ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಮಿಮಲೈನಲ್ಲಿ ನಿಯಮ ಮೀರಿ ಗಣಿಗಾರಿಕೆ: ₹81 ಕೋಟಿ ಬಾಕಿ ಪ್ರಶ್ನಿಸಿದ ಕೇಂದ್ರ

Published 10 ಆಗಸ್ಟ್ 2024, 23:40 IST
Last Updated 10 ಆಗಸ್ಟ್ 2024, 23:40 IST
ಅಕ್ಷರ ಗಾತ್ರ

ಬಳ್ಳಾರಿ: ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಶ್ರೇಣಿಯಲ್ಲಿ ನಿಯಮ ಮೀರಿ ಗಣಿಗಾರಿಕೆ ನಡೆಸಿದ್ದ ‘ಕಾರ್ತಿಕೇಯ ಮ್ಯಾಂಗನೀಸ್ ಆ್ಯಂಡ್‌ ಐರನ್ ವೋರ್‌’ ಕಂಪನಿ ರಾಜ್ಯ ಸರ್ಕಾರಕ್ಕೆ ₹81.14 ಕೋಟಿಯಷ್ಟು ನಷ್ಟ ಪರಿಹಾರ ‍ಪಾವತಿಸಬೇಕಿದೆ.

ಕೇಂದ್ರದ ಉನ್ನತಾಧಿಕಾರ ಸಮಿತಿಯ ವರದಿಯಂತೆ ‘ಸಿ’ ವರ್ಗಕ್ಕೆ (ಅಕ್ರಮ) ಸೇರಿದ ‘ಕಾರ್ತಿಕೇಯ  ಮ್ಯಾಂಗನೀಸ್‌ ಆ್ಯಂಡ್‌ ಐರನ್‌ ವೋರ್‌’ನ ಗಣಿಯನ್ನು ಎಂಎಸ್‌ಪಿಎಲ್‌ ಸಂಸ್ಥೆ 2016ರಲ್ಲಿ ಹರಾಜಿನಲ್ಲಿ ಖರೀದಿ ಮಾಡಿತ್ತು. 28.299 ಹೆಕ್ಟೇರ್‌ನ ಈ ಗಣಿಗೆ ಸದ್ಯ ಹೊಸದಾಗಿ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಗಣಿಗೆ ಮೊದಲ ಹಂತದ ಅನುಮತಿ (ಸ್ಟೇಜ್‌–1)ನೀಡುವಂತೆ ಅರಣ್ಯ ಇಲಾಖೆಯ ಹೆಚ್ಚು
ವರಿ ಮುಖ್ಯ ಕಾರ್ಯದರ್ಶಿ ಮೇ 17ರಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.

ರಾಜ್ಯದ ಶಿಫಾರಸು ಪರಿಶೀಲಿಸಿರುವ ಕೇಂದ್ರ ಸರ್ಕಾರ, ಹಲವು ದೋಷಗಳನ್ನು ಪತ್ತೆ ಮಾಡಿ ರಾಜ್ಯಕ್ಕೆ ಪತ್ರ ಬರೆದಿದ್ದು, ಅದು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕಾರ್ತಿಕೇಯ ಕಂಪನಿಯು ಕೇಂದ್ರದ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಗಣಿಗಾರಿಕೆ ನಡೆಸಿದ್ದ ಪ್ರದೇಶದ ಪ್ರಸ್ತುತ ನಿವ್ವಳ ಮೌಲ್ಯ ಮತ್ತು ಗಣಿಗಾರಿಕೆಯಿಂದ ಆದ ಅರಣ್ಯ, ಪರಿಸರ ಹಾನಿಯ ದಂಡ ಒಟ್ಟು ₹81,14,55,517 ಆಗಿದ್ದು, ಅದನ್ನು ಈ ವರೆಗೆ ಪಾವತಿ ಮಾಡಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೇಂದ್ರ ಹೇಳಿದೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾರ್ತಿಕೇಯ ಕಂಪನಿಯ ವಿರುದ್ಧ 2012ರ ಅಕ್ಟೋಬರ್‌ 3ರಂದು  ಪ್ರಕರಣ ದಾಖಲಾಗಿತ್ತು. ಬಾಕಿ ವಸೂಲಿಗೆ ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.  

ವರದಿಗೂ ಮೊದಲೇ ಅನುಮತಿ
ಸದ್ಯ ಎಂಎಸ್‌ಪಿಎಲ್‌ಗೆ ನೀಡಲಾಗಿರುವ ಗಣಿಯು 1,200 ವರ್ಷಗಳಷ್ಟು ಪುರಾತನವಾದ ಕುಮಾರಸ್ವಾಮಿ ದೇವಸ್ಥಾನದ ಸನಿಹವಿದೆ. ‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಕಾರ ಸ್ಮಾರಕಗಳ 600 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷಿದ್ಧ. ಆದರೆ, ರಾಜ್ಯ ಸರ್ಕಾರ ಶಿಫಾರಸು ಮಾಡಿರುವ 28.299 ಹೆಕ್ಟೇರ್‌ನ ಗಣಿಯು ನಿಷೇಧಿತ ಪ್ರದೇಶದಲ್ಲಿದೆ. ಸರ್ಕಾರವು ಗಣಿಗಾರಿಕೆ ಯೋಜನೆಯಲ್ಲಿ ಪರಿಷ್ಕರಣೆ ಮಾಡಬೇಕು’ ಎಂದು ಕೇಂದ್ರ ಸೂಚಿಸಿದೆ. ದೇಗುಲ ಸುತ್ತ ಗಣಿಗಾರಿಕೆಯಿಂದ ಆಗುತ್ತಿರುವ ಹಾನಿಯ ಬಗ್ಗೆ ಅಧ್ಯಯನ ಮಾಡಬೇಕು ಎಂದು ಪತ್ರಕರ್ತ ಚಂದ್ರಕಾಂತ ವಡ್ಡು, ವಿನಾಯಕ ಮುದೇನೂರು ಮತ್ತು ಇತರರು ಹೈಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಚೆನ್ನೈನ ಐಐಟಿ, ನೀರಿಯ (ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ–ಎನ್‌ಇಇಆರ್‌ಐ) ತಜ್ಞರ ತಂಡವನ್ನು ಹೈಕೋರ್ಟ್‌ ನೇಮಿಸಿತ್ತು. ಈ ಸಮಿತಿ ಇನ್ನೂ ಅಧ್ಯಯನ ನಡೆಸಿಲ್ಲ. ಹೀಗಿರುವಾಗಲೇ ಗಣಿಗಾರಿಕೆಗೆ ಅನುಮಿತಿ ನೀಡಿರುವುದೂ ಆಕ್ಷೇಪಕ್ಕೆ ಕಾರಣವಾಗಿದೆ.
ಆರ್‌ಎಫ್‌ಒ ವಿರುದ್ಧ ಏನು ಕ್ರಮ?:
ಕಾರ್ತಿಕೇಯ ಕಂಪನಿಯ ಗಣಿಗಾರಿಕೆ ಭೂಮಿ ಮಂಜೂರು ಮಾಡುವಾಗ, ನಿರ್ದಿಷ್ಟ ಪ್ರದೇಶವನ್ನು ಅರಣ್ಯ ಪ್ರದೇಶ ಅಲ್ಲ ಎಂದು 2007ರ ಸೆಪ್ಟೆಂಬರ್‌ 26ರಂದು ವರದಿ ನೀಡಿದ್ದ ಅಂದಿನ ಆರ್‌ಎಫ್‌ಒ ವಿರುದ್ಧ ಕೈಗೊಂಡ ಕ್ರಮದ ಪ್ರಸ್ತುತ ಸ್ಥಿತಿಗತಿಗಳನ್ನೂ ಕೇಂದ್ರ ಸರ್ಕಾರ ಕೇಳಿದೆ. ಅಧಿಕಾರಿಯನ್ನು ಇಲಾಖೆ ಈಗಾಗಲೇ ವಜಾಗೊಳಿಸಿದ್ದು, ದಂಡ ಸಂಗ್ರಹಿಸಲು ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT