ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರಿ, ಪುಳಿಯೋಗರೆಗೆ ‘ಚಂದ್ರೋದಯ’

ಕೂರಲು ಆಸನಗಳಿಲ್ಲ; ತಟ್ಟೆ ಇಡಲು ಜಾಗವಿಲ್ಲ; ನಿಂತುಕೊಂಡೇ ಉಪಾಹಾರ ಸೇವಿಸುವ ಜನ
Last Updated 29 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಇನ್ನೂ ಸುರ್ಯೋದಯ ಆಗಿರುವುದಿಲ್ಲ. ಅಷ್ಟರಲ್ಲಾಗಲೇ ನಗರದ ಮೂರಂಗಡಿ ವೃತ್ತ ಸಮೀಪದ ಸಂಧಿಯಲ್ಲಿ ಗಜಿಬಿಜಿ ಶುರುವಾಗಿರುತ್ತದೆ. ಕೊತ..ಕೊತ ಕುದಿಯುವ ಬಿಸಿ ಎಣ್ಣೆಯಲ್ಲಿ ಚುರ್‌..ಚುರ್‌.. ಎಂದು ಪೂರಿ ಹಾಕುವ ಶಬ್ದ ಕೇಳಿಸುತ್ತಿರುತ್ತದೆ. ತಾ ಮುಂದು, ನಾ ಮುಂದು ಎಂದು ಜನ ಉಪಾಹಾರಕ್ಕಾಗಿ ಹಾತೊರೆಯುತ್ತಿರುತ್ತಾರೆ.

ಇದು ‘ಚಂದ್ರೋದಯ’ ಹೋಟೆಲ್‌ ಎದುರು ನಿತ್ಯ ಕಂಡು ಬರುವ ದೃಶ್ಯಗಳಿವು. ಅಂದಹಾಗೆ, ಈ ಹೋಟೆಲ್‌ನಲ್ಲಿ ಬೆಳಿಗ್ಗೆ ಐದು ಗಂಟೆಯಿಂದಲೇ ಉಪಾಹಾರಕ್ಕಾಗಿ ಸಿದ್ಧತೆಗಳು ಆರಂಭವಾಗುತ್ತವೆ. ಆರು ಗಂಟೆಯ ನಂತರ ವಿವಿಧ ಕಡೆಗಳಿಂದ ಜನ ಬರಲು ಶುರು ಮಾಡುತ್ತಾರೆ. ಅದಾಗಲೇ ಸಿದ್ಧವಾದ ಉಪಾಹಾರದ ಪಾತ್ರೆಗಳನ್ನು ಒಂದೊಂದಾಗಿ ಜೋಡಿಸಿ ಇಡುವಾಗಲೇ, ‘ಬೇರೆ ಕಡೆಗೆ ಹೋಗಬೇಕು. ಸಮಯ ಆಗುತ್ತಿದೆ. ಬೇಗ ಕೊಡಿ’ ಎಂದು ಜನ ಒಂದೇ ಸಮನೇ ಹೇಳುತ್ತಿರುತ್ತಾರೆ.

‘ಸ್ವಲ್ಪ ತಡೀರಿ.. ತಡೀರಿ..’ ಎನ್ನುತ್ತಲೇ ಹೋಟೆಲಿನ ಒಡತಿ ಸುಮಂಗಲಮ್ಮ ಅವರು ದೇವರಿಗೆ ಪೂಜೆ ಮಾಡಿ, ಊದು ಬತ್ತಿ ಬೆಳಗಿ, ‘ಹೇಳ್ರಪ್ಪ ಏನ್‌ ಬೇಕು ಈಗ ಹೇಳ್ರಿ’ ಎನ್ನುತ್ತಾರೆ. ಅದರಲ್ಲಿ ಹೆಚ್ಚಿನವರಿಂದ ಕೇಳಿ ಬರುವುದು ಎರಡೇ ತಿನಿಸುಗಳ ಹೆಸರು, ಪೂರಿ ಮತ್ತು ಪುಳಿಯೋಗರೆ. ಅಷ್ಟರಮಟ್ಟಿಗೆ ಇಲ್ಲಿ ತಯಾರಿಸುವ ಅವರೆಡು ತಿನಿಸುಗಳಿಗೆ ಬೇಡಿಕೆ ಇದೆ.

ಬೆಳಿಗ್ಗೆ ವಾಯು ವಿಹಾರ ಮುಗಿಸಿಕೊಂಡು ಮನೆಗೆ ಹೋಗುವವರು ಇಲ್ಲಿಯೇ ಉಪಾಹಾರ ಮುಗಿಸಿಕೊಂಡು, ನಂತರ ಮನೆಗೂ ತೆಗೆದುಕೊಂಡು ಹೋಗುತ್ತಾರೆ. ಸಮೀಪದಲ್ಲೇ ಬಸ್‌ ನಿಲ್ದಾಣ ಇರುವುದರಿಂದ ಚಾಲಕರು, ನಿರ್ವಾಹಕರು ಹೆಚ್ಚಾಗಿ ಬರುತ್ತಾರೆ. ಇದರ ಜತೆಗೆ ಪೊಲೀಸ್‌ ಸಿಬ್ಬಂದಿ, ಇತರೆ ಕೆಲಸಕ್ಕೆ ಹೋಗುವವರು ಬಂದು ಉಪಾಹಾರ ಮಾಡುತ್ತಾರೆ.

‘ಇಲ್ಲಿ ಉಪಾಹಾರ ಬಹಳ ರುಚಿಯಾಗಿರುತ್ತದೆ. ಅದರಲ್ಲೂ ಪೂರಿ, ಪುಳಿಯೋಗರೆ ಬಹಳ ಚೆನ್ನಾಗಿ ಮಾಡುತ್ತಾರೆ. ಸಣ್ಣ ಹೋಟೆಲ್‌ ಆದರೂ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಹೀಗಾಗಿಯೆ ಇಲ್ಲಿ ಬಂದು ಉಪಾಹಾರ ಮಾಡಬೇಕು ಅನಿಸುತ್ತದೆ’ ಎಂದು ಚಾಲಕ ರಮೇಶ ತಿಳಿಸಿದರು.

ಪೂರಿ, ಪುಳಿಯೋಗರೆ ಜತೆಗೆ ಚಿತ್ರಾನ್ನ, ಇಡ್ಲಿ, ವಡೆ ಕೂಡ ಮಾಡುತ್ತಾರೆ. ಎಲ್ಲದಕ್ಕೂ ಪ್ರತಿ ಪ್ಲೇಟ್‌ಗೆ ₨30 ನಿಗದಿಪಡಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ವರೆಗೆ ಇದು ತೆರೆದಿರುತ್ತದೆ. ಸಂಜೆ ಐದರಿಂದ ರಾತ್ರಿ ಎಂಟು ಗಂಟೆಯ ವರೆಗೆ ಮಂಡಾಳ ಒಗ್ಗರಣೆ, ಮೆಣಸಿನಕಾಯಿ ಮಾಡುತ್ತಾರೆ. ಸಂಜೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಸ್ವಲ್ಪ ತಡವಾಗಿ ಬಂದರೂ ಎಲ್ಲವೂ ಮುಗಿದಿರುತ್ತದೆ. ಸಿಗದವರು ಸಪ್ಪೆ ಮೊರೆ ಹಾಕಿ ಹಿಂತಿರುಗುತ್ತಾರೆ.

ಅಂದಹಾಗೆ, ಈ ಹೋಟೆಲಿನಲ್ಲಿ ಕೂರುವುದಕ್ಕೆ ಆಸನಗಳಿಲ್ಲ. ಬಾಳೆ ಎಲೆ ಇಟ್ಟು ತಿನ್ನುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಜನ ಸಮೀಪದ ಮಳಿಗೆಗಳ ಕಟ್ಟೆ ಮೇಲೆ ಕುಳಿತುಕೊಂಡು, ಕೈಯಲ್ಲಿ ಹಿಡಿದುಕೊಂಡೇ ಉಪಾಹಾರ ಸೇವಿಸುತ್ತಾರೆ. ಕೆಲವರು ನಿಂತ ಜಾಗದಲ್ಲೇ ಮುಗಿಸುತ್ತಾರೆ.

45 ವರ್ಷಗಳಿಂದ ಒಂದೇ ಜಾಗದಲ್ಲಿ ಈ ಹೋಟೆಲ್‌ ನಡೆಸಲಾಗುತ್ತಿದೆ. ಚಂದ್ರು ಎಂಬುವರು ಹೋಟೆಲ್‌ ಆರಂಭಿಸಿದ್ದರು. ಅವರು ಗತಿಸಿ ಹೋದ ನಂತರ ಅವರ ಮಡದಿ ಸುಮಂಗಲಮ್ಮ ಹಾಗೂ ಅವರ ಮಗ ಗಣೇಶ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಉಪಾಹಾರ ತಯಾರಿಸುವುದು, ಬಡಿಸುವುದು ಎಲ್ಲವೂ ಮನೆಯವರೇ ಮಾಡುತ್ತಾರೆ.

‘ಇದು ಎಂ.ಡಿ. ಖಾದರ್‌ ಎಂಬುವರಿಗೆ ಸೇರಿದ ಜಾಗ. ಅವರ ಮಳಿಗೆಯ ಹಿಂಬದಿಯಲ್ಲಿ ಒಂದು ಸಣ್ಣ ಕೊಠಡಿ ಕೊಟ್ಟಿದ್ದಾರೆ. ಅದರಲ್ಲಿ ರೇಷನ್‌ ಸಂಗ್ರಹಿಸಿ ಇಡುತ್ತೇವೆ. ಇನ್ನುಳಿದಂತೆ ಎಲ್ಲ ಕೆಲಸ ಈ ಶೆಡ್‌ನಲ್ಲಿಯೇ ಮಾಡುತ್ತೇವೆ’ ಎನ್ನುತ್ತಾರೆ ಸುಮಂಗಲಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT