚ್. ವಿಷ್ಣುವರ್ಧನ ರೆಡ್ಡಿ, ನಾಮ ಪ್ರಕಾಶ ಜಂಟಿ ಕಾರ್ಯದರ್ಶಿ ಎಂ ರಾಮಾಂಜನೇಯಲು, ಖಜಾಂಚಿ ಪಿ.ಧನಂಜಯ ಇದ್ದರು.
ಗುಂಟೂರಿನ ಶ್ರೀ ಅಮೃತ ಲಹರಿ ಥಿಯೇಟರ್ ಆರ್ಟ್ಸ್ ತಂಡದವರು ‘ನಾನ್ನ ನೇನು ವಚ್ಚೇಸ್ತ’ ಎಂಬ ಸಾಮಾಜಿಕ ನಾಟಕ ಪ್ರಸ್ತುತಪಡಿಸಿದರು.