ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂಪಿ ಉತ್ಸವ’ ನೀರಸ; ಖಾಲಿ ಕುರ್ಚಿಗಳಿಗೆ ಭಾಷಣ

ನಾಲ್ಕೂ ವೇದಿಕೆಗಳಲ್ಲಿ ಜನರಿಲ್ಲದೆ ನಡೆದ ಕಾರ್ಯಕ್ರಮಗಳು; ಜನಕ್ಕಿಂತ ಕಲಾವಿದರೇ ಹೆಚ್ಚು
Last Updated 28 ಜನವರಿ 2023, 10:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮೂರು ದಿನಗಳ ‘ಹಂಪಿ ಉತ್ಸವ’ಕ್ಕೆ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಲಿ ಕುರ್ಚಿಗಳ ನಡುವೆ ಉತ್ಸವ ಉದ್ಘಾಟಿಸಿದರು. ಅತಿ ಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಹಾಕಿದ್ದ ಬಹುತೇಕ ಕುರ್ಚಿಗಳೆಲ್ಲ ಖಾಲಿ ಇದ್ದವು.

ಉಳಿದ ಮೂರು ವೇದಿಕೆ ಬಳಿಯೂ ಜನರಿರಲಿಲ್ಲ. ಎಲ್ಲ ವೇದಿಕೆಗಳ ಬಳಿ ಜನರಿಗಿಂತ ಕಲಾವಿದರು, ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಫಲಪುಷ್ಪ ಪ್ರದರ್ಶನ, ಜಲಕ್ರೀಡೆ, ಸಾಹಸ ಕ್ರೀಡೆ, ಅಂಗವಿಕಲರ ಕ್ರೀಡಾಕೂಟ ಸೇರಿದಂತೆ ಇತರೆಡೆಯೂ ಪ್ರೇಕ್ಷಕರು ಸುಳಿಯಲಿಲ್ಲ. ಎಲ್ಲ ಕಾರ್ಯಕ್ರಮ, ಸ್ಪರ್ಧೆಗಳು– ಕಲಾವಿದರು, ಕ್ರೀಡಾಳುಗಳಿಗೆ ಸೀಮಿತವಾಗಿತ್ತು.

ಹಂಪಿಯಲ್ಲಿ ಕಾಣದ ಸಂಭ್ರಮ: ಬೆಳಿಗ್ಗೆಯಿಂದಲೂ ಹಂಪಿಯಲ್ಲಿ ಸಂಭ್ರಮ ಕಂಡು ಬರಲಿಲ್ಲ. ಹೊಸಪೇಟೆಯಿಂದ ಹಂಪಿಗೆ ಸಂಪರ್ಕಿಸುವ ರಸ್ತೆ, ಕಡ್ಡಿರಾಂಪುರ ಕ್ರಾಸ್‌ನಿಂದ ಹಂಪಿಯೊಳಗೆ ಬರುವ ರಸ್ತೆಗಳೆಲ್ಲ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮಾರ್ಗದುದ್ದಕ್ಕೂ ಪೊಲೀಸರು, ಅಧಿಕಾರಿಗಳು ಹಾಗೂ ಕಲಾವಿದರ ವಾಹನಗಳಷ್ಟೇ ಓಡಾಡುತ್ತಿದ್ದವು. ಕಡ್ಡಿರಾಂಪುರ ಕ್ರಾಸ್‌ನಿಂದ ಹಂಪಿಯೊಳಗೆ ಬರಲು ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಡ್ಡಿರಾಂಪುರ ಕಮಾನಿನಿಂದ ಒಳಭಾಗದಿಂದ ಬಸ್‌ ವ್ಯವಸ್ಥೆ ಇದ್ದದ್ದರಿಂದ ಜನರಿಗೆ ಬಸ್ಸುಗಳಿರುವುದು ಗೊತ್ತಾಗಲೇ ಇಲ್ಲ.

‘ಹಂಪಿ, ವಿಶ್ವ ಪಾರಂಪರಿಕ ತಾಣ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಂಪಿ ಉತ್ಸವದ ಮೂಲಕ ಅದರ ಹಿರಿಮೆಯನ್ನು ಇನ್ನಷ್ಟು ಪ್ರಚಾರಗೊಳಿಸುವುದು ಇದರ ಮುಖ್ಯ ಉದ್ದೇಶ. ಆದರೆ, ಈ ಸಲದ ಉತ್ಸವ ಜನರ ಉತ್ಸವ ಆಗಲಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ದೂರದೃಷ್ಟಿಯ ಕೊರತೆ ಇರುವುದು ಇದರಿಂದ ಗೊತ್ತಾಗುತ್ತದೆ. ಕಾಟಾಚಾರಕ್ಕೆ ಈ ರೀತಿ ಉತ್ಸವ ಸಂಘಟಿಸಬೇಕಿಲ್ಲ. ಇದರಿಂದ ಹಂಪಿ ಹೆಸರಿಗೆ ಮಸಿ ಬಳಿದಂತಾಗುತ್ತದೆ’ ಎಂದು ಹಿರಿಯ ನಾಗರಿಕರಾದ ಬಸವರಾಜ, ಹುಲುಗಪ್ಪ ಅಭಿಪ್ರಾಯಪಟ್ಟರು.

ಜನರೇಕೇ ಬರಲಿಲ್ಲ?:

ಈ ಹಿಂದೆ ಹಂಪಿ ಉತ್ಸವಕ್ಕೆ ತಿಂಗಳಿಗಿಂತ ಮುಂಚೆಯೇ ಸಿದ್ಧತೆ ಆರಂಭಿಸಲಾಗುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಹಂಪಿಯಲ್ಲೇ ನಾಲ್ಕೈದು ಸಭೆಗಳನ್ನು ನಡೆಸುತ್ತಿದ್ದರು. ಅದರೊಟ್ಟಿಗೆ ಸಿದ್ಧತೆ, ಪ್ರಚಾರ ಕಾರ್ಯವೂ ಆರಂಭಿಸಲಾಗುತ್ತಿತ್ತು. ಪ್ರತಿಯೊಂದು ತಾಲ್ಲೂಕುಗಳಿಗೆ ಸಚಿವರು ಭೇಟಿ ಕೊಟ್ಟು ಜನರನ್ನು ಆಹ್ವಾನಿಸುತ್ತಿದ್ದರು. ಆದರೆ, ಈ ಸಲ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರು ಜಿಲ್ಲೆಯತ್ತ ಸುಳಿಯಲೇ ಇಲ್ಲ. ಉತ್ಸವಕ್ಕೆ ಎರಡು ದಿನಗಳಿರುವಾಗ ಬಂದರು. ಹಂಪಿ, ಹೊಸಪೇಟೆ ಬಿಟ್ಟರೆ ಬೇರೆಲ್ಲೂ ಹೋಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಡಳಿತದಿಂದ ವ್ಯಾಪಕ ಪ್ರಚಾರ ನಡೆಯಲಿಲ್ಲ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹೆಚ್ಚಾಗಿ ತೊಡಗಿಸಿಕೊಳ್ಳಲಿಲ್ಲ.

ಇಷ್ಟೇ ಇಲ್ಲ, ಈ ಹಿಂದೆ ಉತ್ಸವ ನಡೆದಾಗಲೆಲ್ಲಾ ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಹೋಬಳಿ, ತಾಲ್ಲೂಕು ಕೇಂದ್ರಗಳಿಂದ ಜನ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಸಲ ಆ ವ್ಯವಸ್ಥೆ ಇರಲಿಲ್ಲ. ಇದು ಕೂಡ ಜನ ಬರದಿರಲು ಮುಖ್ಯ ಕಾರಣ. ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್‌ ಸಿಂಗ್‌ ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ, ಸಮನ್ವಯದ ಕೊರತೆಯೇ ಉತ್ಸವದ ವೈಫಲ್ಯಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಒಂದುವೇಳೆ ಆನಂದ್‌ ಸಿಂಗ್‌ ಅವರಿಗೆ ಉತ್ಸವದ ಹೊಣೆ ವಹಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬಂದವು.

ವೇದಿಕೆಯಲ್ಲಿ ಅಶಿಸ್ತು:

ಹಂಪಿ ಉತ್ಸವದ ಪ್ರಧಾನ ವೇದಿಕೆಯ ಉದ್ಘಾಟನಾ ಸಮಾರಂಭದ ವೇಳೆ ಅಶಿಸ್ತು ಎದ್ದು ಕಂಡು ಬಂತು. ರಾಜಕೀಯ ನಾಯಕರ ಬೆಂಬಲಿಗರು, ಭದ್ರತಾ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಲವರು ಬೇಕಾಬಿಟ್ಟಿ ವೇದಿಕೆಯಲೆಲ್ಲಾ ನಿಂತಿದ್ದರು. ಉದ್ಘಾಟನಾ ಸಮಾರಂಭದ ಕೊನೆಯ ಗಳಿಗೆವರೆಗೂ ಸಿದ್ಧತಾ ಕೆಲಸ ನಡೆಯುತ್ತಿತ್ತು. ಭುವನೇಶ್ವರಿ ದೇವಿ ಉತ್ಸವ ಮೂರ್ತಿ ಕೂರಿಸಿ, ಅದರಡಿ ಕಸ ಗುಡಿಸಲಾಗುತ್ತಿತ್ತು. ಇದೆಲ್ಲ ಸಿ.ಎಂ. ಸಮ್ಮುಖದಲ್ಲೇ ನಡೆದು ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT