ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ: 119 ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಆರಂಭ

Published 20 ಜೂನ್ 2024, 13:19 IST
Last Updated 20 ಜೂನ್ 2024, 13:19 IST
ಅಕ್ಷರ ಗಾತ್ರ

ಕಂಪ್ಲಿ: ಜಿಲ್ಲೆಯ 119 ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಮತ್ತು 119 ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆರಂಭಿಸಲಾಗಿದೆ’ ಎಂದು ಡಿಡಿಪಿಐ ಬಿ. ಉಮಾದೇವಿ ತಿಳಿಸಿದರು.

ಕಂಪ್ಲಿ ತಾಲ್ಲೂಕಿನಲ್ಲಿ 9 ಎಲ್.ಕೆ.ಜಿ, ಯು.ಕೆ.ಜಿ. ಶಾಲೆ ಮತ್ತು 7 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ತಾಲ್ಲೂಕಿನ ದೇವಸಮುದ್ರ, ರಾಮಸಾಗರ ಸರ್ಕಾರಿ ಪ್ರೌಢ ಶಾಲೆ ಹಾಗೂ ಕಂಪ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ಅರ್ಹತಾ ಕೈಗಾರಿಕಾ ಚೌಕಟ್ಟು (ಎನ್.ಎಸ್.ಕ್ಯೂ.ಎಫ್) ಶಿಕ್ಷಣ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಾಲ್ಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ ಜಿಲ್ಲೆಯ 50 ಶಾಲೆಗಳ ಮುಖ್ಯ ಶಿಕ್ಷಕರಿಗೆ ಬಿಇಒ ನೋಟಿಸ್ ನೀಡಿದ್ದಾರೆ. ಬಳ್ಳಾರಿ, ಮೋಕಾ ಸರ್ಕಾರಿ ಪ್ರೌಢಶಾಲೆಗಳ ಮೂವರು ಮುಖ್ಯ ಶಿಕ್ಷಕರನ್ನು ಬೇರೆಡೆ ನಿಯೋಜಿಸಲಾಗಿದೆ’ ಎಂದು ಹೇಳಿದರು.

‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರತಿ ಮಕ್ಕಳ ಅಕ್ಷರಾಭ್ಯಾಸಕ್ಕೆ ವೈಯಕ್ತಿಕ ಗಮನ ನೀಡುವಂತೆ ಸೂಚಿಸಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲಾ ಐದು ಶಾಲೆಗಳನ್ನು ದತ್ತು ನೀಡಿ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ನಿಗಾ ವಹಿಸಲಾಗಿದೆ’ ಎಂದು ತಿಳಿಸಿದರು.

‘ಖಾಸಗಿ ಶಾಲೆಗಳು ಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವ ಕುರಿತು ದೂರು ಬಂದಲ್ಲಿ ಅಂತಹ ಶಾಲೆಗಳಿಗೆ ಬಿಇಒ ಅವರಿಗೆ ನೋಟಿಸ್ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕೆಲ ಶೈಕ್ಷಣಿಕ ಪ್ರಮಾಣ ಪತ್ರಗಳಿಗೆ ಮೇಲುರುಜು ಮಾಡುವ ಅಧಿಕಾರಿಯನ್ನು ಶೀಘ್ರದಲ್ಲಿಯೇ ಕಂಪ್ಲಿಯಲ್ಲಿ ನಿಯೋಜಿಸಲಾಗುವುದು’ ಎಂದರು.

ಕುರುಗೋಡು ಬಿಇಒ ಟಿ.ಎಂ.ಸಿದ್ದಲಿಂಗಮೂರ್ತಿ, ವಿಷಯ ಪರಿವೀಕ್ಷಕ ಸತ್ಯನಾರಾಯಣ, ಸಿ.ಆರ್.ಪಿಗಳಾದ ಭೂಮೇಶ್ವರ, ಹನುಮಂತಪ್ಪ, ಸುರೇಶ ಪೂಜಾರ, ಈರೇಶ, ಮುಖ್ಯ ಶಿಕ್ಷಕರಾದ ಜಿ. ಶುಭಾ, ಎಚ್.ಪಿ. ಸೋಮಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT