ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆವ ‘ತೆಕ್ಕಲಕೋಟೆ'

2.41 ಎಕರೆ ವಿಸ್ತೀರ್ಣದಲ್ಲಿ ಚೌಕಾಕಾರವಾಗಿ ನಿರ್ಮಾಣ; ಸೈನಿಕ, ಆನೆ, ಕುದುರೆಗಳ ವಿಶ್ರಾಂತಿ ತಾಣ
ಚಾಂದ್ ಬಾಷ
Published 5 ನವೆಂಬರ್ 2023, 5:26 IST
Last Updated 5 ನವೆಂಬರ್ 2023, 5:26 IST
ಅಕ್ಷರ ಗಾತ್ರ

ತೆಕ್ಕಲಕೋಟೆ : ರಾಷ್ಟ್ರೀಯ ಹೆದ್ದಾರಿ 150ಎ ಗೆ ಅಂಟಿಕೊಂಡಿರುವ, ಐತಿಹಾಸಿಕವಾಗಿ ‘ತೆಕ್ಕೆಕಲ್ಲು’,  ‘ಡೆಂಕಣ ಕೋಟೆ’ ಎಂದೇ ಕರೆಸಿಕೊಳ್ಳುವ ‘ತೆಕ್ಕಲಕೋಟೆ’ಯು, ಇಲ್ಲಿನ ಕಣ್ಮನ ಸೆಳೆವ ಕೋಟೆಯಿಂದಾಗಿ ಗಮನ ಸೆಳೆದಿದೆ.

ಪಾಳೆಗಾರರ ಆಳ್ವಿಕೆಯಲ್ಲಿ ಸುಮಾರು 2.41 ಎಕರೆ ವಿಸ್ತೀರ್ಣದಲ್ಲಿ ಚೌಕಾಕಾರವಾಗಿ ನಿರ್ಮಿಸಲಾದ ಕೋಟೆ ಸೈನಿಕರ ಹಾಗೂ ಆನೆ, ಕುದುರೆಗಳ ವಿಶ್ರಾಂತಿ ತಾಣವಾಗಿ ಗುರುತಿಸಿಕೊಂಡಿದೆ. ಕೋಟೆಯ ನಾಲ್ಕು ಮೂಲೆಗೂ ನೂರು ಮೀಟರ್ ಅಂತರದಲ್ಲಿ ವೃತ್ತಾಕಾರದ ಬುರುಜು (ಕೊತ್ತಲ) ಗಳಿವೆ. ಕೋಟೆಯ ಸುತ್ತ ಆಳವಾದ ಕಂದಕಗಳು ಇವೆ. ( ಈಗ ಪಶ್ಚಿಮ ಭಾಗದಲ್ಲಿ ಮಾತ್ರ ಉಳಿದಿದೆ)

ಕೋಟೆಯ ಉತ್ತರದ ಗೋಡೆಯ ಮಧ್ಯದಲ್ಲಿ ಮುಖ್ಯ ದ್ವಾರಬಾಗಿಲು ಇದ್ದು, 20 ಅಡಿ ಎತ್ತರ ಹಾಗೂ ಆರು ಅಡಿ ಅಗಲವಿದೆ. ಮುಖ್ಯದ್ವಾರದ ಬಲಕ್ಕೆ ಕಲ್ಲಿನ ಕಿರುದ್ವಾರವಿದೆ. ಮುಖ್ಯದ್ವಾರದ ಬಳಿ ನಾಲ್ಕು ಎತ್ತರದ ಕಂಬಗಳಿದ್ದು, ಅವುಗಳ ಮೇಲೆ ಹುಕ್ಕ ಸೇದುವ ಹಾಗೂ ನೃತ್ಯ ಮಾಡುವ ಸ್ತ್ರೀಯರ ಚಿತ್ರಗಳಿದ್ದು, ಮೇಲ್ಭಾಗದಲ್ಲಿ ಆಕರ್ಷಕ ಕಮಾನುಗಳಿವೆ. ಇಲ್ಲಿ ವಿಶ್ರಾಂತಿ ಪಡೆಯುವ ಸೈನಿಕರಿಗೆ ಸಂದೇಶ ಸಿಗುವಂತೆ ಸಿರಿಗೇರಿ ರಸ್ತೆಯ ‘ಬೂದಿದಿಬ್ಬ’ ಅಥವಾ ‘ಹಿರೇಅರ್ಲ‘ ಬೆಟ್ಟದ ಮೇಲೆ ಕಿರು ಕೋಟೆ ಇದ್ದು, ಅಲ್ಲಿಂದ ಬೆಂಕಿ ಹಚ್ಚಿ ಕೋಟೆಯ ಮುಖ್ಯದ್ವಾರಕ್ಕೆ ಸಂದೇಶ ರವಾನೆಯಾಗುತ್ತಿತ್ತು ಎನ್ನಲಾಗುತ್ತಿದೆ.

ಆಕರ್ಷಕ ಕೋಟೆ: ಮಧ್ಯಮ ಗಾತ್ರದ ಕಲ್ಲುಗಳನ್ನು ಕೋಟೆ ನಿರ್ಮಿಸಲು ಬಳಸಿದ್ದು, ಗೋಡೆಯು 20 ಅಡಿ ಎತ್ತರ ಹಾಗು ಆರು ಅಡಿ ಅಗಲ ಇದೆ. ಬುರುಜುಗಳು ಗೋಡೆಗಿಂತಲೂ ಎತ್ತರವಾಗಿದ್ದು, ಆಕರ್ಷಕವಾಗಿ ಕಂಡು ಬರುತ್ತವೆ. ಕೋಟೆಯ ಗೋಡೆಗಳ ಅಂಚಿಗೆ ತ್ರಿಕೋನಾಕಾರದ ಕಲ್ಲುಗಳನ್ನು ನಿಲ್ಲಿಸಿದ್ದು ಇವು ಕೋಟೆಗೆ ಮುತ್ತಿಗೆ ಹಾಕಿದ ವೈರಿಗಳ ಮೇಲೆ ದಾಳಿ ಮಾಡಲು ಅನುಕೂಲವಾಗಿವೆ.

ವಿಜಯನಗರದ ಪತನದ ನಂತರ ಕ್ರಿ.ಶ 1565 ರಲ್ಲಿ ಬಾಲ ಹನುಮಂತ ನಾಯಕ ಎಂಬ ಪಾಳೇಗಾರನ ಆಳ್ವಿಕೆಗೆ ಒಳಪಟ್ಟಿತು.
ಇಲ್ಲಿನ ಕೋಟೆಯಿಂದ ಈ ಸ್ಥಳಕ್ಕೆ ತೆಕ್ಕಲಕೋಟೆ ಎಂಬ ಹೆಸರು ಬಂದಿದೆ. ಊರಿನ ಹಳೇ ಕಿಲ್ಲೇವು ಎ೦ದು ಕರೆಸಿಕೊಳ್ಳುವ ಸ್ಥಳದಲ್ಲಿ ಮತ್ತೊಂದು ಕೋಟೆ ಇದ್ದು, ಈಗ ಕೋಟೆಯ ಅವಶೇಷಗಳು ಮಾತ್ರ ಗೋಚರಿಸುತ್ತವೆ.

ಕೋಟೆಯ ಪಶ್ಚಿಮ ಗೋಡೆ ಕುಸಿದಿರುವುದು
ಕೋಟೆಯ ಪಶ್ಚಿಮ ಗೋಡೆ ಕುಸಿದಿರುವುದು
ಕೋಟೆಯ ಬುರುಜು(ಕೊತ್ತಲ) ಗಳ ಮೇಲೆ ಬೇಲಿ ಬೆಳೆದಿದ್ದು ಕುಸಿಯುವ ಭೀತಿಯಿದೆ
ಕೋಟೆಯ ಬುರುಜು(ಕೊತ್ತಲ) ಗಳ ಮೇಲೆ ಬೇಲಿ ಬೆಳೆದಿದ್ದು ಕುಸಿಯುವ ಭೀತಿಯಿದೆ

ಕೋಟೆಯು ಪುರಾತತ್ವ ಇಲಾಖೆಯ ಆಧೀನದಲ್ಲಿದ್ದು ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಆದರೂ ಈ ಕುರಿತು ಇಲಾಖೆಗೆ ಗೋಡೆ ಹಾಗೂ ಕೊತ್ತಲಗಳ ದುರಸ್ತಿಗೆ ವಿನಂತಿಸಲಾಗುವುದು ಪರಶುರಾಮ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ತೆಕ್ಕಲಕೋಟೆ

ಕೋಟೆ ಸಂರಕ್ಷಣೆಗೆ ನಿರ್ಲಕ್ಷ್ಯ

ಪ್ರಸ್ತುತ ಕೋಟೆಯ ಒಳಭಾಗದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕಸ್ತೂರ್ ಬಾ ಗಾಂಧಿ ಬಾಲಿಕಾ ಶಾಲೆ ಹಾಗೂ ಆರ್‌ಎಂಎಸ್‍ಎ ಶಾಲೆಯ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೋಟೆಯ ರಕ್ಷಣಾ ಗೋಡೆ ಹಾಗೂ ಬುರುಜುಗಳು ಬಿರುಕು ಬಿಟ್ಟಿದ್ದು ಯಾವ ಸಂದರ್ಭದಲ್ಲಾದರೂ ಕುಸಿಯುವ ಭೀತಿ ಕಾಡುತ್ತಿದೆ. ಅಪಾಯದ ಮುನ್ಸೂಚನೆ ಅರಿತು ಈಗಲಾದರೂ ಸ್ಥಳೀಯ ಆಡಳಿತವಾಗಲಿ ಪ್ರಾಚ್ಯವಸ್ತು ಇಲಾಖೆಯವರಾಗಲಿ ಐತಿಹಾಸಿಕ ಸ್ಮಾರಕವಾದ ಕೋಟೆಯನ್ನು ರಕ್ಷಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT