ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Budget 2024 | ಬಳ್ಳಾರಿ: ನಿರೀಕ್ಷೆ ಬೆಟ್ಟದಷ್ಟಿದ್ದರೂ ದಕ್ಕಿದ್ದು ಅತ್ಯಲ್ಪ

ಭಾರಿ ಯೋಜನೆ, ಘೋಷಣೆಗಳಿಲ್ಲ: ಮೂಗಿಗೆ ತುಪ್ಪ ಸವರಿದ ಬಜೆಟ್‌
Published 17 ಫೆಬ್ರುವರಿ 2024, 8:17 IST
Last Updated 17 ಫೆಬ್ರುವರಿ 2024, 8:17 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರ ಈ ಬಾರಿ ಇಲ್ಲಿನ ಜನರ ಮೂಗಿಗೆ ತುಪ್ಪ ಸವರಿ ಹೊಗಳಿಕೆ ಗಿಟ್ಟಿಸುವ ಪ್ರಯತ್ನ ಮಾಡಿದೆ. 

ಜಿಲ್ಲೆಗೆ ಈ ಬಜೆಟ್‌ನಲ್ಲಿ ದೊಡ್ಡದೊಡ್ಡ ಯೋಜನೆಗಳು ಸಿಗಬಹುದು ಎಂಬ ದೊಡ್ಡ ನಿರೀಕ್ಷೆಗಳು ಜನರಲ್ಲಿತ್ತು. ಇದೇ ಕನಸನ್ನು ಸ್ಥಳೀಯ ಕಾಂಗ್ರೆಸ್‌ ಮುಖಂಡರೂ ಕಂಡಿದ್ದರು.  ಜೀನ್ಸ್‌ ಅಪೆರಲ್‌ ಪಾರ್ಕ್‌, ಜಿಲ್ಲೆಗೊಂದು ವಿಮಾನ ನಿಲ್ದಾಣ, ಒಣಮೆಣಸಿನಕಾಯಿ ಮಾರುಕಟ್ಟೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ, ಗಣಿ ಬಾದಿತ ಪ್ರದೇಶಗಳ ನಾಗರಿಕರ ಜೀವನ ಹಸನಾಗಲು ಕಾರ್ಯಕ್ರಮ, ಕ್ರಿಕೆಟ್‌ ಮೈದಾನ ಹೀಗೆ ಹಲವು ಯೋಜನೆಗಳಿಗೆ ಈ ಬಜೆಟ್‌ ಮುನ್ನುಡಿ ಬರೆಯಲಿದೆ ಎಂಬ ಅಭಿಪ್ರಾಯಗಳು ಪ್ರಬಲವಾಗಿ ಕೇಳಿ ಬಂದಿತ್ತಾದರೂ, ಅವು ಹುಸಿಯಾಗಿವೆ.

ಆದರೆ, ಕೈಗಾರಿಕಾ ಮತ್ತು ಔದ್ಯಮಿಕ ವಲಯಯಕ್ಕೆ ನುರಿತ ಉದ್ಯೋಗಿಗಳ ಅಗತ್ಯವನ್ನು ಪೂರೈಸಲು ಸಂಡೂರಿನಂತಹ ತಾಲ್ಲೂಕಿನಲ್ಲಿ ‘ಸ್ಕಿಲ್‌ (ಕೌಶಲ) ಅಕಾಡೆಮಿ’ ಸ್ಥಾಪಿಸಲು ಮುಂದಾಗಿರುವುದು, ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲು ಹೊರಟಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ನಡೆ ಎಂಬ ಮಾತುಗಳು ಕೇಳಿಬಂದಿವೆ. 

ಜೀನ್ಸ್‌ ಅಪೆರಲ್‌ ಪಾರ್ಕ್‌ ಸ್ಥಾಪನೆಯ ಚರ್ಚೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದಲೂ ನಡೆಯುತ್ತಿತ್ತು. ಅದಕ್ಕೆ ಈ ಬಾರಿ ಆದ್ಯತೆ ಸಿಕ್ಕಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರೇ ಸ್ವತಃ ನೀಡಿದ್ದ ವಾಗ್ದಾನವಿದು. ಇದನ್ನು ಈಡೇರಿಸದೇ ಹೋದರೆ ಲೋಕಸಭಾ ಚುನಾವಣೆಯಲ್ಲಿ ಮಾತಿಗೆ ಸಿಕ್ಕಿಬೀಳುತ್ತೇವೆ ಎಂದು ಅರಿತ ಕಾಂಗ್ರೆಸ್‌, ಬಜೆಟ್‌ನಲ್ಲಿ ಅದನ್ನು ಘೋಷಣೆ ಮಾಡಿದೆ. ಆದರೆ, ಇಲ್ಲಿಯೂ ಗೊಂದಲ ಮುಂದುವರಿಸಿದೆ. ಜೀನ್ಸ್‌ ಪಾರ್ಕ್‌ಗೆ ಅನುದಾನ ಎಷ್ಟು ನೀಡಲಾಗುತ್ತದೆ ಎಂಬ ಮಾಹಿತೆಯೇ ಬಜೆಟ್‌ನಲ್ಲಿ ಇಲ್ಲ.

ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಇರುವ ಜಿಲ್ಲಾ ಖನಿಜ ನಿಧಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನವನ್ನು ಬಳಸಿಕೊಂಡು ಕೆಲ ಯೋಜನೆಗಳನ್ನು ಕಾರ್ಯಗತ ಮಾಡುವ ಮಾತುಗಳನ್ನು ಸರ್ಕಾರ ಬಜೆಟ್‌ನಲ್ಲಿ ಆಡಿದೆ. ಇಲ್ಲಿನ ದುಡ್ಡನ್ನೇ ಬಳಸಿಕೊಂಡು ಅಭಿವೃದ್ಧಿಯ ಮಾತನಾಡುವ ಸರ್ಕಾರದ ನಡೆಯ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

ಬಳ್ಳಾರಿ ಜಿಲ್ಲೆ ವಿಭಜನೆಯಾದ ಪರಿಣಾಮ ಪ್ರವಾಸಿ ತಾಣಗಳು ವಿಜಯನಗರ ಜಿಲ್ಲೆಗೆ ಸೇರಿಕೊಂಡಿವೆ. ಇಲ್ಲಿ ಉಳಿದುಕೊಂಡಿರುವ ಬೆಟ್ಟ–ಕೋಟೆ, ಪ್ರಾಗೈತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ರಮಗಳೇನಾದರೂ ಸಿಗಬಹುದೇ ಎಂಬ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. 

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಗೆದ್ದು, ಸಚಿವರೂ ಆಗಿರುವ ಬಿ. ನಾಗೇಂದ್ರ ಅವರ ಇಲಾಖೆಗೂ ಜಿಲ್ಲೆಯ ಮಟ್ಟಿಗೆ ಹೇಳಿಕೊಳ್ಳುವಂಥ ಅನುದಾನ ಸಿಕ್ಕಂತೆ ಕಾಣುತ್ತಿಲ್ಲ.  ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗಾಗಿ ₹10 ಕೋಟಿ ಹಣ ಒದಗಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಅದಕ್ಕೆ ಹಣ ಹೊಂದಿಸಲು ಕೈ ಇಟ್ಟಿರುವುದು ಜಿಲ್ಲಾ ಖನಿಜ ಪ್ರತಿಷ್ಠಾನದಲ್ಲಿ! 

ಬಳ್ಳಾರಿ ನಗರದ ಸಮೀಪ ಇಂಟಿಗ್ರೇಟೆಡ್ ಟೌನ್‌ಶಿಪ್‌ ಅಭಿವೃದ್ಧಿ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ, ಅದಕ್ಕೆ ಸೂಕ್ತ ವಿವರಣೆಗಳನ್ನು ಕೊಟ್ಟಿಲ್ಲ. ಟೌನ್‌ಶಿಪ್‌ಗೆ ಸೂಕ್ತ ಜಾಗ ಹುಡುಕುವುದು ಯಾವಾಗ, ನಿರ್ವಿವಾದವಾಗಿ ಅದು ಸಾಕಾರಗೊಳ್ಳುವುದು ಯಾವಾಗ ಎಂಬ ಅನುಮಾನಗಳು ಜನರಲ್ಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT