ಹಾಂಗ್‌ಝೌ: ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಏಷ್ಯನ್ ಕ್ರೀಡಾಕೂಟದ ಕಬಡ್ಡಿ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಸುಲಭ ಗೆಲುವು ಸಾಧಿಸಿದವು.
ಬುಧವಾರ ನಡೆದ ಪಂದ್ಯದಲ್ಲಿ ಏಳು ಬಾರಿಯ ಚಾಂಪಿಯನ್ ಪುರುಷರ ತಂಡದವರು 63–26 ರಿಂದ ಗೆದ್ದರೆ, ಮಹಿಳೆಯರು 54–22 ರಿಂದ ಜಯ ಸಾಧಿಸಿದರು.
ಪುರುಷರ ತಂಡದವರು ಏಷ್ಯನ್ ಗೇಮ್ಸ್ ಚಿನ್ನದ ಪದಕ ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ. 2018ರ ಜಕಾರ್ತಾ ಕೂಟದಲ್ಲಿ ಅಗ್ರಸ್ಥಾನದಿಂದ ಜಾರಿ ಕಂಚಿನ ಪದಕ ಗಳಿಸಿದ್ದರು.
ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎದುರಾಳಿಗಳನ್ನು ‘ಆಲೌಟ್’ ಮಾಡುವಲ್ಲಿ ಭಾರತ ತಂಡದವರು ಯಶ ಕಂಡರು. ವಿರಾಮಕ್ಕೂ ಮುನ್ನ ಮೂರು ಸಲ ‘ಆಲೌಟ್’ ಮಾಡಿ 37–9 ರಿಂದ ಮುನ್ನಡೆ ಸಾಧಿಸಿದರು. ಎರಡನೇ ಅವಧಿಯಲ್ಲಿ ಅಲ್ಪ ಹೋರಾಟ ನಡೆಸಿದ ಥಾಯ್ಲೆಂಡ್, ಸೋಲಿನ ಅಂತರ ತಗ್ಗಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಪುರುಷರ ತಂಡದವರು 55–18 ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿದ್ದರು.
ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ ಮಹಿಳಾ ತಂಡದವರೂ ಥಾಯ್ಲೆಂಡ್ ವಿರುದ್ಧ ಉತ್ತಮ ಆರಂಭ ಪಡೆದು ವಿರಾಮದ ವೇಳೆಗೆ 32–9 ರಿಂದ ಮೇಲುಗೈ ಪಡೆದರು. ಎರಡನೇ ಅವಧಿಯಲ್ಲಿ ಮತ್ತೆ 22 ಪಾಯಿಂಟ್ಸ್ ಕಲೆಹಾಕಿ ಸುಲಭವಾಗಿ ಗೆದ್ದರು. ಈ ಗೆಲುವಿನ ಮೂಲಕ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.