ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಗೋಡು | ಶಿಕ್ಷಕರ ಕೊರತೆ, ಸೋರುವ ಕೊಠಡಿ: ಕುಡುಕರ ತಾಣವಾದ ಸರ್ಕಾರಿ ಶಾಲೆ ಆವರಣ

Published 11 ಏಪ್ರಿಲ್ 2024, 6:24 IST
Last Updated 11 ಏಪ್ರಿಲ್ 2024, 6:24 IST
ಅಕ್ಷರ ಗಾತ್ರ

ಕುರುಗೋಡು: ತಾಲ್ಲೂಕಿನ ಎಚ್.ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಶೌಚಾಲಯಗಳಿಲ್ಲ. ಕಾಂಪೌಂಡ್ ಇಲ್ಲ. ಸಾಮೂಹಿಕ ಪ್ರಾರ್ಥನೆಗೆ ಸ್ಥಳವಿಲ್ಲ. ಕ್ರೀಡಾಂಗಣ ಇಲ್ಲವೇ ಇಲ್ಲ.  ಮಳೆ ಬಂದರೆ ಸೋರುವ ಕೊಠಡಿ, ಕಾಡುವ ಶಿಕ್ಷಕರ ಕೊರತೆ, ದುರ್ವಾಸನೆ ಬೀರುವ ಚರಂಡಿ... ಹೀಗೆ ಸಮಸ್ಯೆಗಳ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತದೆ.

ಗ್ರಾಮದ ಮಧ್ಯಭಾಗದಲ್ಲಿರುವ ಸರ್ಕಾರಿ ಶಾಲೆ ಕಟ್ಟಡಕ್ಕೆ ಕಾಂಪೌಂಡ್ ಇಲ್ಲದ ಕಾರಣ ರಾತ್ರಿಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡುತ್ತದೆ. ಶಾಲೆಗೆ ಹೊಂದಿಕೊಂಡು ಕಲ್ಲೇಶ್ವರ ಮತ್ತು ಶರಣಬಸವೇಶ್ವರ ದೇವಸ್ಥಾನಗಳಿದ್ದು ಭಕ್ತರು ಬಾರಿಸುವ ಗಂಟೆಯ ಶಬ್ದ ವಿದ್ಯಾರ್ಥಿಗಳ ಏಕಾಗ್ರತೆಗೆ ಧಕ್ಕೆಯುಂಟುಮಾಡುತ್ತಿದೆ. ಪಕ್ಕದಲ್ಲಿಯೇ ಇರುವ ಕಲ್ಯಾಣ ಮಂಟಪದಲ್ಲಿ ಜರುಗುವ ವಿವಾಹಗಳಲ್ಲಿ ಬಳಸುವ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದದಿಂದ ಪಾಠಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಶಾಲೆ ಆವರಣದಲ್ಲಿಯೇ ಮಾರೆಮ್ಮ ಮತ್ತು ದುರುಗಮ್ಮ ದೇವಿಯ ದೇವಸ್ಥಾನಗಳಿಗೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ಆವರಣದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವಾಗ ಗಂಟೆ ಬಾರಿಸುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಭಂಗವಾಗುತ್ತಿದೆ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎನ್ನುವ ಶಿಕ್ಷಣ ಇಲಾಖೆ ನಿಯಮ ಇಲ್ಲಿ ಪಾಲನೆಯಾಗಿಲ್ಲ. ನಿಯಮದ ಪ್ರಕಾರ ಒಬ್ಬ ಮುಖ್ಯ ಶಿಕ್ಷಕ ಸೇರಿ 9 ಜನ ಶಿಕ್ಷಕರು ಇರಬೇಕು. ಆದರೆ ನಾಲ್ಕು ಮಂದಿ ಶಿಕ್ಷಕರು ಮಾತ್ರ ಇದ್ದಾರೆ.

‘ಶಾಲೆಯಲ್ಲಿ 4 ಜನ ಕಾಯಂ ಶಿಕ್ಷಕರಿದ್ದು ನಂತರ 4 ಜನ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇರುವ ಸಿಬ್ಬಂದಿ ಒಂದರಿಂದ ಏಳನೇ ತರಗತಿ ಮಕ್ಕಳಿಗೆ ಬೋಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಶಾಶ್ವತ ಪರಿಹಾರಕ್ಕೆ ಶಾಲೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯವಿದೆ. ಶಾಲೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪ್ರಭಾರ ಮುಖ್ಯ ಶಿಕ್ಷಕ ಮಾರುತಿ ಹೇಳಿದರು.

ಬಯಲು ಶೌಚಾಲಯ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ಮೂತ್ರ ವಿಸರ್ಜನೆಗೆ ಬಯಲನ್ನು ಅವಲಂಬಿಸಿದ್ದಾರೆ. 8 ಕೊಠಡಿಗಳಲ್ಲಿ 2 ಶಿಥಿಲಾವಸ್ತೆ ತಲುಪಿವೆ. ಅವುಗಳನ್ನು ತೆರವುಗೊಳಿಸುವಂತೆ ಎರಡು ವರ್ಷಗಳ ಹಿಂದೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೊದಲ ಅಂತಸ್ತಿನಲ್ಲಿರುವ ತರಗತಿ ಕೊಠಡಿಗಳಿಗೆ ತೆರಳುವ ಮೆಟ್ಟಿಲು ಶಿಥಿಲಾವಸ್ತೆ ತಲುಪಿ ಬಿದ್ದಿದ್ದರಿಂದ ಭಯದಲ್ಲಿಯೇ ವಿದ್ಯಾರ್ಥಿಗಳು ಮೆಟ್ಟಿಲು ಮೂಲಕ ಸಾಗುವ ಸ್ಥಿತಿ ಇದೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಸ್. ಗಾದಿಲಿಂಗಪ್ಪ, ‘ಕಾಂಪೌಂಡ್ ಇಲ್ಲದಿರುವುದರಿಂದ ಶಾಲೆಯ ಆವರಣ ರಾತ್ರಿ ಸಮಯದಲ್ಲಿ ಕುಡಿತ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತದೆ. ಶಾಲೆ ಸ್ಥಳಾಂತರಿಸುವಂತೆ ಇಲಾಖೆಗೆ ಮನವಿಸಲ್ಲಿಸಲಾಗಿದೆ. ಪೊಲೀಸ್ ಠಾಣೆಗೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ ಮನವಿಮಾಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕುರುಗೋಡು ತಾಲ್ಲೂಕಿನ ಎಚ್.ವೀರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮದ್ಯದ ಬಾಟಲಿ ಮತ್ತು ಪ್ಲಾಸ್ಟಿಕ್ ಗ್ಲಾಸ್ ಬಿದ್ದಿರುವುದು
ಕುರುಗೋಡು ತಾಲ್ಲೂಕಿನ ಎಚ್.ವೀರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮದ್ಯದ ಬಾಟಲಿ ಮತ್ತು ಪ್ಲಾಸ್ಟಿಕ್ ಗ್ಲಾಸ್ ಬಿದ್ದಿರುವುದು
ಅಂಕಿ ಅಂಶ: 259 ಒಟ್ಟು ವಿದ್ಯಾರ್ಥಿಗಳು 06 ಕೊಠಡಿಗಳು 04 ಕಾಯಂ ಶಿಕ್ಷಕರು
ಶಾಲೆ ಎದುರಿಸುತ್ತಿರವ ಸಮಸ್ಯೆ ಕುರಿತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಸದಸ್ಯರು ಗಮನಕ್ಕೆ ತಂದಿದ್ದಾರೆ. ಶಾಲೆ ಸ್ಥಳಾಂತರ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು
ಎಚ್.ಎಂ.ಸಿದ್ಧಲಿಂಗಮೂರ್ತಿ ಬಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT