ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗ ಮೇಳಕ್ಕೆ ನೋಂದಣಿ: ಬಳ್ಳಾರಿಗೆ 3ನೇ ಸ್ಥಾನ

ಹರಿಶಂಕರ್‌ ಆರ್‌.
Published 24 ಫೆಬ್ರುವರಿ 2024, 5:16 IST
Last Updated 24 ಫೆಬ್ರುವರಿ 2024, 5:16 IST
ಅಕ್ಷರ ಗಾತ್ರ

ಬಳ್ಳಾರಿ: ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸಲು ‘ಯುವ ಸಮೃದ್ಧಿ ಮೇಳ’ ಹೆಸರಲ್ಲಿ ರಾಜ್ಯ ಸರ್ಕಾರವು ಫೆಬ್ರುವರಿ 26 ಮತ್ತು 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳ 54,673 ಮಂದಿ ಈವರೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 

ನೋಂದಣಿಯಲ್ಲಿ ಬೆಂಗಳೂರು ನಗರ (7599) ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಧಾರಾವಾಡ ಜಿಲ್ಲೆ (4908) ಮತ್ತು ಮೂರನೇ ಸ್ಥಾನದಲ್ಲಿ ಬಳ್ಳಾರಿ ಜಿಲ್ಲೆ (4611) ಇದೆ. ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದ್ದು, 600 ಮಂದಿ ಮಾತ್ರ ಹೆಸರು ಕೊಟ್ಟಿದ್ದಾರೆ.

ಉದ್ಯೋಗಾಕಾಂಕ್ಷಿಗಳು ಆನ್‌ಲೈನ್‌ನಲ್ಲಿ ಮೇಳ ಆರಂಭಗೊಳ್ಳುವವರೆಗೆ ನೋಂದಣಿ ಮಾಡಿಕೊಳ್ಳಬಹುದು. 10ನೇ ತರಗತಿಗಿಂತ ಕಡಿಮೆ ವಿದ್ಯಾರ್ಹತೆಯುಳ್ಳವರು ಅಲ್ಲದೇ ಎಲ್ಲಾ ವಿದ್ಯಾರ್ಹತೆಯುಳ್ಳವರು ಹೆಸರು ನೋಂದಾಯಿಸಬಹುದು.

‘ಯುವ ನಿಧಿ’ಸಂದೇಶ: ‘ಯುವನಿಧಿ’ ಯೋಜನೆಯಡಿ ಹೆಸರನ್ನು ನೋಂದಾಯಿಸಿಕೊಂಡಿರುವ ಲಕ್ಷಕ್ಕೂ ಹೆಚ್ಚು ನಿರುದ್ಯೋಗಿ ಯುವಜನರಿಗೂ ಮೇಳದಲ್ಲಿ ಭಾಗವಹಿಸಲು ಈಗಾಗಲೇ ಸಂದೇಶ ರವಾನೆಯಾಗಿದೆ.

ಕಾರಣ ನೀಡಬೇಕು

ಮೇಳದಲ್ಲಿ ಉದ್ಯೋಗಾವಕಾಶ ಒದಗಿಸುವ ಅಥವಾ ಅಭ್ಯರ್ಥಿಗಳನ್ನು ಸಂದರ್ಶಿಸುವ ಸಂಸ್ಥೆಗಳು ನಿಖರ ಅಂಕಿ ಅಂಶ ನೀಡಬೇಕೆಂದು ಸೂಚಿಸಲಾಗಿದೆ. ಎಷ್ಟು ಜನರನ್ನು ಸಂದರ್ಶನ ಮಾಡಿವೆ? ಎಷ್ಟು ಮಂದಿಗೆ ಉದ್ಯೋಗಾವಕಾಶ ಲಭಿಸಿದೆ? ಯಾವ ಅಭ್ಯರ್ಥಿಯನ್ನು ಯಾವ ಕಾರಣಕ್ಕೆ ನಿರಾಕರಿಸಿವೆ ಎಂಬ ಮಾಹಿತಿ ಕೌಶಲ ಅಭಿವೃದ್ಧಿ ನಿಗಮಕ್ಕೆ ನೀಡುವಂತೆ ಸೂಚಿಸಲಾಗಿದೆ. ಮಾಹಿತಿಯನ್ನು ನಿಗಮದ ‘ಸ್ಕಿಲ್‌ ಕನೆಕ್ಟ್‌’ ಪೋರ್ಟಲ್‌ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. 

‘ಉದ್ಯೋಗ ಸಿಗದ ಅಭ್ಯರ್ಥಿಗಳಲ್ಲಿ ಕೌಶಲ ವೃದ್ಧಿಸುವುದು ಮಾಹಿತಿ ಸಂಗ್ರಹಣೆಯ ಉದ್ದೇಶ. ಒಮ್ಮೆ ಹೆಸರು ನೋಂದಾಯಿಸಿದ ಅಭ್ಯರ್ಥಿಗೆ ಮುಂದಿನ ಉದ್ಯೋಗ ಮೇಳಗಳು, ಕಂಪನಿಯಲ್ಲಿನ ಉದ್ಯೋಗಗಳ ಬಗ್ಗೆ ಮೊಬೈಲ್‌ ಮೂಲಕ ಸಂದೇಶ ಹೋಗುತ್ತದೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.‌‌ 

ಮೇಳದಲ್ಲಿ 577 ಕಂಪನಿಗಳು ಭಾಗಿ

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ  577 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಒಂದು ಲಕ್ಷದಷ್ಟು ಹುದ್ದೆಗಳು ಲಭ್ಯವಿವೆ.ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತದೆ. ಆಯ್ಕೆಯಾದವರಿಗೆ ಕನಿಷ್ಠ ವೇತನ ಕಾನೂನಿನಡಿ ವೇತನ ಪಾವತಿಸಬೇಕು ಎಂದು ಕಂಪನಿಗಳಿಗೆ ಸರ್ಕಾರ ತಾಕೀತು ಮಾಡಿದೆ.

‘ಒಂದು ವೇಳೆ ಅಪ್ರೆಂಟಿಷಿಪ್‌ ನೀಡಿದರೆ ಕಂಪನಿಯ ನಿಯಮಾವಳಿಗೆ ಅನುಸಾರ ವೇತನ ನೀಡಬೇಕು. ಶೇ 90ರಷ್ಟು  ಸಾಮಾನ್ಯ (ರೆಗ್ಯುಲರ್‌) ಉದ್ಯೋಗಕ್ಕೇ ಆದ್ಯತೆ ಸಿಗಬೇಕು. ಶೇ 10ರಷ್ಟು ಮಾತ್ರ ಅಪ್ರೆಂಟಿಷಿಪ್‌ಗೆ ಅವಕಾಶ ಇರಬೇಕೆಂದು ಸೂಚಿಸಲಾಗಿದೆ’ ಎಂದು ಅಧಿಕಾರಿಗಳು  ತಿಳಿಸಿದರು.

ನೋಂದಣಿಗೆ ಸಹಾಯವಾಣಿ ಸಂಖ್ಯೆ: 18005999918,

ಪೋರ್ಟಲ್: https://skillconnect.kaushalkar.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT