ಬಳ್ಳಾರಿ: ಗಣೇಶ ಚತುರ್ಥಿ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪೊಲೀಸ್ ಪಥ ಸಂಚಲನ ನಡೆಯಿತು.
ಹುಸೇನ್ ನಗರದಿಂದ ಪಥ ಸಂಚಲನ ಆರಂಭವಾಗಿ ರಾಯಲ್ ವೃತ್ತದ ಮೂಲಕ ಬೆಂಗಳೂರು ರಸ್ತೆ ಮಾರ್ಗವಾಗಿ ಮೋತಿ ವೃತ್ತದಿಂದ ಕೌಲ್ ಬಜಾರ್ 1ನೇ ಗೇಟ್‍ನಿಂದ ಕೌಲ್ ಬಜಾರ್ ಪೊಲೀಸ್ ಠಾಣೆಗೆ ತಲುಪಿ ಮುಕ್ತಾಯಗೊಂಡಿತು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ‘ನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಯಾವುದೇ ರೀತಿಯ ಅನಾಹುತಗಳು ಆಗದಂತೆ ಶಾಂತಿಯುತವಾಗಿ ಆಚರಿಸಬೇಕು. ಈ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಥಸಂಚಲನ ನಡೆಸಲಾಯಿತು’ ಎಂದರು.
‘ಗಣೇಶ ಮೂರ್ತಿ ಮೆರವಣಿಗೆ ಮತ್ತು ಮೂರ್ತಿ ವಿಸರ್ಜಿಸುವ ಸಮಯದಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಶಾಂತಿ ಕದಡುವ ಕೆಲಸವನ್ನು ಯಾರಾದರೂ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ. ರವಿಕುಮಾರ್ ಸೇರಿದಂತೆ ಡಿವೈಎಸ್ಪಿ, ಎಸ್ ಐ, ಎಎಸ್‍ಐ, ಬಳ್ಳಾರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಪೊಲೀಸ್ ತುಕಡಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.