ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಶುಕ್ರವಾರ ನಾಗರಪಂಚಮಿಯ ಸಡಗರ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನದ ಆವರಣದಲ್ಲಿದ್ದ ಕಲ್ಲು ನಾಗರ ಮೂರ್ತಿಗಳಿಗೆ ಮತ್ತು ಜಮೀನುಗಳಲ್ಲಿನ ಹುತ್ತಗಳಲ್ಲಿ ಹಾಲೆರೆದು ಭಕ್ತಿಭಾವ ಮೆರೆದರು.
ಶೇಂಗಾ, ಪುಟಾಣಿ, ಎಳ್ಳು ಉಂಡೆಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿದರು. ಶ್ರಾವಣ ಮಾಸದ ಮೊದಲ ಹಬ್ಬವನ್ನು ಮಹಿಳೆಯರು ತಮ್ಮ ಮನೆಗಳ ಮುಂದೆ ವಿವಿಧ ವರ್ಣಗಳ ರಂಗೋಲಿಗಳನ್ನು ಹಾಕಿ ಹಬ್ಬವನ್ನು ಸ್ವಾಗತಿಸಿದರು. ಚಿಣ್ಣರು ಜತೆ ಹಿರಿಯರು ಜೋಕಾಲಿ ಹಾಡುವುದರಲ್ಲಿ ತಲ್ಲೀನರಾಗಿದ್ದರು.
ಪಟ್ಟಣದ ಈಶ್ವರ ದೇವಸ್ಥಾನ, ಅರಳಿಹಳ್ಳಿಯ ಆಂಜನೇಯ ದೇವಸ್ಥಾನ, ಕುರದಗಡ್ಡಿಯ ಮಾರೆಮ್ಮ ದೇವಸ್ಥಾನ, ಕೆವಿಒಆರ್ ಕಾಲೊನಿಯ ಪತ್ರಿ ಬಸವೇಶ್ವರ ದೇವಸ್ಥಾನ, ಶಿಕ್ಷಕರ ಕಾಲೊನಿಯ ಗಣೇಶ ದೇವಸ್ಥಾನ, ಹಳೇ ಊರಿನ ಕಲ್ಲೇಶ್ವರ ದೇವಸ್ಥಾನದ ಆವರಣಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು.