ಬಳ್ಳಾರಿ: ‘ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಲಿದ್ದು, ಇದಕ್ಕೆ ಪೂರಕವಾಗಿ ಜೈಲು ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬುಧವಾರ ಬೆಳಿಗ್ಗೆ 11ಕ್ಕೆ ಸ್ಥಳಾಂತರ ಪ್ರಕ್ರಿಯೆ ನಡೆಯಲಿದ್ದು, ಸಂಜೆ ವೇಳೆಗೆ ಪೊಲೀಸರು ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸೇರಿಸುವ ಸಾಧ್ಯತೆಯಿದೆ.
‘ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಜೈಲಿನಲ್ಲಿ ಪ್ರತ್ಯೇಕ ಕೊಠಡಿಯನ್ನು ಸಿದ್ಧಪಡಿಸಿಡಲಾಗಿದೆ. ಯಾವುದೇ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವುದಿಲ್ಲ’ ಎಂದು ಬಳ್ಳಾರಿ ಜೈಲು ಅಧೀಕ್ಷಕಿ ಲತಾ ತಿಳಿಸಿದರು.
‘ನಗರ ಮತ್ತು ಜೈಲಿನ ಸುತ್ತಮುತ್ತಲ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ‘ಪ್ರಜಾವಾಣಿ’ಗೆ ತಿಳಿಸಿದರು.
‘1884ರಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿರ್ಮಿತ ಬಳ್ಳಾರಿ ಕೇಂದ್ರ ಕಾರಾಗೃಹವು ಶಿಕ್ಷೆಯ (ಪನಿಷ್‌ಮೆಂಟ್) ಜೈಲು ಎಂದೇ ಖ್ಯಾತಿ. ಇಲ್ಲಿ ಒಬ್ಬರನ್ನೇ ಇರಿಸುವಂತಹ ಕೊಠಡಿಗಳಿವೆ. ಶಿಕ್ಷೆಯ ಅನುಭವ ಮತ್ತು ತಪ್ಪಿನ ಅರಿವಾಗಲಿ ಎಂಬ ಉದ್ದೇಶದಿಂದ ಕೈದಿನಗಳನ್ನು ಇಂಥ ಕೊಠಡಿಗಳಲ್ಲಿ ಇರಿಸಲಾಗುತ್ತದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಇಲ್ಲಿನ ಹವಾಗುಣವೂ ಶಿಕ್ಷೆ ಎಂಬ ಪರಿಕಲ್ಪನೆಗೆ ಹೇಳಿ ಮಾಡಿಸಿದಂತಿದೆ. ಬೇಸಿಗೆ ಬೇಗೆ ತಾಳಲಾರದ ಪರಿಸ್ಥಿತಿ ಇರುತ್ತದೆ. ಹೊರ ವಿಶೇಷ, ಒಳ ವಿಶೇಷ ಭದ್ರತಾ ಕೊಠಡಿಗಳು ಇಲ್ಲಿವೆ. ಪ್ರಮುಖ ಪ್ರಕರಣಗಳ ಆರೋಪಿ, ಅಪರಾಧಿಗಳನ್ನು ಇಲ್ಲಿ ವಿಚಾರಣಾ ಬಂಧಿಗಳಿಂದ ಪ್ರತ್ಯೇಕಿಸಿ ಇಡಲಾಗುತ್ತದೆ’ ಎಂದು ಅವರು ವಿವರಿಸಿದರು.
ಕೊಲೆ ಆರೋಪಿ ನಟ ದರ್ಶನ್ ಸಹಚರ ಪ್ರದೂಷ್ ಎಂಬುವನನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಮಾಹಿತಿ ಬಂದಿದೆ. ಜೈಲಿನ ನಿಯಮದಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು.ಟಿ.ಪಿ.ಶೇಷ ಮುಖ್ಯ ಜೈಲು ಅಧೀಕ್ಷಕ ಹಿಂಡಲಗಾ ಕಾರಾಗೃಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.