ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಕಿರುಕೊಠಡಿಯಲ್ಲಿ ದರ್ಶನ್

ಜೈಲಿನ ಹೊರಗೆ ಬಿಗಿ ಭದ್ರತೆ: ಶೀಘ್ರ ಬಿಡುಗಡೆಗಾಗಿ ಅಭಿಮಾನಿಗಳಿಂದ ಪೂಜೆ
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಬಳ್ಳಾರಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗುರುವಾರ ಬೆಂಗಳೂರಿನಿಂದ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದು, ಶುಕ್ರವಾರ ಬೇಸರದಲ್ಲೇ ಕಳೆದರು. 

‘ಹೊಸ ಜಾಗ, ಸೌಲಭ್ಯಗಳು ಇಲ್ಲದ ಕೊಠಡಿಯಲ್ಲಿ ಇರಿಸಿದ್ದ ದರ್ಶನ್‌ ಬೇಸರದಲ್ಲಿದ್ದರು. ಬೆಂಗಳೂರಿನಿಂದ ತಮ್ಮೊಂದಿಗೆ ಆಧ್ಯಾತ್ಮದ ಎರಡು ಪುಸ್ತಕಗಳನ್ನು ತಂದಿದ್ದರು. ಅದರಲ್ಲೊಂದು ಲಲಿತಾ ಸಹಸ್ರನಾಮ ಶ್ಲೋಕದ್ದಾಗಿತ್ತು. ಅದನ್ನು ಓದುತ್ತಿರಬಹುದು’ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದರು. ದರ್ಶನ್‌ ಇರುವ ಹೊರ ವಿಶೇಷ ಭದ್ರತಾ ಕೊಠಡಿಯು 10X6 ಅಡಿ ವಿಸ್ತೀರ್ಣದ್ದಾಗಿದ್ದು, ಅದರಲ್ಲಿ ಶೌಚಾಲಯವೂ ಇದೆ.

ಜೈಲಿನ ಮೆನು ಪ್ರಕಾರ, ಶುಕ್ರವಾರ ಕೈದಿಗಳಿಗೆ ಬೆಳಿಗ್ಗೆ ಉಪ್ಪಿಟ್ಟು (355 ಗ್ರಾಂ), ಮಧ್ಯಾಹ್ನ ಅನ್ನ (355 ಗ್ರಾಂ)–ಸಾಂಬಾರು (655 ಗ್ರಾಂ),ಮಜ್ಜಿಗೆ (205 ಎಂ.ಎಲ್‌) ನೀಡಲಾಯಿತು. ‘ಸಂಜೆ ಮಾಂಸಾಹಾರ ಚಿಕನ್‌ ನೀಡಲಾಯಿತು’ ಎಂದು ಅಧಿಕಾರಿಗಳು ಹೇಳಿದರು. ಕೈದಿಗಳಿಗೆ ಚಿಕನ್‌ 200 ಗ್ರಾಂ,
ಮಟನ್‌ ಆದರೆ 90 ಗ್ರಾಂ ನೀಡಲಾಗುತ್ತದೆ. 

ಈ ಎಲ್ಲದರ ಮಧ್ಯೆ ಅಭಿಮಾನಿಗಳು ನಗರದ ಅಧಿದೇವತೆ ಕನಕದುರ್ಗೆ ದೇವಾಲಯದಲ್ಲಿ ದರ್ಶನ್‌ ಸೌಖ್ಯ ಹಾಗೂ ಶೀಘ್ರ ಬಿಡುಗಡೆಗೆ ಪೂಜೆ ಸಲ್ಲಿಸಿದರು. 501 ತೆಂಗಿನ ಕಾಯಿ ಒಡೆದರು. ಪೂಜೆ ಮಾಡಿಸಿದ ಕುಂಕುಮವನ್ನು ದರ್ಶನ್‌ಗೆ ತಲುಪಿಸಲು ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದರು. 

ದರ್ಶನ್ ಇರುವ ಕಾರಣಕ್ಕೆ ಬಳ್ಳಾರಿ ಜೈಲಿನ ಹೊರಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜೈಲಿನಲ್ಲಿ ಬಂದಿಯಾಗಿರುವ ತಮ್ಮವರನ್ನು ನೋಡಲು ಕುಟುಂಬಸ್ಥರು ಶುಕ್ರವಾರವೂ ಬಂದಿದ್ದರು. ಅವರು ತಂದಿದ್ದ ಆಹಾರದ ಪೊಟ್ಟಣಗಳನ್ನು ಹಾಗೆಯೇ ಹಿಂದಕ್ಕೆ ಕಳುಹಿಸಲಾಯಿತು. ತಮ್ಮವರನ್ನು ಕಾಣಲು ರಾಯಚೂರಿನಿಂದ ರೊಟ್ಟಿ, ಶೇಂಗಾ ಪುಡಿಯೊಂದಿಗೆ ಬಂದಿದ್ದ ಕುಟುಂಬವೊಂದು, ಅದನ್ನು ತಲುಪಿಸ
ಲಾಗದೇ ಬೇಸರದಲ್ಲೇ ಹಿಂದಿರುಗಿತು. 

ಹಾರ ಹಾಕಲು ಪ್ರತಿಮೆ ಹತ್ತಿದ ಅಭಿಮಾನಿ

ಬಳ್ಳಾರಿ: ದರ್ಶನ್‌ ಬಿಡುಗಡೆಗೆ ಪ್ರಾರ್ಥಿಸಿ ನಗರದ ಕನಕದುರ್ಗೆ ದೇಗುಲದಲ್ಲಿ ಪೂಜೆ ಮಾಡಿಸಿದ ಅಭಿಮಾನಿಗಳು ಬಳಿಕ ದೇಗುಲದ ಹೊರಗಿನ ದೇವಿಯ ಪ್ರತಿಮೆ ಮೇಲೆ ಹತ್ತಿ ಹಾರ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.  ‘ನಗರದ ಅಧಿದೇವತೆ ಎಂದೇ ಪರಿಗಣಿಸಲಾಗಿರುವ ಕನಕದುರ್ಗೆ ಪ್ರತಿಮೆ ಮೇಲೆ ಕಾಲಿಟ್ಟು ಹಾರ ಹಾಕಿರುವುದು ಸರಿಯಲ್ಲ. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಪ್ರತಿಮೆಗೆ ಹಾರ ಹಾಕಲೆಂದೇ ಕ್ರೇನ್ ವ್ಯವಸ್ಥೆ ಇದೆ. ಅದನ್ನು ಬಳಸಬಹುದಿತ್ತು’ ಎಂದು  ದೇವಸ್ಥಾನದ ಧರ್ಮದರ್ಶಿ ಗಾದೆಪ್ಪ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT