ಹಗರಿಬೊಮ್ಮನಹಳ್ಳಿ: ಸರ್ಕಾರಿ ಭೂಮಿ ಮತ್ತು ಗಾಯಾಳು ಜಮೀನುಗಳನ್ನು ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪ್ರಾಂತರೈತ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಬಿ.ಮಾಳಮ್ಮ ಮಾತನಾಡಿ, ತಾಲ್ಲೂಕಿನ ಹಲಗಾಪುರ ಗ್ರಾಮದಲ್ಲಿ ಪಹಣಿ ಪತ್ರದಲ್ಲಿ ಸರ್ಕಾರಿ ಗಯಾಳು ಎಂದು ನಮೂದಾಗಿದೆ, ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದಕ್ಕೆ ಅರ್ಹ ಇದ್ದರೂ ಡಯಾಗ್ಲಾಟ್‍ನಲ್ಲಿ ಕೊಂಡ ಎಂದು ನಮೂದಾಗಿದೆ ಎಂದು ಫಾರಂ ನಂ.57 ತಿರಸ್ಕರಿಸಲಾಗಿದೆ. ಇದು ಅಕ್ರಮ ಮತ್ತು ಅನ್ಯಾಯದಿಂದ ಕೂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕೇವಲ ಡಯಾಗ್ಲಾಟ್ ದಾಖಲೆ ನೋಡಿ ತಿರಸ್ಕರಿಸುವುದು ಸರಿಯಾದ ಕ್ರಮ ಅಲ್ಲ, ಇಂತಹ ಜಮೀನುಗಳನ್ನು ಸಂಬಂಧಿಸಿದ ಇಲಾಖೆಯ ಮೂಲಕ ಅಳತೆ ಮಾಡಿಸಬೇಕಿತ್ತು. ವರದಿ ಆಧರಿಸಿ ತಿರಸ್ಕರಿಸಬೇಕೆ ವಿನಾ ಯಾವುದೇ ನೋಟಿಸ್ ನೀಡದೆ ಸಕಾರಣ ಇಲ್ಲದೆ ರೈತರಿಗೆ ಅನ್ಯಾಯ ಎಸಗಲಾಗಿದೆ ಎಂದರು.
ಕೂಡಲೇ ಅಕ್ರಮಸಕ್ರಮ ಸಮಿತಿ ರಚನೆ ಮಾಡಬೇಕು. ಈ ಅರ್ಜಿಗಳನ್ನು ಪುರಸ್ಕರಿಸಿ ರೈತರಿಗೆ ಪಟ್ಟಾ ನೀಡುವಂತೆ ಆಗ್ರಹಿಸಿದರು.
ರೈತರಾದ ಎಚ್.ಹನುಮೇಶ್, ಎಚ್.ಉಡುಚಮ್ಮ, ಪಿ.ದುರುಗೇಶ್, ಎಚ್.ರಾಮಪ್ಪ, ಮರಿಯಪ್ಪ, ಅನ್ನಾಳೆಮ್ಮ, ಲಕ್ಷ್ಮವ್ವ ಇದ್ದರು. ತಹಶೀಲ್ದಾರ್ ಆರ್.ಕವಿತ ಅವರಿಗೆ ಮನವಿ ಸಲ್ಲಿಸಿದರು.