ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ: ಬೆಲೆ ಲೆಕ್ಕಿಸದೆ ಖರೀದಿಸಿದ ಗ್ರಾಹಕರು

ಡಿ.ಮಾರೆಪ್ಪ ನಾಯಕ
Published 9 ಮೇ 2024, 6:46 IST
Last Updated 9 ಮೇ 2024, 6:46 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲು ಏರಿಕೆಯಾಗುತ್ತಿದ್ದು, ಜನರು ತತ್ತರಿಸುವಂತಾಗಿದೆ. ಕನಿಷ್ಠ 22 ರಿಂದ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಧ್ಯಾಹ್ನ ಹೊರಗೆ ಬಾರದಂಥ ಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆಯಲ್ಲಿ ದಾಹ ತಣಿಸಲು ಜನ ಎಳನೀರು, ಕಬ್ಬಿನ ಹಾಲಿನ ನಂತಹ ವಿವಿಧ ಹಣ್ಣಿನ ಜ್ಯೂಸ್, ತಂಪು ಪಾನೀಯಗಳಿಗೆ ಮೊರೆ ಹೋಗುವುದು ಸಾಮಾನ್ಯ. ಅವೆಲ್ಲದರ ನಡುವೆ ತಾಳೆ ಹಣ್ಣುಗಳ ವ್ಯಾಪಾರವೂ ಭರ್ಜರಿಯಾಗಿ ಬೇಡಿಕೆ ಇದೆ.

ಹಣ್ಣಿನಲ್ಲಿ ವಿಶೇಷವಾಗಿ ಕಲ್ಲಂಗಡಿ, ಕರ್ಬೂಜಾ ಜೊತೆಗೆ ಸೌತೇಕಾಯಿ, ಪೇರು ಹಣ್ಣು ಇವೆಲ್ಲವೂ ದೇಹಕ್ಕೆ ತಂಪನ್ನು ನೀಡುತ್ತವೆ. ಈ ಹಣ್ಣುಗಳ ಸಾಲಿನಲ್ಲಿ ತಾಳೆ ಹಣ್ಣು ಕೂಡ ಸೇರಿದೆ.ಕೈಯಲ್ಲಿ ಜಾರುವ, ಬಾಯಲ್ಲಿ ಕರಗುವ ತಾಳೆ ಹಣ್ಣು ಆರೋಗ್ಯಕ್ಕೆ ಆಸ್ತಿ ಅಂತಲೇ ಹೇಳಬಹುದು.

ಆಂಧ್ರಪ್ರದೇಶ, ತೆಲಂಗಾಣ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಸಿರುಗುಪ್ಪ ತಾಲ್ಲೂಕಿನ ಬಳಿಯ ಆದೋನಿ, ಕೋಸಗಿ, ಕೌತಾಳಂ, ಉರುಕುಂದಿ, ಹೊಳಗುಂದಿ, ಹಾಲೂರು, ನೆಣಕಿ, ಹಾಗೂ ಸುತ್ತಮುತ್ತ ತಾಳೆ ಹಣ್ಣುಗಳ ಗಿಡಗಳು ಹೇರಳವಾಗಿ ಬೆಳೆದಿವೆ. ಗ್ರಾಮದ ಸುತ್ತಮುತ್ತಲಿನಿಂದ ಮಹಿಳೆಯರು, ಪುಟ್ಟಿಗಳಲ್ಲಿ ತಾಳೆಹಣ್ಣು ಖರೀದಿಸಿ, ಮಧ್ಯಾಹ್ನ 12ರ ಸುಮಾರು ನಗರಕ್ಕೆ ಬಂದು ಪುನಃ ಸಂಜೆ ನಾಲ್ಕೈದು ಗಂಟೆಗೆ ಹಿಂದಿರುಗಿ ಊರುಗಳಿಗೆ ಮರುಳುತ್ತಾರೆ.

ಒಂದು ಪುಟ್ಟಿಯಲ್ಲಿ 300 ರಿಂದ 400 ವರೆಗೆ ತಾಳೆ ಹಣ್ಣುಗಳು ಇರುತ್ತವೆ. ಚಿಕ್ಕ ಪ್ರಮಾಣ ಹಣ್ಣುಗಳಾದರೆ ಇನ್ನೂ ಹೆಚ್ಚಿರುತ್ತವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವ್ಯಾಪಾರ ಉತ್ತಮವಾಗಿರುವುದರಿಂದ ವ್ಯಾ‍ಪಾರಗಳು ಒಂದಿಷ್ಟು ಹಣ ಸಂಪಾದಿಸಿಕೊಳ್ಳುತ್ತಿದ್ದಾರೆ.

ನಗರದ ಕೇಂದ್ರ ಬಸ್ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ಬಳ್ಳಾರಿ ರಸ್ತೆ, ಆದೋನಿ ರಸ್ತೆ, ಸಿಂಧನೂರು ರಸ್ತೆ, ದಿನದ ಮಾರುಕಟ್ಟೆ ಸೇರಿ ಇತರ ಕಡೆಗಳಲ್ಲಿ ತಾಳೆ ಹಣ್ಣಿನ ವ್ಯಾಪಾರ ನಡೆಯುತ್ತಿದೆ.ನಗರದ ಪ್ರಮುಖ ರಸ್ತೆಗಳಲ್ಲೇ ಇದೇ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ತಾಳೆ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶರ್ಕರ, ಕಬ್ಬಿಣ, ವಿಟಮಿನ್-ಸಿ ಅಂಶವಿರುತ್ತದೆ, ಇದು ರಂಜಕ, ಎಳೆನೀರಿನಂತೆಯೇ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ತಾಳೆ ಹಣ್ಣಿಗೆ ಮೊರೆ ಹೋಗುವುದು ಸಹಜವಾಗಿದೆ.

‘ಕೋಸಗಿ ಯಿಂದ ತಾಳೆ ಹಣ್ಣು ತಂದಿದ್ದು, ಒಂದು ಕ್ಯಾನ್‌ಗೆ ₹1,000 ಇದೆ. ನಾವು ಒಂದು ಡಜನ್‌ ₹50 ಕ್ಕೆ ಮಾರಾಟ ಮಾಡುತ್ತಿದ್ದೇವೆ. ಪ್ರತಿನಿತ್ಯ ₹ 300 ರಿಂದ ₹ 400 ಉಳಿತಾಯವಾಗುತ್ತದೆ’. ತಾಳೆಗೆ ಬೇಸಿಗೆಯಲ್ಲಿ ಮಾತ್ರ ಬೆಲೆ ಎಂದು ವ್ಯಾಪಾರಿ ನರಸಮ್ಮ ತಿಳಿಸಿದರು.

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಏತಲಾಪಲ್ಲಿಯ ಪಾಮಿಡಿ ಮಂಡಲದಲ್ಲಿ ಹೆಚ್ಚಾಗಿ ಬೆಳೆಯುವ ತಾಳೆ ಹಣ್ಣುಗಳು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ, 35 ಕಾಯಿಗಳಿರುವ ಒಂದು ಗೊಂಚಲಿಗೆ ₹ 450 ರಿಂದ ₹ 500ಕ್ಕೆ ವ್ಯಾಪಾರಿಗಳು ತಾಳೆ ಹಣ್ಣು ಬೆಳೆದವರಿಂದ ಖರೀದಿಸುತ್ತೆವೆ. ಈ ಬಾರಿ ಆಂಧ್ರದಲ್ಲಿ ತಾಳೆ ಹಣ್ಣಿನ ದರ ಹೆಚ್ಚಾಗಿದೆ. ಸಾಗಾಣೆ ದರ ಹೆಚ್ಚಾಗಿದ್ದರಿಂದ ನಗರದಲ್ಲಿ ಮಾರಲಾಗುತ್ತಿರುವ ಹಣ್ಣಿನ ದರದಲ್ಲಿಯೂ ಹೆಚ್ಚಳವಾಗಿದೆ ಎಂದು ವ್ಯಾಪಾರಿ ಗೋವರ್ಧನ ಹೇಳುತ್ತಾರೆ.

‘ದೇಹ ನಿರ್ಜಲೀಕರಣಗೊಂಡು ಅಸ್ವಸ್ಥರಾಗು ವವರಿಗೆ ಈ ಹಣ್ಣು ಸಹಕಾರಿ. ವಾಂತಿ ಶಮನಗೊಳಿಸುತ್ತದೆ. ಬಿಸಿಲಿನಿಂದ ತಲೆಸುತ್ತುವುದು, ಜೀರ್ಣಕ್ರಿಯೆ ಸಮಸ್ಯೆ ಗಳಿಗೂ ಈ ಹಣ್ಣು ಸೇವಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿದ ಕಾರಣ ಪ್ರತಿ ವರ್ಷ ತಾಳೆ ಹಣ್ಣು ಖರೀದಿಸಿ ಸೇವಿಸುತ್ತೇನೆ’ ಎಂದು ಗ್ರಾಹಕ ಕೆ.ವಿಜಯಕುಮಾರ ಹೇಳುತ್ತಾರೆ.

ತಾಳೆ ಹಣ್ಣು
ತಾಳೆ ಹಣ್ಣು
ಈ ಬಾರಿ ಆಂಧ್ರದಲ್ಲಿ ತಾಳೆ ಹಣ್ಣಿನ ದರ ಹೆಚ್ಚಾಗಿದೆ. ಸಾಗಣೆ ವೆಚ್ಚ ಹೆಚ್ಚಾಗಿದ್ದರಿಂದ ನಾವೂ ಹಣ್ಣಿನ ದರ ಹೆಚ್ಚಳ ಮಾಡುವುದು ಅನಿವಾರ್ಯ
ಗೋವರ್ಧನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT