ಸೋಮವಾರ, ಮಾರ್ಚ್ 27, 2023
31 °C
ವಿಜಯನಗರ ಜಿಲ್ಲಾಧಿಕಾರಿಯಿಂದ ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ

ಹೊಸಪೇಟೆ: ಶೈಕ್ಷಣಿಕ ವಲಯದಲ್ಲಿ ಎಥೆನಾಲ್‌ ಕಾರ್ಖಾನೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ವಸತಿ ಶಾಲೆ, ಶಾಲಾ–ಕಾಲೇಜು ಒಳಗೊಂಡ ಶೈಕ್ಷಣಿಕ ವಲಯದಲ್ಲಿ ಹಂಪಿ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ 84.06 ಎಕರೆ ಜಮೀನು ಮಂಜೂರು ಮಾಡುವ ಸಂಬಂಧ ವಿಜಯನಗರ ಜಿಲ್ಲಾಧಿಕಾರಿ, ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಶೈಕ್ಷಣಿಕ ವಲಯದ ಜೊತೆಗೆ ನಗರ ಪ್ರದೇಶದೊಳಗೆ ಎಥೆನಾಲ್‌ ಕಾರ್ಖಾನೆ ಸ್ಥಾಪಿಸಲು, ಹಂಪಿ ಶುಗರ್ಸ್‌ಗೆ ಜಮೀನು ಮಂಜೂರು ಮಾಡಲು ಹೊಸಪೇಟೆ ತಹಶೀಲ್ದಾರ್‌ ಮತ್ತು ವಿಜಯನಗರ ಜಿಲ್ಲಾಧಿಕಾರಿ ಇಬ್ಬರೂ ಶಿಫಾರಸು ಮಾಡಿದ್ದಾರೆ.

ಈ ಬಗ್ಗೆ ಕಂದಾಯ ಅಧಿಕಾರಿಗಳು ಕೊಟ್ಟಿರುವ ವರದಿ ಆಧರಿಸಿ ತಹಶೀಲ್ದಾರ್‌, ವಿಜಯನಗರ ಜಿಲ್ಲಾಧಿಕಾರಿಗೆ 2022ರ ಡಿಸೆಂಬರ್‌ 16ರಂದು ಶಿಫಾರಸು ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾಧಿಕಾರಿ, ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಡಿ.20ರಂದು ಪ್ರಸ್ತಾವ ಕಳುಹಿಸಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಾಲ್ಲೂಕಿನ ಜಂಬುನಾಥಹಳ್ಳಿ ಗ್ರಾಮದ 110.26 ಎಕರೆ ಸರ್ಕಾರಿ ಜಾಗದಲ್ಲಿ ಈಗಾಗಲೆ 72.83 ಎಕರೆಯನ್ನು ಹಂಪಿ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಮಂಜೂರು ಮಾಡಿದೆ. ಸರ್ವೇ ನಂಬರ್‌ 11/3ರಲ್ಲಿ 4.14 ಎಕರೆ, ಸರ್ವೇ ನಂಬರ್‌ 113ರಲ್ಲಿ 2.10 ಎಕರೆ, ಸರ್ವೇ ನಂಬರ್‌ 114ರಲ್ಲಿ 77.82 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿದೆ.

ಸರ್ವೇ ನಂಬರ್‌ 105ರಲ್ಲಿ 28.17 ಎಕರೆ ಜಾಗವಿದ್ದು, 5 ಎಕರೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣವಾಗಿದೆ ಹಾಗೂ 3 ಎಕರೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪದವಿಪೂರ್ವ ವಸತಿ ಕಾಲೇಜು ನಿರ್ಮಾಣವಾಗುತ್ತಿದೆ. ಇನ್ನುಳಿದ ಐದು ಎಕರೆಯನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಉದ್ದೇಶಿತ ಶಾಲೆ ನಿರ್ಮಾಣಕ್ಕೆ ಕೊಡಲು ಜಿಲ್ಲಾಧಿಕಾರಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಎಲ್ಲ ಜಮೀನು ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾಗಿದೆ.

ಜಂಬುನಾಥಹಳ್ಳಿ ಗ್ರಾಮದ ಸರ್ವೇ ನಂಬರ್‌ 11/3, 113, 114ರ ಒಟ್ಟು 84.06 ಎಕರೆಯಲ್ಲಿ ಹಂಪಿ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಥೆನಾಲ್‌ ಕಾರ್ಖಾನೆ ಸ್ಥಾಪಿಸಲು ಮಂಜೂರಿಗೆ ಶಿಫಾರಸು ಮಾಡಲಾಗಿದೆ.

ಪ್ರಸ್ತಾವದಲ್ಲೇನಿದೆ?: ಹಂಪಿ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ 7500 ಟಿಸಿಡಿ ಕೇನ್‌ ಶುಗರ್‌ 30 ಎಂವಿ ಕೋ ಜನರೇಷನ್‌ ಮತ್ತು 360 ಕೆಪಿಎಲ್‌ಡಿ ಡಿಸ್ಟಲರಿ ಉತ್ಪಾದಿಸಲು ಹೊಸ ಎಥೆನಾಲ್‌ ಕಾರ್ಖಾನೆ ಸ್ಥಾಪನೆಗೆ ಸರ್ಕಾದ ಆತ್ಮನಿರ್ಭರ್‌ ಭಾರತ ಯೋಜನೆಯಡಿ ಉದ್ಯೋಗ ಮಿತ್ರದಲ್ಲಿ 2022ರ ಅಕ್ಟೋಬರ್‌ 21ರಂದು ನಡೆದ 135ನೇ ರಾಜ್ಯಮಟ್ಟದ ಏಕಗವಾಕ್ಷಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕಲಬುರ್ಗಿ ಆಯುಕ್ತರಿಗೆ ಕಳಿಸಿರುವ ಪ್ರಸ್ತಾವದಲ್ಲಿ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.

ನಗರದ ಮಧ್ಯೆ ಇರುವ ಐಎಸ್‌ಆರ್‌ ಕಾರ್ಖಾನೆಯನ್ನು ಮಾಲಿನ್ಯದ ಕಾರಣ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಉದ್ದೇಶಿತ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದ ಜಮೀನು ನಗರಕ್ಕೆ ಹೊಂದಿಕೊಂಡಿದೆ. ಶೈಕ್ಷಣಿಕ ವಲಯದ ಸಮೀಪವೇ ಇರುವುದರಿಂದ ಇದು ಕೂಡ ಮಾಡಲು ಬರುವುದಿಲ್ಲ ಎನ್ನುವುದು ತಜ್ಞರು, ಹೆಸರು ಹೇಳಲಿಚ್ಛಿಸದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಸ ಮಾರ್ಗಸೂಚಿಯಂತೆ ಕಾರ್ಖಾನೆ ನಡೆಸಲಾಗದ ಕಾರಣ 2016ರಲ್ಲಿ ನಮ್ಮ ಕುಟುಂಬ ಐಎಸ್ಆರ್‌ ಸಕ್ಕರೆ ಕಾರ್ಖಾನೆ ಕ್ರಷಿಂಗ್‌ ನಿಲ್ಲಿಸಿತು’ ಎಂದು ಕಾರ್ಖಾನೆಯ ನಿರ್ದೇಶಕ ಸಿದ್ದಾರ್ಥ ಮೊರಾರ್ಕ ಅವರು ಮಾತನಾಡಿರುವ ವಿಡಿಯೊ ಸಂದೇಶ ಜ. 13ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

 

‘ಕಾರ್ಖಾನೆಯಲ್ಲಿ ಎಥನಾಲ್‌ ಘಟಕ ಸ್ಥಾಪಿಸುವಂತಿಲ್ಲ’

‘ಸಕ್ಕರೆ ಕಾರ್ಖಾನೆಯ ಸುತ್ತಮುತ್ತ 15 ಕಿ.ಮೀ ವ್ಯಾಪ್ತಿಯೊಳಗೆ ಎಥನಾಲ್‌ ಉತ್ಪಾದನಾ ಘಟಕ ಸ್ಥಾಪಿಸುವಂತಿಲ್ಲ’ ಎಂದು ಹೈಕೋರ್ಟ್‌ ಇತ್ತೀಚೆಗೆ 1996, 2021ರ ಕಬ್ಬು ನಿಯಂತ್ರಣ ಆದೇಶ ವಿಶ್ಲೇಷಿಸಿ ತೀರ್ಪು ನೀಡಿದೆ.

ಆಸ್ಕಿನ್ಸ್‌ ಬಯೋ ಫ್ಯುಯೆಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಶ್ರೀ ಬ್ರಹ್ಮಾನಂದಸಾಗರ ಸಕ್ಕರೆ ಕೈಗಾರಿಕೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ್‌ ಗೌಡ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿರುವುದನ್ನು ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು