ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂದಾಲ್‌ ಸಂಜೀವಿನಿ ಆಸ್ಪತ್ರೆಯ ಮಹಿಳೆಗೆ ಆನ್‌ಲೈನ್‌ನಲ್ಲಿ ₹17 ಲಕ್ಷ ವಂಚನೆ

‘ಮೂವಿ ರೇಟಿಂಗ್‌ ಮಾರ್ಕೆಟಿಂಗ್‌’ ಮಾಡಲು ಹೋಗಿ ತೊಂದರೆಗೆ
Published 19 ಮೇ 2024, 14:55 IST
Last Updated 19 ಮೇ 2024, 14:55 IST
ಅಕ್ಷರ ಗಾತ್ರ

ಬಳ್ಳಾರಿ: ಆನ್‌ಲೈನ್‌ ವಂಚನೆಗೊಳಗಾಗಿರುವ ಮಹಿಳೆಯೊಬ್ಬರು ₹17 ಲಕ್ಷ ಹಣ ಕಳೆದುಕೊಂಡಿದ್ದು, ಈ ಕುರಿತು ತೋರಣಗಲ್‌ ಠಾಣೆಗೆ ದೂರು ನೀಡಿದ್ದಾರೆ.

ಜಿಂದಾಲ್‌ ವಿ.ವಿ ನಗರ ಟೌನ್‌ಶಿಪ್‌ ವಾಸಿಯಾಗಿರುವ ಮಹಿಳೆ, ಸದ್ಯ ಜಿಂದಾಲ್‌ ಸಂಜೀವಿನಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಅವರ ಮೊಬೈಲ್‌ಗೆ ಟೆಲಿಗ್ರಾಮ್‌ ಸಂದೇಶವೊಂದು ಬಂದಿತ್ತು. ಅದರಲ್ಲಿ ನೀಡಲಾಗಿದ್ದ ಸೂಚನೆಗಳನ್ನೆಲ್ಲ ಪಾಲಿಸಿದ್ದ ಮಹಿಳೆ ಆನ್‌ಲೈನ್‌ ‘ಮೂವಿ ರೇಟಿಂಗ್‌ ಮಾರ್ಕೆಟಿಂಗ್‌’ ಆರಂಭಿಸಿದ್ದರು.

ವಂಚಕರ ಸೂಚನೆಯಂತೆ ‘ಮೂವಿ ರೇಟಿಂಗ್‌‘ ಮಾಡಿದಾಗಲೆಲ್ಲ ಅವರಿಗೆ ಹಣ ಸಂದಾಯವಾಗಿರುವುದಾಗಿ ಮೊಬೈಲ್‌ಗೆ ಮೆಸೆಜ್‌ ಬಂದಿದೆ. ಆ ಹಣವನ್ನು ಪಡೆಯಬೇಕಿದ್ದರೆ, ಇಂತಿಷ್ಟು ಹಣ ಪಾವತಿಸಬೇಕು ಎಂದು ಹೇಳಲಾಗಿದೆ. ಅದನ್ನು ನಂಬಿದ ಮಹಿಳೆ ಹಣ ಹಾಕಿದ್ದಾರೆ. ಇದೇ ರೀತಿ ಹಲವು ಕಂತುಗಳಲ್ಲಿ ಲಕ್ಷಾಂತರ ಹಣ ಪಾವತಿ ಮಾಡಿದ್ದಾರೆ.

ಇತ್ತೀಚೆಗೆ ‘ಮೂವಿ ರೇಟಿಂಗ್‌‘ ಮಾಡಿದಾಗ ಅವರಿಗೆ ₹26,42,770 ಹಣ ಸಂದಾಯವಾಗಿರುವುದಾಗಿ ಸಂದೇಶ ಬಂದಿದ್ದು, ಅದನ್ನು ಪಡೆಯಬೇಕಿದ್ದರೆ ₹12,01,560 ಪಾವತಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಹಿಂದೆಲ್ಲ ಹಣ ಪಾವತಿಸಿದಾಗ ಹಿಂದಿರುಗಿ ತಮಗೆ ಹಣ ಬಂದಿರಲಿಲ್ಲ. ಇದರಿಂದ ಎಚ್ಚೆತ್ತ ಮಹಿಳೆ ಹಣ ಕೊಡಲು ನಿರಾಕರಿಸಿದ್ದಾರೆ.ಜತೆಗೆ ಹಿಂದೆ ಪಾವತಿಸಿದ ಹಣ ಕೊಡುವಂತೆ ಆಗ್ರಹಿಸಿದ್ದಾರೆ. ಆದರೆ, ವಂಚಕರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಮಹಿಳೆಗೆ ತಿಳಿಯದೇ ಲೋನ್‌: ಈ ಮಧ್ಯೆ ಮಹಿಳೆ ನಿವೇಶನ ಖರೀದಿಗೆಂದು ₹5.50 ಲಕ್ಷವನ್ನು ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ಖಾತೆಯಲ್ಲೇ ಉಳಿಸಿದ್ದರು. ಬಳಿಕ ಚಿನ್ನ ಅಡವಿಟ್ಟ ₹3.62 ಲಕ್ಷವನ್ನು ಖಾತೆಯಲ್ಲೇ ಇಟ್ಟಿದ್ದರು. ಆನ್‌ಲೈನ್‌ ವಂಚಕರು ಈ ಹಣವನ್ನೂ ಕಬಳಿಸಿದ್ದಾರೆ. ಜತೆಗೆ ಮಹಿಳೆ ಹೆಸರಲ್ಲಿ ₹2.50 ಲಕ್ಷ ಬ್ಯಾಂಕ್‌ ಸಾಲ ಪಡೆದು ಅದನ್ನೂ ಬೇರೆ ಬ್ಯಾಂಕ್‌ಗೆ ವರ್ಗಾಯಿಸಿಕೊಳ್ಳಲಾಗಿದೆ. ಮತ್ತೊಂದು ಖಾತೆಯಲ್ಲೂ ಮಹಿಳೆ ಹೆಸರಲ್ಲಿ ₹1.18 ಲಕ್ಷ ಬಾಂಕ್‌ ಸಾಲ ಪಡೆದು ಅದನ್ನೂ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಇದೇ ರೀತಿ ತಮ್ಮ ವಿವಿಧ ಖಾತೆಗಳಿಂದಲೂ, ವಿವಿಧ ದಿನ ಹಣ ಕಬಳಿಸಲಾಗಿದೆ. ಮೊಬೈಲ್‌ ಅನ್ನು ಹ್ಯಾಕ್‌ ಮಾಡಿ, ಒಟಿಪಿಗಳನ್ನು ಆಟೋ ಫಾರ್ವಡ್‌ ಮಾಡಿಕೊಂಡು ಒಟ್ಟಾರೆ ₹17,02,365 ಹಣವನ್ನು ತಮಗೆ ವಂಚಿಸಲಾಗಿದೆ’ ಎಂದು ಮಹಿಳೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತರ ವಿರುದ್ಧ ತೋರಣಗಲ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT