ಹೊಸಪೇಟೆ(ವಿಜಯನಗರ): ತುಂಗಭದ್ರಾ ಜಲಾಶಯದ 19ನೇ ಗೇಟ್ ಕಳಚಿಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಭೂಮಿಗಳಿಗೆ ನೀರು ಲಭಿಸುವುದು ದುಸ್ತರವಾಗಲಿದೆ. ಹೀಗಾಗಿ ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ರೈತರ ಭೂಮಿಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವಾಸದೇವ ಮೇಟಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿ, ರೈತರು ಸಂತಸದಲ್ಲಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಡ್ಯಾಂನ ಒಂದು ಗೇಟ್ ಕೊಚ್ಚಿಹೋಗಿ, ಅಪಾರ ಪ್ರಮಾಣದ ನೀರು ಸಮುದ್ರ ಸೇರುತ್ತಿದೆ. ಇದರ ಸಂಪೂರ್ಣ ಹೊಣೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೊರಬೇಕು. ಜೊತೆಗೆ ಈ ಪ್ರಕರಣದಲ್ಲಿ ಟಿ.ಬಿ ಬೋರ್ಡ್ ಕಾರ್ಯದರ್ಶಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಜಲಾಶಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತವೆ. ಇತಂಹ ದೊಡ್ಡ ಮಟ್ಟದ ಘಟನೆ ನಡೆದರೂ ಸಚಿವ ಡಿ.ಕೆ.ಶಿವಕುಮಾರ್ ಅವರು ನೆಪ ಮಾತ್ರಕ್ಕೆ ಬಂದು ಹೋಗಿದ್ದಾರೆ. ಅವರಿಗೆ ಕಾವೇರಿ ಮೇಲೆ ಇರುವ ಕಳಕಳಿ ತುಂಗಭದ್ರೆಯ ಮೇಲೆ ಇಲ್ಲ ಎಂದು ಟೀಕಿಸಿದರು.
ಇನ್ನು ಮುಖ್ಯಮಂತ್ರಿಯವರು ಸಹ ಘಟನೆ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಘಟನಾ ಸ್ಥಳದಲ್ಲಿ ಬೀಡು ಬಿಟ್ಟು ಪರಿಸ್ಥಿತಿ ಅವಲೋಕನ ಮಾಡಬೇಕಿತ್ತು. ಆದರೆ ಇಲ್ಲಿಯವರೆಗೆ ಜಿಲ್ಲೆ ಕಡೆ ಮುಖ ಮಾಡಿಲ್ಲ. ಕೂಡಲೇ ಅವರನ್ನು ಉಸ್ತುವಾರಿಯಿಂದ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು.
ಮುಖಂಡರಾದ ಮುದಿಯಪ್ಪ, ವೆಂಕಟೇಶ್, ಧೀನಾ ರೂಪ ಲತಾ, ಬಿ.ಎಸ್.ಕಂಠೆಪ್ಪ, ಹುಲಿಗೆಮ್ಮ, ವೆಂಕೊಬಣ್ಣ, ರೂಪಾ ವೆಂಕಟೇಶ್, ರೇಣುಕಾ, ಸೌಭಾಗ್ಯ, ಪಾರ್ವತಿ ಇದ್ದರು.