ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಪೊಲೀಸರಿಗೆ ‘ಹೊಸ ಕಾನೂನು’ ಜ್ಞಾನ

ಜುಲೈ 1ರಿಂದ ಭಾರತೀಯ ನ್ಯಾಯ ಸಂಹಿತೆ ಜಾರಿ; ತಜ್ಞರಿಂದ ತರಬೇತಿ
Published 3 ಜೂನ್ 2024, 6:08 IST
Last Updated 3 ಜೂನ್ 2024, 6:08 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿಯವರೆಗೆ ಜಾರಿಯಲ್ಲಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅದರಡಿಯ ಕಲಂಗಳನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಎಂದು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು, ಬದಲಾದ ಸೆಕ್ಷನ್‌ಗಳಡಿ ವಿವಿಧ ಅಪರಾಧಿಕ ಪ್ರಕರಣಗಳು ಜುಲೈ 1ರಿಂದ ದಾಖಲಾಗಲಿವೆ. ಇದಕ್ಕಾಗಿ ಜಿಲ್ಲೆಯ ಪೊಲೀಸರನ್ನು ಸಜ್ಜುಗೊಳಿಸಲಾಗುತ್ತಿದ್ದು, ನಿತ್ಯ ತರಬೇತಿ ನೀಡಲಾಗುತ್ತಿದೆ. 

ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದಿದ್ದ ಅಪರಾಧ ಕಾನೂನುಗಳಿಗೆ ಬದಲಾಗಿ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ರೂಪಿಸಿದೆ.  2023ರ ಡಿಸೆಂಬರ್‌ 25ರಂದು ಅಂಗೀಕರಿಸಲಾಗಿದ್ದು, ಜುಲೈ 1ರಿಂದ ದೇಶದಾದ್ಯಂತ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ. 

ಭಾರತೀಯ ದಂಡ ಸಂಹಿತೆ ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷ್ಯ ಕಾಯ್ದೆ ಜಾಗದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ರಾಜ್ಯದಾದ್ಯಂತ ಹೊಸ ಕಾನೂನುಗಳ ಅನುಷ್ಠಾನಕ್ಕೆ ಈಗಾಗಲೇ ಸಿದ್ಧತೆಗಳು ನಡೆದಿವೆ. 

ನಿತ್ಯ ತರಬೇತಿ: ಸಿಐಡಿ ವಿಶೇಷ ಅಭಿಯೋಜಕ ಮಹೇಶ್‌ ವೈದ್ಯ  ಮತ್ತು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್‌ ಅಕಾಡೆಮಿ ಅಧಿಕಾರಿಗಳು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳೂ ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೊಸ ಕಾನೂನುಗಳ ಬಗ್ಗೆ ತರಬೇತಿ ನೀಡುವುದರಲ್ಲಿ ನಿರತರಾಗಿದ್ದಾರೆ. 

ಕಾನೂನು ಪಂಡಿತರು, ಕಾನೂನು ಕಾಲೇಜಿನ ಪ್ರಾಧ್ಯಾಪಕರನ್ನೂ ತರಬೇತಿಗೆ ಕರೆಸಲಾಗುತ್ತಿದೆ. ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಈಗಾಗಲೇ ಹಲವು ಕಾರ್ಯಗಾರಗಳು ನಡೆದಿವೆ. ನಿತ್ಯ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಆನ್‌ಲೈನ್‌ನಲ್ಲಿಯೂ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಿಲ್ಲೆಯ ಪೊಲೀಸರು ಭಾಗವಹಿಸಲು ಅವಕಾಶ ನೀಡಲಾಗಿದೆ.  ಜಿಲ್ಲಾ ಪೊಲೀಸ್‌ ಇಲಾಖೆ ಅಧಿಕಾರಿಗಳು ಮತ್ತು ತಜ್ಞರಿಂದ ಕಾರ್ಯಾಗಾರವನ್ನೂ ನಡೆಸಲಾಗಿದೆ. 

‘ಹೊಸ ಕಾನೂನುಗಳ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತನಿಖಾ ವಿಭಾಗದ 60 ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು, ಪಬ್ಲಿಕ್‌ ಪ್ರಾಸಿಕ್ಯೂಟರ್‌, ವಕೀಲರನ್ನು ಕರೆಯಿಸಿ, ಜಿಲ್ಲೆಯ ಎಲ್ಲ ಸಿಬ್ಬಂದಿಗೆ ಹೊಸ ಕಾನೂನಿನ ಬಗ್ಗೆ ತಿಳಿಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರತಿ ಠಾಣೆಗೆ ಪಠ್ಯ: ಹೊಸ ಕಾನೂನಿನ ಕುರಿತ ಪುಸ್ತಕಗಳನ್ನು ಜಿಲ್ಲೆಯ ಎಲ್ಲಾ ಠಾಣೆಗಳಿಗೂ ಪೂರೈಸಲಾಗಿದ್ದು, ಅವುಗಳನ್ನು ಓದಿ, ಮನನ ಮಾಡಿಕೊಳ್ಳಲು ಜಿಲ್ಲಾ ಪೊಲೀಸ್‌ ಇಲಾಖೆ ಸೂಚಿಸಿದೆ. ಜುಲೈ 1ರ ಹೊತ್ತಿಗೆ ಹೊಸ ಕಾನೂನಿನ ಕುರಿತು ಮಾಹಿತಿ ಪಡೆಯುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ರಂಜಿತ್‌ ಕುಮಾರ್‌ ಬಂಡಾರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ರಂಜಿತ್‌ ಕುಮಾರ್‌ ಬಂಡಾರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
‘ಗೊಂದಲಕ್ಕಿಲ್ಲ ಅವಕಾಶ’: ‘ಮೊದಲಿಗೆ ಮೈಸೂರಿನ ಪೊಲೀಸ್‌ ಅಕಾಡೆಮಿಗೆ ಆರು ಅಧಿಕಾರಿಗಳನ್ನು ಕಳುಹಿಸಿ ಅವರಿಗೆ ತರಬೇತಿ ಕೊಡಿಸಿದ್ದೆವು. ಅವರನ್ನು ‘ಮಾಸ್ಟರ್‌ ಟ್ರೈನರ್ಸ್‌’ ಎಂದು ಕರೆಯುತ್ತೇವೆ. ಅವರ ಮೂಲಕ ಈಗಾಗಲೇ ಶೇ 100ರಷ್ಟು ಅಧಿಕಾರಿಗಳಿಗೆ ಶೇ 80ರಷ್ಟು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹೊಸ ಕಾನೂನು ಜಾರಿಯಾದಾಗ ಗೊಂದಲಗಳಿಗೆ ಅವಕಾಶ ನೀಡದಂತೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣ ದಾಖಲೀಕರಣದ ವೇಳೆ ಸೆಕ್ಷನ್‌ ತಪ್ಪಾಗಿ ನಮೂದು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ ಇಡೀ ಪ್ರಕ್ರಿಯೆಯಲ್ಲಿ ತಪ್ಪು ಮಾಡಬಾರದು. ಅದಕ್ಕಾಗಿ ತರಬೇತಿ ನೀಡುತ್ತಿದ್ದೇವೆ.  
–ರಂಜಿತ್‌ ಕುಮಾರ್‌ ಬಂಡಾರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT