ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ: ಸಿರಿಧಾನ್ಯಗಳ ‘ಸಂಪೂರ್ಣ’ ಆಹಾರ

ರೈತ ಮಹಿಳೆಯ ಹೊಸ ಉದ್ಯಮ: ರಾಜ್ಯದ ವಿವಿಧೆಡೆ ಪೂರೈಕೆ
Published 4 ಜೂನ್ 2023, 0:37 IST
Last Updated 4 ಜೂನ್ 2023, 0:37 IST
ಅಕ್ಷರ ಗಾತ್ರ

ಡಿ.ಮಾರೆಪ್ಪ ನಾಯಕ

ಸಿರುಗುಪ್ಪ: ತಾಲ್ಲೂಕಿನ ಕರ್ಚಿಗನೂರು ಗ್ರಾಮದಿಂದ ರಾಜ್ಯದ ರಾಜಧಾನಿವರೆಗೆ ‘ಸಂಪೂರ್ಣ’ ಎಂಬ ಬ್ರ್ಯಾಂಡ್‌ನ ಸಿರಿಧಾನ್ಯಗಳ ಮೌಲ್ಯವರ್ಧಿತ ಆಹಾರ ಸರಬರಾಜು ಮಾಡುತ್ತಿದ್ದಾರೆ ರೈತ ಮಹಿಳೆ ಸಿ.ಚೆನ್ನಮ್ಮ ಶಿವಕುಮಾರ್ ಗೌಡ ದಂಪತಿ.

ತಾಲ್ಲೂಕಿನ ಪ್ರಗತಿಪರ ರೈತರಿಂದ ಅರ್ಕ, ಊದಲು, ಸಾಮೆ, ನವಣೆ, ಬರಗು, ರಾಗಿ, ಸಜ್ಜೆ, ಕೊರಲೆ, ಜೋಳ, ಸೋಯಾಬೀನ್, ಹೆಸರು, ಮೆಟಿಗೆ, ಶೇಂಗಾ, ಉಳ್ಳೆ, ಹಲಸಂದಿ, ಉದ್ದು, ತೊಗರಿ, ಕಡಲೆ ಕಾಳು, ಬಾರ್ಲಿ ಅಕ್ಕಿ, ಸಬ್ಬಕ್ಕಿ, ಗೋಡಂಬಿ, ಬಾದಾಮಿ, ಪಿಸ್ತಾ, ರಾಜಮ, ಲವಂಗ, ಮೆಣಸು, ಏಲಕ್ಕಿ, ಜೀರಿಗೆ, ಅಜ್ವಾನ ಸೇರಿದಂತೆ ವಿವಿಧ ಧಾನ್ಯಗಳನ್ನು ಖರೀದಿಸುತ್ತಾರೆ. ಅವುಗಳನ್ನು ಸ್ವಚ್ಛಗೊಳ್ಳಿಸಿ ತೊಳೆದು ನೆರಳಿನಲ್ಲಿ ಒಣಗಿಸಿ, ಮಣ್ಣಿನ ಮಡಿಕೆಯಲ್ಲಿ ಹುರಿದು, ಗಿರಿಣಿಯಲ್ಲಿ ಪುಡಿ ಮಾಡಿ ‘ಸಂಪೂರ್ಣ’ ಬ್ರ್ಯಾಂಡ್ ಅಡಿ ಅರ್ಧ ಕೆ.ಜಿ. ಪೊಟ್ಟಣ ತಯಾರಿಸಿ, ಮಾರಾಟ ಮಾಡಿ ಸ್ವ ಉದ್ಯೋಗದೊಂದಿಗೆ ಆರ್ಥಿಕ ಸದೃಢರಾಗಿ ಇತರರಿಗೂ ಸ್ಫೂರ್ತಿಯಾಗಿದ್ದಾರೆ.

ರಾಯಚೂರು, ಬಳ್ಳಾರಿ ಕೆವಿಕೆ, ವೈದ್ಯಾಧಿಕಾರಿ, ಅನುಭವಸ್ಥರಿಂದ ಅವರು ತರಬೇತಿ ಮತ್ತು ಮಾಹಿತಿ ಪಡೆದುಕೊಂಡಿದ್ದಾರೆ.

ಮಾರಾಟ: ಸಿರುಗುಪ್ಪ, ಬಳ್ಳಾರಿ, ರಾಯಚೂರು, ಕಲಬುರಗಿ, ಬೆಂಗಳೂರು, ಚಿಂಚೋಳ್ಳಿ, ಸಿಂಧನೂರಿನ ಔಷಧ ಅಂಗಡಿ, ಸೂಪರ್ ಮಾರುಕಟ್ಟೆಗಳಿಂದ ಇವರ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ.

‘ಸಿರಿಧಾನ್ಯಗಳ ಮೌಲ್ಯವರ್ಧಿತ ಆಹಾರಗಳು ಬಹು ಬೇಡಿಕೆಯ ಆರೋಗ್ಯಕಾರಕ ಸಮೃದ್ಧ ಉತ್ಪನ್ನಗಳಾಗಿವೆ. 2019ಲ್ಲಿ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯ ಮಕ್ಕಳು ಸೇವಿಸಲು ವಿವಿಧ ಆಹಾರ ಧಾನ್ಯಗಳ ಗಂಜಿ ಮಾಡಿ ನೀಡುತ್ತಿದೆವು. ಮನೆಯಲ್ಲಿ ಆರೋಗ್ಯ ಸಮೃದ್ಧಿ ಕಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರೇರೇಪಣೆ ಆಯಿತು’ ಎನ್ನುತ್ತಾರೆ ಚೆನ್ನಮ್ಮ ಅವರು.

ಬಳ್ಳಾರಿ ಜಿಲ್ಲಾ ಉತ್ಸವ, ಕಲಬುರಗಿ ಜಿಲ್ಲೆಯಲ್ಲಿ ನಡೆದ ಅಮೃತ ಮಹೋತ್ಸವ, ಬೀದರ್ ಉತ್ಸವ, ರಾಯಚೂರು ಜಿಲ್ಲೆಯ ಕೃಷಿ ಮೇಳ, ಬೆಂಗಳೂರಿನಲ್ಲಿ ನಡೆದ ಕೆ.ವಿ.ಕೆ ಕೃಷಿ ಮೇಳದಲ್ಲಿ ಹಾಗೂ ರಾವಿಹಾಳ, ನಡವಿ ಗ್ರಾಮಗಳಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ, ಸಂಜೀವಿನಿ ಸನ್ನಿಧಿ ಒಕ್ಕೂಟದಿಂದ ನಡೆಯುವ ಮಾಸಿಕ ಸಂತೆಯಲ್ಲಿಯೂ ಅವರು ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ನೇರವಾಗಿ ಮನೆಗೇ ಬಂದು ಖರೀದಿಸುತ್ತಾರೆ.

2022ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿ ಧಾನ್ಯಗಳ ನಳಪಾಕ ಪ್ರದರ್ಶನ ಮತ್ತು ತಯಾರಿಕೆ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, 2022ರಲ್ಲಿ ತಾಲ್ಲೂಕಿನ ಪ್ರಗತಿಪರ ಮೌಲ್ಯವರ್ಧಿತ ಆಹಾರ ಉತ್ಪಾದಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವೈಜ್ಞಾನಿಕವಾಗಿ ಮೌಲ್ಯವರ್ಧನೆ

‘ಸಿರಿಧಾನ್ಯಗಳೊಂದಿಗೆ ಹೆಚ್ಚಿನ ಪೌಷ್ಟಿಕಾಂಶಗಳಿಂದ ಕೂಡಿರುವ ಧಾನ್ಯಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಒಂದು ವರ್ಷದ ಹಿಂದೆ ಮಹಾಂತೇಶ್ವರ ಸ್ವ ಸಹಾಯ ಸಂಘಕ್ಕೆ ಸೇರಿದ ನಂತರ ಸಂಘದಿಂದ ಆರ್ಥಿಕ ನೆರವು ಪಡೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಒತ್ತು ನೀಡಲಾಗಿದೆ. ಈವರೆಗೆ ಸಮಾಧಾನಕರ ಲಾಭ ದೊರೆಯುತ್ತಿದ್ದು ನಮ್ಮೊಂದಿಗೆ ಇನ್ನೂ ನಾಲ್ಕು ಮಹಿಳೆಯರಿಗೆ ಉದ್ಯೋಗ ನೀಡುತ್ತಿವುದು ಹೆಮ್ಮಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಇದೆ’ ಎಂದು ತಮ್ಮ ಉದ್ಯಮದ ಮಾರ್ಗವನ್ನು ತೆರೆದಿಡುತ್ತಾರೆ ರೈತ ಮಹಿಳೆ ಚೆನ್ನಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT