ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಮಕ್ಕಳ ಪೊರೆದ ಬರದ ಬಿಸಿಯೂಟ

ಬರದ ಬಿಸಿಯೂಟಕ್ಕೆ ಅವಳಿ ಜಿಲ್ಲೆಯಲ್ಲಿ ಶೇ. 62ಕ್ಕಿಂತಲೂ ಹೆಚ್ಚು ಮಕ್ಕಳ ಹಾಜರಿ
Published 15 ಮೇ 2024, 7:33 IST
Last Updated 15 ಮೇ 2024, 7:33 IST
ಅಕ್ಷರ ಗಾತ್ರ

ಬಳ್ಳಾರಿ: ಅವಳಿ ಜಿಲ್ಲೆ ಬಳ್ಳಾರಿ–ವಿಜಯನಗರದ ಎಲ್ಲ ತಾಲ್ಲೂಕುಗಳನ್ನು ಸರ್ಕಾರ ಬರ ಪೀಡಿತ ಎಂದು ಘೋಷಿಸಿದೆ. ಬರದ ಕಾರಣದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೇಸಿಗೆ ರಜೆ ಅವಧಿಯಲ್ಲಿಯೂ ಬಿಸಿಯೂಟ ನೀಡಲಾಗುತ್ತಿದೆ.

ಬರಗಾಲದ ಬಿಸಿಯೂಟ ಸೇವನೆಗೆ ಬಳ್ಳಾರಿ ಜಿಲ್ಲೆಯಲ್ಲಿ 55,142 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರೆ, ವಿಜಯನಗರ ಜಿಲ್ಲೆಯಲ್ಲಿ 1,03,193 ವಿದ್ಯಾರ್ಥಿಗಳು ಹೆಸರು ಕೊಟ್ಟಿದ್ದರು. ಬಳ್ಳಾರಿಯಲ್ಲಿ ನೋಂದಾಯಿತ ವಿದ್ಯಾರ್ಥಿಗಳ ಪೈಕಿ ಶೇ. 61.90ರಷ್ಟು ಮಕ್ಕಳು ಆಹಾರ ಸೇವಿಸುತ್ತಿದ್ದರೆ, ವಿಜಯನಗರ ಜಿಲ್ಲೆಯಲ್ಲಿ ಶೇ. 63.50 ಮಕ್ಕಳು ಹಾಜರಾಗುತ್ತಿದ್ದಾರೆ. ಇಡೀ ರಾಜ್ಯದಲ್ಲೇ ವಿಜಯನಗರ ಜಿಲ್ಲೆ ಮೂರನೇ ಸ್ಥಾನದಲ್ಲಿದ್ದರೆ, ಬಳ್ಳಾರಿ ಜಿಲ್ಲೆ ಆರನೇ ಸ್ಥಾನದಲ್ಲಿದೆ.

ಒಟ್ಟಾರೆ ರಾಜ್ಯದಲ್ಲಿ ಈ ಯೋಜನೆಗೆ ಶೇ 38.12ರಷ್ಟು ಸ್ಪಂದನೆ ದೊರೆತಿದೆ. ಆದರೆ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಬರಪೀಡಿತ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಎದುರಾಗಬಾರದು ಎಂದು ಪ್ರಧಾನಮಂತ್ರಿ ಪೋಷಣ್ ಶಕ್ತಿ-‌ನಿರ್ಮಾಣ ಯೋಜನೆಯಡಿ ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆಯಲ್ಲಿ ಬಿಸಿಯೂಟ ನೀಡಲಾಗುತ್ತಿದೆ.

ಬರದ ನಾಡು ಎನಿಸಿಕೊಂಡಿರುವ ಬಳ್ಳಾರಿ ಮತ್ತು ವಿಜಯನಗರದಲ್ಲಿ ಬಡ, ಕೂಲಿಕಾರ್ಮಿಕರ ಸಂಖ್ಯೆ ದೊಡ್ಡದಿದೆ. ಅಂಥವರ ಮಕ್ಕಳಿಗೆ ಬರದ ಬಿಸಿಯೂಟ ಯೋಜನೆಯಿಂದ ಅನುಕೂಲವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ನೋಂದಾಯಿತ ವಿದ್ಯಾರ್ಥಿಗಳ ಪೈಕಿ ಶೇ 28ರಿಂದ 25 ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ. ಇದಕ್ಕೆ ಜಾತ್ರೆ, ಹಬ್ಬ, ಗುಳೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಬೇರೆ ಬೇರೆ ಕಾರಣಗಳಿಂದ  ಪೂರ್ಣ ಪ್ರಮಾಣದಲ್ಲಿ ಮಕ್ಕಳು ಬಿಸಿಯೂಟ ಸೇವಿಸುತ್ತಿಲ್ಲ ಎಂದು ಹೇಳಲಾಗಿದೆ. 

ಬಿಸಿಯೂಟ ಮೇಲ್ವಿಚಾರಣೆಗೆ ನೋಡಲ್ ಶಿಕ್ಷಕರನ್ನೂ ನೇಮಿಸಲಾಗಿದೆ. ಬಳ್ಳಾರಿಯ ಶೈಕ್ಷಣಿಕ ತಾಲೂಕುಗಳಾದ ಬಳ್ಳಾರಿ ಪೂರ್ವದಲ್ಲಿ 14, ಬಳ್ಳಾರಿ ಪಶ್ಚಿಮದಲ್ಲಿ 4, ಸಂಡೂರಿನಲ್ಲಿ ಒಬ್ಬರು ಸೇರಿದಂತೆ ಒಟ್ಟು 19 ನೋಡಲ್‌ ಶಿಕ್ಷಕರನ್ನು ನೇಮಿಸಲಾಗಿದೆ. ಇನ್ನು ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆಗೆ 13, ಹರಪನಹಳ್ಳಿಗೆ 6, ಹಗರಬೊಮ್ಮನಹಳ್ಳಿ 19, ಹೂವಿನಹಡಗಲಿಗೆ 5 ಮಂದಿ ನೋಡಲ್‌ ಶಿಕ್ಷಕರನ್ನು ನೇಮಿಸಲಾಗಿದೆ.  

ಸಾಮಾನ್ಯ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 1,43,477, ವಿಜಯನಗರ ಜಿಲ್ಲೆಯಲ್ಲಿ 1,89,344  ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದರು. ಈಗ ಒಪ್ಪಿಗೆ ಸೂಚಿಸಿದವರಿಗಷ್ಟೇ ಬಿಸಿಯೂಟ ಪೂರೈಸಲಾಗುತ್ತಿದೆ. 

ಮಕ್ಕಳಿಗೆ ಬರದ ಬಿಸಿಯೂಟ ಒದಗಿಸಲು ಬಳ್ಳಾರಿಯಲ್ಲಿ 529 ಕೇಂದ್ರಗಳನ್ನು ಗುರುತಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 973 ಕೇಂದ್ರಗಳನ್ನು ಗುರುತಿಸಿ ಅಲ್ಲಿ ಆಹಾರ ನೀಡಲಾಗುತ್ತಿದೆ. ಇನ್ನು  ಬಿಸಿಯೂಟಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1,020 ಸಿಬ್ಬಂದಿಗಳನ್ನು ಮತ್ತು ವಿಜಯನಗರ ಜಿಲ್ಲೆಯಲ್ಲಿ 1,903 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  

ಸಮಯ ಹೊಂದಾಣಿಕೆ: ಹಲವು ಸಂದರ್ಭಗಳಲ್ಲಿ ಪೋಷಕರು ಮುಂಜಾನೆಯೇ ಕೂಲಿ ಕೆಲಸಗಳಿಗೆ ಹೋಗುವುದರಿಂದ ಮಕ್ಕಳಿಗೆ ಬೆಳಗ್ಗಿನ ಉಪಹಾರವೇ ದೊರೆಯುವುದಿಲ್ಲ. ಇದು ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ, ಬರದ ಬಿಸಿಯೂಟ ವಿತರಣೆ ಸಮಯವನ್ನು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಅನುಕೂಲವಾಗುವಂತೆ ಹೊಂದಿಸಲಾಗಿದೆ.

‘ಬೆಳಿಗ್ಗೆ 11ಕ್ಕೆ ಬಿಸಿಯೂಟ ವಿತರಣೆ ಆರಂಭಿಸಿದರೆ ಮಧ್ಯಾಹ್ನ 12.30ರ ನಂತರವೂ ವಿತರಣೆ ನಡೆಯುತ್ತದೆ’ ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮಧ್ಯಾಹ್ನ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿ ಶೇಖರ್‌ ಹೊರಪ್ಯಾಟಿ ತಿಳಿಸಿದ್ದಾರೆ.  

ಹೈದರಾಬಾದ ಕರ್ನಾಟಕ ಪ್ರಾಂತ್ಯದ ತಾಲ್ಲೂಕುಗಳ ಬರಪೀಡಿತ. ಮಕ್ಕಳು ಅಪೌಷ್ಟಿಕತೆಯಿಂದ ಬಳಲಾಬಾರದು ಎಂದು ಯೋಜನೆ ರೂಪಿಸಲಾಗಿದೆ. ಬರಗಾಲದ ಬಿಸಿಯೂಟ ಯೋಜನೆಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗಿದೆ

–ಶೇಖರ್‌ ಹೊರಪ್ಯಾಟಿ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿ

ಹುಗ್ಗಿ ಪಾಯಸ ಸೀಕರಣೆ  ಬಿಸಿಯೂಟದಲ್ಲಿ ಸಾಮಾನ್ಯವಾಗಿ ಅನ್ನ ಸಾಂಬಾರು ಬಡಿಸಲಾಗುತ್ತದೆ.  ಆದರೆ ಅವಳಿ ಜಿಲ್ಲೆಯಲ್ಲಿ ಇದರ ಜತೆಗೆ ಹುಗ್ಗಿ ಪಾಯಸ ಸೀಕರಣೆ ಚಪಾತಿ ಕೇಸರಿ ಬಾತ್‌ ಒದಗಿಸಲಾಗಿದೆ. ಹಲವು ಕಡೆ ನೋಡಲ್‌ ಶಿಕ್ಷಕರೇ ಕೈಯಿಂದ ದುಡ್ಡು ಹಾಕಿ ಸಿಹಿ ತಿನಿಸುಗಳನ್ನು ಬಿಸಿಯೂಟದ ಜತೆಗೆ ನೀಡಿದ್ದಾರೆ. ಮಕ್ಕಳನ್ನು ಯೋಜನೆಗೆ ಆಕರ್ಷಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT