ಬಳ್ಳಾರಿ: ‘ನಟ ದರ್ಶನ್‌ಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸೌಲಭ್ಯ ಒದಗಿಸದೇ ನ್ಯಾಯಾಲಯಕ್ಕೆ ದೂರು ನೀಡುತ್ತೇವೆ. ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತದೆ’ ಎಂದು ಅವರ ವಕೀಲರು ಹೇಳಿದ್ದಾರೆ.
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರನ್ನು ಮಂಗಳವಾರ ಭೇಟಿಯಾದ ವಕೀಲ ಸುನೀಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ದರ್ಶನ್‌ಗೆ ಬೆನ್ನು ನೋವಿದೆ. 2021ರ ಜೈಲು ಕೈಪಿಡಿ ಪ್ರಕಾರ ಕೈದಿಗಳಿಗೆ ಮೆಡಿಕಲ್ ಬೆಡ್ ಮತ್ತು ದಿಂಬು ಒದಗಿಸಲು ಅವಕಾಶವಿದೆ. ವೈದ್ಯಕೀಯ ನೆಲೆಗಟ್ಟಿನಲ್ಲಿ ಹಾಸಿಗೆ–ದಿಂಬು ನೀಡಲು ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.
‘ಕೈದಿಗಳಿಗೆ ಮೂಲಸೌಲಭ್ಯ ನೀಡಬೇಕು. ಮಾಧ್ಯಮಗಳಲ್ಲಿ ವರದಿಯಾಗುತ್ತದೆ ಎಂಬ ಕಾರಣಕ್ಕೆ ಸೌಲಭ್ಯ ತಿರಸ್ಕರಿಸುವಂತಿಲ್ಲ. ಈ ವಿಚಾರವನ್ನೂ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಅವರು ಹೇಳಿದ್ದಾರೆ. ನಮ್ಮ ಕೋರಿಕೆ ತಿರಸ್ಕರಿಸಿದರೆ ನ್ಯಾಯಾಲಯದ ಗಮನಕ್ಕೂ ತರುತ್ತೇವೆ’ ಎಂದರು.
ದರ್ಶನ್ ಜಾಮೀನು ಅರ್ಜಿ ಸೆಷನ್ ನ್ಯಾಯಾಲಯದಲ್ಲಿ ಸೆ.27 ರಂದು ವಿಚಾರಣೆಗೆ ಬರಲಿದೆ. ಅಲ್ಲಿ ನಿರಾಕರಿಸಿದರೆ ಹೈಕೊರ್ಟ್‌ಗೆ ಹೋಗುತ್ತೇವೆ ಎಂದೂ ಅವರು ತಿಳಿಸಿದರು.
ಇನ್ನು ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಜೈಲು ಅಧಿಕಾರಿಗಳು, ‘ಜೈಲಿನಲ್ಲಿ ವೈದ್ಯರಿದ್ದಾರೆ. ಸಮಸ್ಯೆ ಬಗ್ಗೆ ಹೇಳಿಕೊಂಡರೆ ಸೂಕ್ತ ಪರಿಹಾರ ಸೂಚಿಸುತ್ತಾರೆ. ಒಂದು ವೇಳೆ ಮೆಡಿಕಲ್ ಬೆಡ್ ಅಗತ್ಯವೆನಿಸಿದರೆ ಕೊಡಲಾಗುವುದು. ಆದರೆ, ದರ್ಶನ್ ಅವರಿಂದ ಈವರೆಗೆ ಕೋರಿಕೆಯೇ ಬಂದಿಲ್ಲ. ಆರೋಗ್ಯ ಸಮಸ್ಯೆ ಬಗ್ಗೆ ಅವರು ಹೇಳಿಕೊಂಡಿಲ್ಲ. ಹೀಗಿದ್ದಾಗ ನೇರವಾಗಿ ಪರಿಹಾರ ಕೊಡಲು ಹೇಗೆ ಸಾಧ್ಯ?’ ಎಂದರು.
‘ಜೈಲು ಕೈಪಿಡಿಯಲ್ಲಿ ಏನಿದೆಯೋ ಅವುಗಳನ್ನು ಈಗಾಗಲೇ ನೀಡಲಾಗಿದೆ. ನ್ಯಾಯಾಲಯ ಏನು ಹೇಳುತ್ತದೋ ಅದನ್ನು ನಾವು ಪಾಲಿಸುತ್ತೇವೆ’ ಎಂದು ಸ್ಪಷ್ಪಡಿಸಿದರು.
ಹಾಸಿಗೆ ದಿಂಬಿನ ಜತೆಗೆ, ಕುರ್ಚಿ ಬೇಕೆಂದು ದರ್ಶನ್ ಕೇಳುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.