ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಪ್ರೋತ್ಸಾಹಧನ ಇಲ್ಲದಿದ್ದರೂ ಹಾಲಿನ ಉತ್ಪಾದನೆಯಲ್ಲಿ ಭಾರಿ ಹೆಚ್ಚಳ

Published 28 ಮೇ 2024, 5:22 IST
Last Updated 28 ಮೇ 2024, 5:22 IST
ಅಕ್ಷರ ಗಾತ್ರ

ಬಳ್ಳಾರಿ: ಸರ್ಕಾರ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡದಿದ್ದರೂ, ಬರ ಬಿದ್ದು ಜನ–ಜಾನುವಾರುಗಳು ಪರದಾಟ ಅನುಭವಿಸಿದ್ದರೂ, ‘ರಾಯಚೂರು, ಬಳ್ಳಾರಿ, ಕೊಪ್ಪಳ ಸಹಕಾರ ಹಾಲು ಉತ್ಪಾದಕ ಒಕ್ಕೂಟ (ರಾಬಕೊ)’ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿಂದ ಹಾಲಿನ ಉತ್ಪಾದನೆಯಲ್ಲಿ ಭಾರಿ ಹೆಚ್ಚಳವಾಗಿದೆ. 

ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಜನವರಿಯಿಂದ ಏಪ್ರಿಲ್‌ ವರೆಗೆ ಪ್ರತಿ ದಿನ 15ರಿಂದ 20 ಸಾವಿರ ಕೆ.ಜಿಗಳಷ್ಟು ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿರುವುದು ರಾಬಕೊ ಅಂಕಿ ಅಂಶಗಳಿಂದ ಗೊತ್ತಾಗಿದೆ. 

ರಾಬಕೊ ವ್ಯಾಪ್ತಿಯಲ್ಲಿ 2023ರ ಜನವರಿಯಲ್ಲಿ ಪ್ರತಿ ದಿನ ಸರಾಸರಿ 1,58,089 ಕೆ.ಜಿ ಹಾಲು ಉತ್ಪಾದನೆಯಾಗಿತ್ತು. ಈ ವರ್ಷ ಅದು 1,75,530ಕ್ಕೆ ಏರಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ ನಿತ್ಯ ಸರಾಸರಿ 1,55,039 ಕೆ.ಜಿ ಉತ್ಪಾದನೆಯಾಗಿದ್ದರೆ ಈ ವರ್ಷ 1,72,855 ಕೆ.ಜಿ ಉತ್ಪಾದನೆಯಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ 1,58,495 ಕೆ.ಜಿ, ಈ ವರ್ಷ 1,75,768 ಕೆ.ಜಿ, ಏಪ್ರಿಲ್‌ನಲ್ಲಿ ಈ ವರ್ಷ 1,78,002 ಕೆ.ಜಿ ಹಾಲು ಉತ್ಪಾದನೆಯಾಗಿದ್ದು, ರಾಬಕೊ ಅಧಿಕಾರಿಗಳಿಗೆ ಆಶ್ಚರ್ಯವುಂಟು ಮಾಡಿದೆ. 

‘ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕುಸಿಯುತ್ತದೆ. ಕಳೆದ ವರ್ಷವೂ ಹಾಲು ಉತ್ಪಾದನೆ ಕಡಿಮೆಯಾಗಿತ್ತು. ಆದರೆ, ಈ ಬಾರಿ ಬೇಸಿಗೆಯಲ್ಲೇ ಹಾಲು ಉತ್ಪಾದನೆ ಹೆಚ್ಚಾಗಿದೆ. ಇನ್ನು ಮಳೆಗಾಲ ಆರಂಭವಾಗಲಿದ್ದು, ಉತ್ಪಾದನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ‘ ಎಂದು ರಾಬಕೊ ವ್ಯವಸ್ಥಾಪಕ ನಿರ್ದೇಶಕ ತಿರುಪತಪ್ಪ ಟಿ. ಹೇಳಿದ್ದಾರೆ.

‘ಜನವರಿಗೂ ಹಿಂದೆ ಪೂರೈಕೆಗೆ ತಕ್ಕಂತೆ ಹಾಲು ಉತ್ಪಾದನೆಯಾಗುತ್ತಿತ್ತು. ಕೆಲ ಸಂದರ್ಭಗಳಲ್ಲಿ ಕೊರತೆ ಎದುರಾದಾಗ ಮಂಡ್ಯ, ಶಿವಮೊಗ್ಗ ಮತ್ತು ಬೆಂಗಳೂರಿನ ಡೇರಿಗಳಿಂದ ಹಾಲು ತರಿಸಿಕೊಳ್ಳಲಾಗುತ್ತಿತ್ತು. ಸದ್ಯ ಪೂರೈಕೆಗೆಗಿಂತಲೂ ಅಧಿಕ ಹಾಲು ಉತ್ಪಾದನೆಯಾಗುತ್ತಿದ್ದು, ಹೆಚ್ಚುವರಿ ಹಾಲನ್ನು ಬಳಸಿಕೊಂಡು ಹಾಲಿನ ಪುಡಿ ಮಾಡಲಾಗುತ್ತಿದೆ. ಕೊಪ್ಪಳದ ಬೂದುಗುಂಪ ಬಳಿ ಇರುವ ಹಾಲಿನ ಪುಡಿ ತಯಾರಿಕಾ ಘಟಕದಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. 20 ಸಾವಿರ ಲೀಟರ್‌ ಹಾಲಿನಿಂದ 1,675 ಕೆ.ಜಿಗಳಷ್ಟು ಹಾಲಿನ ಪುಡಿ ತಯಾರಿಸಬಹುದು. ಗ್ರಾಹರಿಗೆ ಪೂರೈಸಲಾಗುವ ಹಾಲಿನ ಎಸ್‌ಎನ್‌ಎಫ್‌ (ಜಿಡ್ಡಿನಂಶವಲ್ಲದ ಘನವಸ್ತು) ಸಮತೋಲನ ಕಾಯ್ದುಕೊಳ್ಳಲು ಮತ್ತು ಇತರ ಹಾಲಿನ ಉತ್ಪನ್ನಗಳ ತಯಾರಿಕೆಗೆ ಹಾಲಿನ ಪುಡಿಯನ್ನು ಬಳಸಲಾಗುತ್ತದೆ’  ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಮುಂಗಾರಿನಲ್ಲಿ ಮಳೆಯಾಗಿ ಹಸಿರು ಮೇವು ಸಿಕ್ಕ ಕೂಡಲೇ ಹಾಲಿನ ಉತ್ಪಾದನೆ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ. ಆಗ ತುಪ್ಪ ಮತ್ತು ಫ್ಲೆಕ್ಸಿ ಪ್ಯಾಕ್‌ (ಮೂರು ತಿಂಗಳು ಕಾಪಿಡಬಹುದಾದ ಹಾಲಿನ ಪೊಟ್ಟಣ) ತಯಾರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಾಬಕೊ ವ್ಯಾಪ್ತಿಯಲ್ಲಿ ನಿತ್ಯ 1,46,000 ಲೀ. ಹಾಲು, 15,000 ಕೆ.ಜಿ ಮೊಸರು ಮಾರಾಟವಾಗುತ್ತದೆ.  ಐಸ್‌ಕ್ರೀಂ ತಯಾರಿಸಲು 3 ಸಾವಿರ ಕೆ.ಜಿ ಹಾಲು ಬೇಕಾಗುತ್ತದೆ.   

ಮಾರುಕಟ್ಟೆ ಕುಸಿತ?

ಒಂದೆಡೆ ಉತ್ಪಾದನೆ ಹೆಚ್ಚಿದ್ದರೂ, ಮಾರುಕಟ್ಟೆ ಕುಸಿತವಾಗಿರುವುದು ಈ ಎರಡೂ ವರ್ಷಗಳ ತುಲನೆಯಲ್ಲಿ ಕಂಡು ಬಂದಿದೆ. ಕಳೆದ ವರ್ಷ ಜನವರಿಯಲ್ಲಿ ನಿತ್ಯ ಸರಾಸರಿ 1,52,082 ಲೀಟರ್‌ಗಷ್ಟು ಹಾಲು ಮಾರಾಟವಾಗಿದ್ದರೆ, ಈ ವರ್ಷ ಅದು 1,50,018ಕ್ಕೆ ಇಳಿದಿದೆ. ಇನ್ನು 2023ರ ಫೆಬ್ರುವರಿಯಲ್ಲಿ ಸರಾಸರಿ 1,55,039 ಲೀಟರ್‌ ಮಾರಾಟವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ 1,53,639 ಆಗಿದೆ. ಮಾರ್ಚ್‌ನಲ್ಲಿ ಹೆಚ್ಚು ಕಡಿಮೆ ನಿತ್ಯ ಸರಾಸರಿ 8 ಸಾವಿರ ಲೀಟರ್‌ನಷ್ಟು ಮಾರುಕಟ್ಟೆ ಕುಸಿದಿದೆ. ಏಪ್ರಿಲ್‌ನಲ್ಲಿ ದಿನವಹಿ 1,58,472 ಲೀಟರ್‌  ಹಾಲು ಮಾರಾಟವಾಗಿರುದು ಅಂಕಿ ಅಂಶಗಳಿಂದ ಗೊತ್ತಾಗಿದೆ. 

ಬಳ್ಳಾರಿಯಲ್ಲಿರುವ ರಾಬಕೊ ಕಚೇರಿ  
ಬಳ್ಳಾರಿಯಲ್ಲಿರುವ ರಾಬಕೊ ಕಚೇರಿ  
ಹಾಲನ್ನು ಪ್ಯಾಕೆಟ್‌ ಮಾಡುವ ಘಟವ 
ಹಾಲನ್ನು ಪ್ಯಾಕೆಟ್‌ ಮಾಡುವ ಘಟವ 
ಬರದ ನಡುವೆಯೂ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಹೆಚ್ಚುವರಿ ಹಾಲನ್ನು ಬಳಸಿ ಹಾಲಿನ ಪುಡಿ ಮಾಡಲಾಗುತ್ತಿದೆ. ಹಾಲಿನ ಉತ್ಪಾದನೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ನಂತರ ಉಪ ಉತ್ಪನ್ನಗಳನ್ನು ತಯಾರಿಸಲು ಹೆಚ್ಚುವರಿ ಹಾಲು ಬಳಸಲಾಗುವುದು 
ತಿರುಪತಪ್ಪ ಟಿ. ವ್ಯವಸ್ಥಾಪಕ ನಿರ್ದೇಶಕ ರಾಬಕೊ
ಪ್ರೋತ್ಸಾಹಿಸದ ಸರ್ಕಾರ! 
ರಾಬಕೊ ವ್ಯಾಪ್ತಿಗೆ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳು ಸೇರುತ್ತವೆ. ಈ ನಾಲ್ಕೂ ಜಿಲ್ಲೆಗಳಲ್ಲಿ ಒಟ್ಟಾರೆ ಸರಿ ಸುಮಾರು 30 ಸಾವಿರ ರೈತರು ಹಾಲು ಪೂರೈಕೆ ಮಾಡುತ್ತಾರೆ. ಹಾಲು ಪೂರೈಕೆದಾರರಿಗೆ 2023ರ ಸೆಪ್ಟೆಂಬರ್‌ನಿಂದ ಈ ವರೆಗೆ ₹5ಗಳ ಪ್ರೋತ್ಸಾಹಧನವನ್ನು ಸರ್ಕಾರ ಕೊಟ್ಟಿಲ್ಲ. ಈ ಮಧ್ಯೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಲು ಉತ್ಪಾದಕರಿಗೆ ಒಂದೆರಡು ತಿಂಗಳ ಪ್ರೋತ್ಸಾಹಧನ ಸಿಕ್ಕಿರುವುದು ಬಿಟ್ಟರೆ ಬಹುತೇಕರಿಗೆ 8 ತಿಂಗಳ ಪ್ರೋತ್ಸಾಹಧನ ಪಾವತಿ ಬಾಕಿ ಇದೆ. ಒಟ್ಟು ₹219226072 ಯಷ್ಟು ಬಾಕಿ ಪಾವತಿ ಮಾಡಬೇಕಿದೆ ಎಂದು ಅಧಿಕೃತ ದಾಖಲೆಗಳಿಂದ ಗೊತ್ತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT